More

    ನೆರೆ ಹಾವಳಿ ತಡೆಗೆ ಸರ್ವ ಸಜ್ಜು

    ಕಮಲಾಪುರ: ಭೀಕರ ಮಳೆ, ತುಂಬಿ ಹರಿಯುತ್ತಿರುವ ಹೊಳೆ, ಪ್ರವಾಹದ ಭೀತಿ, ಹೊಳೆಯಲ್ಲಿ ಮುಳುಗಿರುವ ಜನ… ಇಂಥ ಸಂದಿಗ್ಧ ಸ್ಥಿತಿಯಲ್ಲಿ ಸರ್ವ ಸನ್ನದ್ಧವಾದ ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಎಲ್ಲರನ್ನು ರಕ್ಷಿಸುವ ಕಾರ್ಯ. ಕಾಳಜಿ ಕೇಂದ್ರ ಸ್ಥಾಪನೆ, ನಿರಾಶ್ರಿತರ ರಕ್ಷಣೆ, ವೈದ್ಯಕೀಯ ಆರೈಕೆ, ಸ್ಥೈರ್ಯ ತುಂಬುವ ದೃಶ್ಯಗಳು…

    ಕುರಿಕೋಟಾದ ಬೆಣ್ಣೆತೋರಾ ನದಿಯಲ್ಲಿ ಸಂಭ್ಯಾವ ಆಪತ್ತಿನ ವೇಳೆ ಕೈಗೊಳ್ಳಬೇಕಾದ ಸುರಕ್ಷೆ ಕುರಿತು ಗುರುವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಎನ್‌ಡಿಆರ್‌ಎಫ್ ತಂಡ, ಪೊಲೀಸ್, ಅಗ್ನಿಶಾಮಕ, ಆರೋಗ್ಯ ಸೇರಿ ವಿವಿಧ ಇಲಾಖೆ ಸಮನ್ವಯದೊಂದಿಗೆ ಆಯೋಜಿಸಿದ್ದ ನೆರೆ ಹಾವಳಿ ರಕ್ಷಣಾ ಕಾರ್ಯಾಚರಣೆಯ ರಾಜ್ಯಮಟ್ಟದ ಅಣಕು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳು ಇವು.

    ಬೆಣ್ಣೆತೋರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಯಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದರಿಂದ ನೆರೆ ಹಾವಳಿ ವೇಳೆ ನಿಯಂತ್ರಣ ಕುರಿತು ಅಣಕು ಪ್ರದರ್ಶನ ಏರ್ಪಡಿಸಿ, ರಕ್ಷಣಾ ಕಾರ್ಯಚರಣೆ ಬಗ್ಗೆ ಅರಿವು ನೀಡಲಾಯಿತು. ವಿಜಯವಾಡಾದ ೧೦ನೇ ಬಟಾಲಿಯನ್‌ನ ತಂಡ ನೆರೆಯಲ್ಲಿ ಸಿಲುಕಿದ ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ತಂದು ಬಿಟ್ಟರೆ, ವೈದ್ಯಕೀಯ ಉಪಚಾರ, ಚಿಕಿತ್ಸೆ ನೀಡಲಾಯಿತು.

    ಅಣಕು ಪ್ರದರ್ಶನದಲ್ಲಿ ಒಂಬತ್ತು ಜನರನ್ನು ರಕ್ಷಿಸಿದ್ದು, ಓರ್ವನಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಇಬ್ಬರನ್ನು ಮಹಾಗಾಂವ್ ಪಿಎಚ್‌ಸಿಗೆ ಮತ್ತು ೬ ಜನರನ್ನು ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ಗೆ ಕಳುಹಿಸಲಾಗಿದೆ ಎಂದು ವೈದ್ಯಕೀಯ ನೋಡಲ್ ಅಧಿಕಾರಿ ಮತ್ತು ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ ಮಾಹಿತಿ ನೀಡಿದರು.

    ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಎಸ್.ಡಿ.ಅವಟಿ ನೇತೃತ್ವದ ಪಶು ವೈದ್ಯರ ತಂಡ ರಕ್ಷಿಸಿದ ಜಾನುವಾರುಗಳಿಗೆ ತಾತ್ಕಾಲಿಕ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು. ಕಾಳಜಿ ಕೇಂದ್ರವನ್ನು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ನಿರ್ವಹಿಸಿದರು.

    ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಭೇಟಿ ನೀಡಿ, ಕಾರ್ಯಾಚರಣೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದಿಸಿದರು. ಅಧಿಕಾರಿಗಳೊಂದಿಗೆ ಸ್ವತಃ ಬೋಟ್‌ನಲ್ಲಿ ಸಂಚರಿಸಿ, ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದರು.

    ಹೆಚ್ಚುವರಿ ಎಸ್‌ಪಿ ಶ್ರೀನಿಧಿ, ಉಪ ವಿಭಾಗದ ಸಹಾಯಕ ಆಯುಕ್ತೆ ರೂಪಿಂದರ್ ಕೌರ್, ತಹಸೀಲ್ದಾರ್ ಮೊಸೀನ್ ಅಹ್ಮದ್, ಡಿಐಸಿ ಜಂಟಿ ನಿರ್ದೇಶಕ ಸತೀಷಕುಮಾರ, ಡಿಯುಡಿಸಿ ಪಿ.ಡಿ.ಮುನಾವರ್ ದೌಲಾ ಇತರರಿದ್ದರು.

    ರಕ್ಷಣೆ ಕಾರ್ಯಾಚರಣೆ ಯಶಸ್ವಿ: ಅಣಕು ಪ್ರದರ್ಶನದ ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿದ ವಿಜಯವಾಡಾದ ಎನ್‌ಡಿಆರ್‌ಎಫ್ ೧೦ನೇ ಬಟಾಲಿಯನ್ ಕಮಾಂಡರ್ ರಾಬಿನ್ ಮಾತನಾಡಿ, ಜಿಲ್ಲಾಡಳಿತದಿಂದ ಕರೆ ಬಂದ ಕೂಡಲೇ ನಮ್ಮ ತಂಡ ಧಾವಿಸಿ, ನೆರೆ ಹಾವಳಿ ಸ್ಥಳದಲ್ಲಿ ಬೀಡಾರ ಹೂಡಿ, ಸಿಲುಕಿದ ಜನರನ್ನು ರಕ್ಷಿಸಿದ್ದು, ಸ್ಥಳೀಯ ಜನರ ಸಹಕಾರ ಅಪಾರ ಎಂದು ಹೇಳಿದರು.

    ಅಣಕು ಪ್ರದರ್ಶನದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಎನ್‌ಡಿಆರ್‌ಎಫ್, ಅಗ್ನಿಶಾಮಕ, ಹೋಮ್ ಗಾರ್ಡ್ ಸಮನ್ವಯ ಸಾಧಿಸಿ ರಕ್ಷಣೆ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ. ಒಳಾಡಳಿತ ಭಾಗದಲ್ಲಿ ನೈಸರ್ಗಿಕ ವಿಕೋಪ, ವಿಪತ್ತು ಎದುರಾದಾಗ ಜನರ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸಿದ್ಧವಾಗಿರುತ್ತದೆ. ಅಣಕು ಪ್ರದರ್ಶನ ಪೊಲೀಸ್ ಸಿಬ್ಬಂದಿಗೆ ಅನುಕೂಲಕರವಾಗಿದೆ.
    | ಅಡ್ಡೂರು ಶ್ರೀನಿವಾಸುಲು ಜಿಲ್ಲಾ ಪೊಲೀಸ್ ಅಧೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts