More

    ನೆಹರು ಮೈದಾನದ ಸುತ್ತ ಬಿಗು ಭದ್ರತೆ

    ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸೆಂಟ್ರಲ್ ಕಮಿಟಿ ನಗರದ ನೆಹರು ಮೈದಾನದಲ್ಲಿ ಶನಿವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಮೈದಾನದ ಸುತ್ತ ನಾಲ್ಕು ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್), ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ತುಕಡಿಗಳ ಸಹಿತ ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

    ಅನುಮತಿ ನಿರಾಕರಿಸಿದರೂ ಕಾನೂನು ಉಲ್ಲಂಘಿಸಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಲಾಗಿದೆ ಎನ್ನುವ ಮಾಹಿತಿ ಪೊಲೀಸರಿಗೆ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಿಗು ಭದ್ರತೆ ಮಾಡಿದ್ದರು. ಡಿ.19ರಂದು ಪೊಲೀಸರ ಸಂಖ್ಯೆ ಕಡಿಮೆ ಇದ್ದುದರಿಂದ ಪ್ರತಿಭಟನಾಕಾರರನ್ನು ತಕ್ಷಣಕ್ಕೆ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಇದನ್ನು ಮನಗಂಡು ಗರಿಷ್ಠ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
    ಪೊಲೀಸ್ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಬಂದರು, ಸ್ಟೇಟ್‌ಬ್ಯಾಂಕ್ ಪರಿಸರದಲ್ಲೂ ಪೊಲೀಸರನ್ನು ನಿಯೋಜಿಸಿ, ಗಸ್ತು ಹೆಚ್ಚಿಸಲಾಗಿತ್ತು. ಇಷ್ಟೊಂದು ಪೊಲೀಸರು ಮೈದಾನದ ಸುತ್ತ ನಿಯೋಜನೆಗೊಂಡಿರುವುದನ್ನು ಕಂಡ ಸಾರ್ವಜನಿಕರು ಅಚ್ಚರಿಗೊಂಡರು.

    ಪೌರತ್ವ ಕಾಯ್ದೆ ಪರ ಸಮಾವೇಶ
    ಮುಂದೂಡಲು ಆಯುಕ್ತರ ಸೂಚನೆ:
    ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರದ ನೆಹರು ಮೈದಾನದಲ್ಲಿ ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಮಂಗಳೂರು ನಗರ ಹೊರತುಪಡಿಸಿ ಉಳಿದೆಡೆ ಅವಕಾಶ ನೀಡಲಾಗಿದೆ. ಕಾನೂನು ಪರಿಮಿತಿಯಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅವಕಾಶ ನೀಡುತ್ತೇವೆ. ಜ.12ರಂದು ಪೌರತ್ವ ಕಾಯ್ದೆ ಪರ ನಡೆಸಲು ಉದ್ದೇಶಿಸಿರುವ ಸಮಾವೇಶವನ್ನು ಮುಂದೂಡುವಂತೆ ಸಂಘಟಕರಿಗೆ ತಿಳಿಸಲಾಗಿದೆ ಎಂದು ಎಂದು ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್.ತಿಳಿಸಿದ್ದಾರೆ.

    ಸಾಕ್ಷಾೃಧಾರವಿದ್ದರೆ ಕಠಿಣ ಕ್ರಮಕ್ಕೆ ಎಡಿಜಿಪಿ ಸೂಚನೆ
    ಸಿಎಎ ವಿರೋಧಿಸಿ ನಡೆದ ಗಲಭೆಯಲ್ಲಿ ತಪ್ಪಿತಸ್ಥರ ಬಗ್ಗೆ ಸೂಕ್ತ ಸಾಕ್ಷಾೃಧಾರ ಸಂಗ್ರಹಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಸೂಚಿಸಿದ್ದಾರೆ.
    ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಆಂತರಿಕ ಸಭೆ ನಡೆಸಿ, ಗಲಭೆಯ ಬಗ್ಗೆ ಮಾಹಿತಿ ಪಡೆದರು.

    ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಆಯುಕ್ತ ಡಾ.ಹರ್ಷ ಪಿ.ಎಸ್, ಎಸ್ಪಿ ಲಕ್ಷ್ಮೀಪ್ರಸಾದ್, ಡಿಸಿಪಿಗಳಾದ ಅರುಣಾಂಗ್ಶು ಗಿರಿ, ಲಕ್ಷ್ಮೀ ಗಣೇಶ್ ಉಪಸ್ಥಿತರಿದ್ದರು.

    ನಿಷೇಧಾಜ್ಞೆ ಇದ್ದರೂ ಗುಂಪೊಂದು ನಡೆಸಿದ ಪ್ರತಿಭಟನೆ, ಪೊಲೀಸ್ ಲಾಠಿಚಾರ್ಜ್, ಬಳಿಕ ಗಲಭೆ ಹಬ್ಬಿರುವುದು, ಗಲಭೆ ನಿಯಂತ್ರಿಸಲು ಕೈಗೊಂಡ ಕ್ರಮಗಳು ಹಾಗೂ ಗೋಲಿಬಾರ್ ನಡೆಸಬೇಕಾದ ಅನಿವಾರ್ಯತೆಯನ್ನು ಎಡಿಜಿಪಿಗೆ ಮಂಗಳೂರು ಪೊಲೀಸರು ಮನದಟ್ಟು ಮಾಡುವ ಪ್ರಯತ್ನ ನಡೆಸಿದರು. ಗಲಭೆಯ ಕುರಿತು ಸಂಗ್ರಹಿಸಿರುವ ಅಮೂಲಾಗ್ರ ಸಾಕ್ಷ್ಯಗಳನ್ನು ಎಡಿಜಿಪಿ ಮುಂದಿರಿಸಿದ್ದು, ಅದನ್ನು ಅಮರ್ ಕುಮಾರ್ ಪಾಂಡೆ ಅವಲೋಕಿಸಿದರು.

    ಘಟನೆಯ ವಿಡಿಯೋ, ಸಿಸಿ ಟಿವಿ ದಾಖಲೆ ಹಾಗೂ ಜಾಲತಾಣಗಳಲ್ಲಿ ಬಂದಿರುವ ಕೆಲವು ಪ್ರಚೋದನಾಕಾರಿ ಸಂದೇಶಗಳನ್ನು ಪೊಲೀಸರು ತೋರಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಸಾಕ್ಷ್ಯ ಕಲೆಹಾಕಿರುವುದನ್ನು ಗಮನಕ್ಕೆ ತರಲಾಯಿತು. ಹಿಂಸಾಚಾರ ಘಟನೆ ನಡೆದ ರಾತ್ರಿ ಖಾಸಗಿ ಆಸ್ಪತ್ರೆಗೆ ಪೊಲೀಸರು ನುಗ್ಗಬೇಕಾದ ಸಂದರ್ಭವನ್ನೂ ವಿವರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts