More

    ನೇತ್ರಾವತಿ ತೀರ ಮತ್ತೆ ಮಲಿನ ಭೀತಿ: ತ್ಯಾಜ್ಯ ಕಟ್ಟಿಗೆ ಸಿಗದ ಮುಕ್ತಿ

    ಉಳ್ಳಾಲ: ಪರಿಸರ ಪ್ರೇಮಿಗಳಿಗೆ ನದಿತೀರ, ಸಾರ್ವಜನಿಕ ಸ್ಥಳಗಳ ರಕ್ಷಣೆ ಚಿಂತೆಯಾದರೆ, ಕಿಡಿಗೇಡಿಗಳಿಗೆ ತ್ಯಾಜ್ಯ ಎಸೆಯಲು ಸ್ಥಳದ ಚಿಂತೆ. ಎಷ್ಟು ಜಾಗೃತಿ ಮೂಡಿಸಿದರೂ ಪರಿಸರ ಸ್ವಚ್ಛತೆ ಅಷ್ಟೊಂದು ಸುಲಭವಲ್ಲ ಎನ್ನುವುದಕ್ಕೆ ನೇತ್ರಾವತಿ ನದಿತಟವೇ ಸಾಕ್ಷಿ.

    ಉಳ್ಳಾಲ ತಾಲೂಕು ವ್ಯಾಪ್ತಿಯ ಬಹುತೇಕ ಪರಿಸರ ತ್ಯಾಜ್ಯ ಮತ್ತು ಕಸದ ಕೊಂಪೆಯಾಗಿದೆ. ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವಾಗ ಮುಖ್ಯವಾಗಿ ಸ್ವಾಗತ ನೀಡುವುದು ರಂಗು ರಂಗಿನ ಸುಂದರವಾಗಿ ಕಟ್ಟಲ್ಪಟ್ಟ ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ತೊಟ್ಟೆ, ಗೋಣಿ ಚೀಲಗಳಾಗಿವೆ. ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆ, ಐ.ಟಿ.ಕಂಪನಿ, ವಿಶ್ವವಿದ್ಯಾಲಯಗಳು ಹೀಗೆ ಪ್ರಮುಖ ಸಂಸ್ಥೆಗಳನ್ನು ಹೊಂದಿರುವ ಉಳ್ಳಾಲ ತಾಲೂಕು ಶೈಕ್ಷಣಿಕ, ಆರೋಗ್ಯ ಕ್ಷೇತ್ರವಾಗಿ ಪರಗಣಿಸಲ್ಪಟ್ಟಿದೆ. ಆದರೂ ದೇಶ ವಿದೇಶಗಳ ಜನರನ್ನು ಸ್ವಾಗತಿಸುವ ತ್ಯಾಜ್ಯರಾಶಿ ಇಲ್ಲಿನ ಘನತೆಯನ್ನು ಮಣ್ಣುಪಾಲು ಮಾಡಿದೆ.

    ನೇತ್ರಾವತಿ ನದಿತಟದ ಪರಿಸ್ಥಿತಿ ಘನಘೋರವಾಗಿದೆ. ಹಲವು ಸಮಯಗಳಿಂದ ಈ ಭಾಗ ಕೋಳಿ ಮತ್ತು ಇತರ ತ್ಯಾಜ್ಯ, ಮನೆ, ಹೋಟೆಲ್‌ಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಇಲ್ಲಿ ದುರ್ನಾತಕ್ಕೆ ತಡೆಯಿಲ್ಲದಂತಾಗಿ ರೋಗ ಉತ್ಪತ್ತಿಯ ತಾಣವಾಗಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ನದಿತಟದಲ್ಲಿ ಎಸೆಯುವ ತ್ಯಾಜ್ಯದ ಕಟ್ಟುಗಳು ನದಿಗೆ ಸೇರಿ ಜಲಚರಗಳ ಹೊಟ್ಟೆ ಸೇರುವ ಜೊತೆಗೆ ನೀರನ್ನು ಮಲಿನಗೊಳಿಸಿ ಬೇಸಿಗೆಯಲ್ಲಿ ನೀರಿನ ಬಣ್ಣವನ್ನೇ ಬದಲಾಯಿಸುತ್ತಿದೆ.

    ಇದನ್ನು ಪರಿಗಣಿಸಿದ ಹಸಿರುದಳ ಮತ್ತು ಆ್ಯಂಟಿ ಪೊಲ್ಯೂಶನ್ ಡ್ರೈ ಫೌಂಡೇಶನ್(ಎಪಿಡಿ) ಜನಜಾಗೃತಿಗೆ ಮುಂದಾಗಿ ಜನವರಿಯಲ್ಲಿ ಒಂದು ವಾರ ತ್ಯಾಜ್ಯ ಎಸೆಯುವ ಕಿಡಿಗೇಡಿಗಳಿಂದ ನದಿತಟ ಕಾಯುವ ಕೆಲಸ ಮಾಡಿದೆ. ಕೊಳೆತು ದುರ್ನಾತ ಬೀರುತ್ತಿದ್ದ, ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳೂ ಹತ್ತಿರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದ ಜಾಗದಿಂದಲೂ ಲೋಡುಗಟ್ಟಲೆ ತ್ಯಾಜ್ಯ ತೆಗೆದು ವಿಲೇವಾರಿ ಮಾಡಿದೆ. ಇದರ ಫಲವಾಗಿ ನೇತ್ರಾವತಿ ತಟ ಸ್ವಚ್ಛತೆಯಿಂದ ಕಂಗೊಳಿಸತೊಡಗಿತು. ಆದರೆ ಕಿಡಿಗೇಡಿಗಳು ಮತ್ತೆ ತ್ಯಾಜ್ಯದ ಕಟ್ಟುಗಳನ್ನು ಎಸೆಯಲು ಶುರುಮಾಡಿದ್ದಾರೆ.

    ಬೆಳಗ್ಗೆ ವಾಹನದಲ್ಲಿ ಕೆಲಸಕ್ಕೆ ಹೋಗುವವರು ಕಸ ಎಸೆಯುವುದಕ್ಕೆ ಪೂರ್ಣ ಮಟ್ಟದಲ್ಲಿ ತಡೆ ಹಾಕಬೇಕೆನ್ನುವ ನೆಲೆಯಲ್ಲಿ ಪರಿಸರ ಪ್ರೇಮಿ, ಹಸಿರುದಳದ ಸದಸ್ಯ ನಾಗರಾಜ ಅಂಚನ್ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದಾರೆ. ಅದರಂತೆ ಕಳೆದ ಮೂರು ತಿಂಗಳಿಂದಲೂ ಬೆಳಗ್ಗೆ 5.30ಕ್ಕೆ ಬಜಾಲ್‌ನ ತಮ್ಮ ಮನೆಯಿಂದ ನೇರವಾಗಿ ನೇತ್ರಾವತಿ ತಟಕ್ಕೆ ಬಂದು ಮೂರುವರೆ ಗಂಟೆ ಕಾವಲು ಕಾಯುತ್ತಿದ್ದಾರೆ. ಇಲ್ಲಿ ತ್ಯಾಜ್ಯ ಎಸೆಯುವುದು ಸಂಪೂರ್ಣ ನಿಲ್ಲಬೇಕು. ಜಿಲ್ಲಾಡಳಿತ ಸಿಸಿ ಕ್ಯಾಮರಾ ಅಳವಡಿಸಬೇಕು. ಅದುವರೆಗೂ ಹೋರಾಟ ಮುಂದುವರಿಸುವುದು ನಾಗರಾಜ್ ಅವರ ಉದ್ದೇಶ.

    ನೇತ್ರಾವತಿ ನೋಡುವ ಸಿಸಿ ಕ್ಯಾಮರಾ!: ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣದ ಬಳಿಕ ಶಾಸಕ ವೇದವ್ಯಾಸ ಕಾಮತ್ ಮುತುವರ್ಜಿಯಲ್ಲಿ ನೇತ್ರಾವತಿಗೆ ಬೇಲಿ ಅಳವಡಿಸಿ, ಸಿಸಿ ಕ್ಯಾಮರಾ ಹಾಕಲಾಗಿದೆ. ಆದರೆ ಸೇತುವೆಯ ಆರಂಭ ಮತ್ತು ಅಂತ್ಯದಲ್ಲಿ ಅಳವಡಿಸಿರುವ ಎರಡು ಸಿಸಿ ಕ್ಯಾಮರಾಗಳೂ ನೇತ್ರಾವತಿ ಸೇತುವೆಗೇ ಸೀಮಿತವಾಗಿದೆ. ಇದರಿಂದಾಗಿ ನದಿತಟದಲ್ಲಿ ತ್ಯಾಜ್ಯ ಎಸೆಯುವ ಕಿಡಿಗೇಡಿಗಳ ಕುಕೃತ್ಯಕ್ಕೆ ಕಡಿವಾಣ ಅಸಾಧ್ಯ ಎನಿಸಿದೆ.

    ಈಗಿರುವ ಸಿಸಿ ಕ್ಯಾಮರಾದಿಂದ ತ್ಯಾಜ್ಯ ತಡೆಯಲು ಸಾಧ್ಯವಿದೆಯೇ ಎನ್ನುವ ಬಗ್ಗೆ ಸ್ಥಳೀಯಾಡಳಿತದ ಅಧಿಕಾರಿಗಳ ಮೂಲಕ ಪರಿಶೀಲಿಸಲಾಗುವುದು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಜಿಲ್ಲಾಡಳಿತದ ಮುಖಾಂತರ ಸಿಸಿ ಕ್ಯಾಮರಾ ಅಳವಡಿಸುವ ಸಂಬಂಧ ಜಿಪಂ ಮುಖ್ಯಾಧಿಕಾರಿ ಬಳಿ ಚರ್ಚಿಸುತ್ತೇನೆ.
    ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ


    ನೇತ್ರಾವತಿ ನದಿ ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ಇಲ್ಲಿ ಎಷ್ಟು ಸ್ವಚ್ಛಗೊಳಿಸಿದರೂ ಜನರು ಸ್ಪಂದಿಸುತ್ತಿಲ್ಲ. ಈ ನಿಟ್ಟಿನಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಬೆಳಗ್ಗೆ ಕಾವಲು ಕಾಯುತ್ತಿದ್ದೇನೆ. ಇಲ್ಲಿಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಅದಕ್ಕೂ ಜನ ಬಗ್ಗದಿದ್ದರೆ ನಮಗೆ ಅನುಮತಿ ಕೊಟ್ಟರೆ ನಾವೇ ಬಲೆ ಹಾಕಲು ಸಿದ್ಧರಿದ್ದೇವೆ.
    ನಾಗರಾಜ ರಾಘವ ಅಂಚನ್, ಪರಿಸರ ಪ್ರೇಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts