More

    ಮೂಲಸೌರ್ಕಗಳಿಲ್ಲದೆ ಜನರ ಪರದಾಟ ; ನೆಲಮಂಗಲದ ಅಡೇಪೇಟೆಗೆ ಬೇಕಿದೆ ಕಾಯಕಲ್ಪ

    ನೆಲಮಂಗಲ: ಸೂಕ್ತ ರಸ್ತೆಯಿಲ್ಲ, ಚರಂಡಿ ದುರಸ್ತಿ ಕಂಡು ಎಷ್ಟೋ ವರ್ಷವಾಗಿದೆ, ಕುಡಿಯುವ ನೀರಿಗೂ ಪರದಾಟ, ಬೀದಿ ದೀಪ ಉದ್ಯಾನಗಳಿದ್ದರೂ ನಿರ್ವಹಣೆಗಳಿಲ್ಲ. ಹೀಗೆ ಇಲ್ಲಗಳೇ ತುಂಬಿರುವ ನಗರಸಭೆ ವ್ಯಾಪ್ತಿಯ 6ನೇ ವಾರ್ಡ್ ಸಮಸ್ಯೆಗಳ ಆಗರವಾಗಿದೆ.

    ಈ ವಾರ್ಡ್ ನಗರದ ಅಡೇಪೇಟೆಯ ಜನರಿಗೆ ಮೂಲ ಸೌಕರ್ಯ ಮರೀಚಿಕೆ ಎನಿಸಿದೆ, ಅಡೇಪೇಟೆಗೆ ವಿವಿಧ ಬಡಾವಣೆಗಳಿಂದ ಸಂಚಾರ ಕಲ್ಪಿಸುವ ಹಲವು ರಸ್ತೆಗಳು ಹದ್ದಗೆಟ್ಟಿದೆ. ಅದೇ ವಾರ್ಡ್‌ನಲ್ಲಿ ನಗರದ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಹಾದುಹೋಗಿದ್ದು ಕಲುಷಿತ ನೀರಿನಿಂದ ಕಾಲುವೆಯ ಅಕ್ಕಪಕ್ಕದ ನಿವಾಸಿಗಳು ಅನಾರೋಗ್ಯದಿಂದ ಬಳಲುವಂತಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ನಗರಸಭೆಯವರಿಗೆ ದೂರಿದರೂ ಯಾವುದೇ ಪ್ರಯೋಜವಾಗಿಲ್ಲ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.

    ಕಸದ ಸಮಸ್ಯೆಗೆ ಮುಕ್ತಿ ಇಲ್ಲ: ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದು ಈ ಭಾಗದ ಜನರ ಬಹುಮುಖ್ಯ ದೂರಾಗಿದೆ. ನಗರದ ಕೆಲ ಮಾಂಸದಂಗಡಿಯ ತ್ಯಾಜ್ಯವನ್ನು ರಾಜಕಾಲುವೆ ಬಳಿ ಎಸೆಯುತ್ತಿದ್ದು, ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಸಮರ್ಪಕ ಕಸ ವಿಲೇವಾರಿ, ಚರಂಡಿ ಹಾಗೂ ಸ್ವಚ್ಛತೆ ಇಲ್ಲದೆ ಬಡಾವಣೆ ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಮಳೆಗಾಲದಲ್ಲಿ ನರಕ: ಕಿರಿದಾರ ರಸ್ತೆಗಳನ್ನು ಹೊಂದಿರುವ ಬಡಾವಣೆಯಲ್ಲಿ ಶೌಚಗೃಹಗಳನ್ನು ನಿರ್ಮಿಸಿಕೊಳ್ಳಲೂ ಜಾಗವಿಲ್ಲದಂತಾಗಿದೆ. ಚರಂಡಗಳಲ್ಲಿ ಸರಾಗವಾಗಿ ನೀರು ಹರಿಯುತ್ತಿಲ್ಲವಾದ್ದರಿಂದ ಮಳೆಗಾಲದಲ್ಲಿ ನರಕದ ದರ್ಶನವಾಗುತ್ತದೆ. ಜನಪ್ರನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸದೇ ಇರುವುದು ಈ ವಾರ್ಡ್ ಜನರ ದುರಂತ ಎಂಬಂತಾಗಿದೆ.

    ಕುಸಿಯುವ ಹಂತದಲ್ಲಿ ಸೇತುವೆ:ಈ ಹಿಂದೆ ಪಟ್ಟಣಪಂಚಾಯಿತಿ ಇದ್ದ ವೇಳೆ ರಾಜಕಾಲುವೆ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಮಾಣ ಮಾಡಿದ್ದ ಸೇತುವೆ ಕುಸಿಯವ ಹಂತಕ್ಕೆ ಹೋಗಿದೆ. ನಿತ್ಯ ಜನತೆ ಭಯದ ವಾತಾವರಣದಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಬಡಾವಣೆಗಳ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ಇದೆ. ಇತ್ತೀಚೆಗೆ ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಂತು ಮನೆಗಳಿಗೆ ನುಗ್ಗಿದ ಅವಾಂತರವೇ ಸೃಷ್ಟಿಸಿತ್ತು. ಚರಂಡಿಗಳನ್ನು ಒತ್ತುವರಿ ಮಾಡಿಕೊಂಡಿದ್ದು ಸಮಸ್ಯೆಗೆ ಕಾರಣವಾಗಿದೆ. ಸೂಕ್ತ ಕಸ ವಿಲೇವಾರಿಗೆ ಜಾಗವಿಲ್ಲದೇ ಜನರು ರಸ್ತೆಬದಿಯಲ್ಲಿ ಬಿಸಾಡುತ್ತಿದ್ದಾರೆ. ಅಧಿಕಾರಿಗಳು ಸಮಸ್ಯೆಗೆ ಪರಿಹಾರ ದೊರಕಿಸಬೇಕು.
    ರಮೇಶ್, ಬಡಾವಣೆ ನಿವಾಸಿ

    ನಮ್ಮ ವಾರ್ಡ್ ಸಮಸ್ಯೆಗಳ ಆಗರವಾಗಿದ್ದು ಸಾಧ್ಯವಾದಷ್ಟು ಮಟ್ಟಿಗೆ ಬಗೆಹರಿಸುವ ಕೆಲಸ ಮಾಡಿದ್ದೇನೆ. ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಸೇರಿ ವಿವಿಧ ಸಮಸ್ಯೆಗಳನ್ನು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ನಗಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಭಿವೃದ್ಧಿ ಕೆಲಸ ಮಾಡಬೇಕಿದೆ.
    ಗಂಗಾಧರ್‌ರಾವ್, ನಗರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts