More

    ಕಾಲಾಪಾನಿ ವಿಷಯವಾಗಿ ಮಾತುಕತೆಗೆ ಬನ್ನಿ, ನೇಪಾಳದ ಧಮ್ಕಿ

    ನವದೆಹಲಿ: ಒಂದೆಡೆ ಚೀನಾ ಲಡಾಖ್​ ಪ್ರದೇಶದಲ್ಲಿ ಸೇನೆ ಜಮಾವಣೆ ಮಾಡಿ ಯುದ್ಧೋನ್ಮಾದ ಪ್ರದರ್ಶಿಸುತ್ತಿದ್ದರೆ, ಇನ್ನೊಂದೆಡೆ ಪುಟಾಣಿ ರಾಷ್ಟ್ರ ನೇಪಾಳ ಭಾರತದ ವಿರುದ್ಧ ಬಾಹುಬಲ ಪ್ರದರ್ಶನಕ್ಕೆ ಮುಂದಾಗಿದೆ.

    ಕಾಲಾಪಾನಿ ಗಡಿ ವಿವಾದವನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗೆ ಮುಂದಾಗುವಂತೆ ಭಾರತಕ್ಕೆ ಧಮ್ಕಿ ಕೊಟ್ಟಿದೆ. ಜತೆಗೆ, ಕಾಲಾಪಾನಿ, ಲಿಪುಲೇಖ್​ ಮತ್ತು ಲಿಂಪಿಯಾಧುರಾ ತನ್ನ ಪ್ರದೇಶಗಳೆಂದು ಹೊಸದಾಗಿ ರೂಪಿಸಿರುವ ಭೂನಕ್ಷೆಯನ್ನು ಅನುಮೋದಿಸುವ ನಿಟ್ಟಿನಲ್ಲಿ ಸಂವಿಧಾನಿಕ ತಿದ್ದುಪಡಿ ತರಲು ಸಂಸತ್​ನಲ್ಲಿ ಮಸೂದೆಯನ್ನೂ ಮಂಡಿಸಿ, ಭಾರತದ ಮೇಲೆ ಒತ್ತಡ ಹೇರಲು ಮುಂದಾಗಿದೆ.

    ನೇಪಾಳದ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್​ ಹೊಸ ಭೂನಕ್ಷೆ ಅನುಮೋದಿಸುವ ಸಂವಿಧಾನಿಕ ತಿದ್ದುಪಡಿ ತರುವ ವಿಷಯವಾಗಿ ನಿರ್ಧರಿಸಲು ಹೆಚ್ಚಿನ ಸಮಯಾವಕಾಶ ಬೇಕು ಎಂದು ಕೋರಿದ್ದರೆ, ಮಹದೇಶಿ ಪಕ್ಷದವರು ಈ ವಿಷಯವಾಗಿ ತಮಗಿರುವ ಹಲವು ಅನುಮಾನಗಳನ್ನು ಮೊದಲು ಪರಿಹರಿಸುವಂತೆ ಪ್ರಧಾನಿ ಕೆ.ಪಿ. ಓಲಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂವಿಧಾನಿಕ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಲು ಪ್ರಧಾನಿ ಕೆ.ಪಿ. ಓಲಿಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ಭಾರತ-ಚೀನಾ ಗಡಿ ಘರ್ಷಣೆ: ಪ್ರಧಾನಿ ಮೋದಿಗೆ ಕರೆ ಮಾಡಿ ಡೊನಾಲ್ಡ್​ ಟ್ರಂಪ್​ ಚರ್ಚಿಸಿದ್ದೇನು?

    ವಿಶ್ವಾಸ ಮತ್ತು ನಂಬಿಕೆಯ ವಾತಾವರಣ ಸೃಷ್ಟಿಸಿ: ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತಿರುವ ಭಾರತ ಈ ವಿಷಯವಾಗಿ ತುಂಬಾ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ಅತ್ಯಂತ ಸೂಕ್ಷ್ಮ ಹಾಗೂ ಆತ್ಮಾಭಿಮಾನದ ವಿಷಯವಾಗಿ ನೆರೆಹೊರೆ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲು ಭಾರತ ಬದ್ಧವಾಗಿದೆ. ಇದಕ್ಕಾಗಿ ಅಗತ್ಯವಾದ ವಿಶ್ವಾಸಮಯ ಹಾಗೂ ನಂಬಿಕಸ್ಥ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಇದೊಂದು ನಿರಂತರ ಪ್ರಕ್ರಿಯೆ ಆಗಿರುವುದರಿಂದ ಈ ವಿಷಯವಾಗಿ ರಚನಾತ್ಮಕ ಮತ್ತು ಸಕಾರಾತ್ಮಕ ಕ್ರಮಗಳ ಅವಶ್ಯಕತೆ ಇದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್​ ಶ್ರೀವಾಸ್ತವ ಹೇಳಿದ್ದಾರೆ.

    ವಿದೇಶಾಂಗ ಕಾರ್ಯದರ್ಶಿ ಹರ್ಷ್​ ಶ್ರಿಂಗ್ಲಾ ಭಾರತದಲ್ಲಿನ ನೇಪಾಳದ ರಾಯಭಾರಿ ನೀಲಂಬರ್​ ಆಚಾರ್ಯ ಅವರನ್ನು ಎರಡು ಬಾರಿ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಉತ್ತರ) ಹಾಗೂ ನೇಪಾಳ ವಿಷಯಗಳ ಉಸ್ತುವಾರಿ ಪಿಯೂಶ್​ ಶ್ರೀವಾಸ್ತವ ಕೂಡ ನೇಪಾಳ ರಾಯಭಾರಿ ಜತೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ.

    ಜಮ್ಮು ಮತ್ತು ಕಾಶ್ಮೀರವನ್ನು ಎರಡು ಭಾಗಗಳಾಗಿ ವಿಂಗಡಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಹಾಗೂ ಲಡಾಖ್​ ಕೇಂದ್ರಾಡಳಿತ ಪ್ರದೇಶ ರಚಿಸಿದ್ದ ಭಾರತ ಕಳೆದ ನವೆಂಬರ್​ನಲ್ಲಿ ಹೊಸ ಭೂನಕ್ಷೆಯನ್ನು ಪ್ರಕಟಿಸಿತ್ತು. ಇದರಲ್ಲಿ ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್​ ಪ್ರದೇಶ ಭಾರತಕ್ಕೆ ಸೇರಿದ್ದು ಎಂದು ಹೇಳಿತ್ತು. ಅಂದಿನಿಂದಲೂ ನೇಪಾಳ ಕಾಲಾಪಾನಿ ವಿವಾದದ ಬಗ್ಗೆ ಮಾತುಕತೆಗೆ ಮುಂದಾಗುವಂತೆ ಒತ್ತಾಯಿಸುತ್ತಲೇ ಇತ್ತು ಎನ್ನಲಾಗಿದೆ.

    ಹುಟ್ಟುಹಬ್ಬದಂದು ರೆಬೆಲ್ ಸ್ಟಾರ್ ನೆನಪುಗಳು: ಬೇರೆ ಧೈರ್ಯ ಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts