More

    ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ, ಚಿಕಿತ್ಸೆ ಸಿಗದೆ 7 ತಿಂಗಳ ಮಗು ಸಾವು

    ರಾಮನಗರ: ಉಸಿರಾಟ ಸಮಸ್ಯೆ ಕಾಣಿಸಿಕೊಂಡ 7 ತಿಂಗಳ ಕಂದಮ್ಮನನ್ನು ಹೆಗಲ ಮೇಲೆ ಹೊತ್ತುಕೊಂಡು ತಾಯಿ ಮತ್ತು ಅಜ್ಜಿ ಐದಾರು ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಕ್ಕಿಲ್ಲ. ವೈದ್ಯರ ನಿರ್ಲಕ್ಷ್ಯಕ್ಕೆ ಏನೂ ಅರಿಯದ ಮಗು ಅಮ್ಮ-ಅಜ್ಜಿಯ ಮಡಿಲಲ್ಲೇ ಪ್ರಾಣಬಿಟ್ಟಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

    ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಪೇಟೆಚೇರಿ ನಿವಾಸಿ ಪ್ರದೀಪ್ ಮತ್ತು ನಂದಿನಿ ಅವರ 7 ತಿಂಗಳ ಹೆಣ್ಣುಮಗುವಿಗೆ ಇಂದು(ಸೋಮವಾರ) ಬೆಳಗ್ಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೇ ಮಗುವಿನ ತಾಯಿ ಮತ್ತು ಅಜ್ಜಿ ಇಬ್ಬರೂ ಮಗುವನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಲ್ಲಿನ ಸಿಬ್ಬಂದಿ, ‘ಮಕ್ಕಳ ವೈದ್ಯರಿಲ್ಲ. ಬೇರೆಡೆಗೆ ಕರೆದುಕೊಂಡು ಹೋಗಿ’ ಎಂದು ವಾಪಸ್​ ಕಳಿಸಿದ್ದಾರೆ.

    ಇದನ್ನೂ ಓದಿರಿ ‘ಅಪ್ಪ.. ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?’ ಎಂದ ಮಗ ಬಾರದ ಲೋಕಕ್ಕೆ ಸೇರಿಯೇಬಿಟ್ಟ!

    ಸಾರ್ವಜನಿಕ ಆಸ್ಪತ್ರೆಯಿಂದ ಹೊರಟ ಅಮ್ಮ-ಮಗಳು ಮಗು ಎತ್ತಿಕೊಂಡು ನಗರದ ಮಕ್ಕಳ ತಜ್ಞ ರಾಜಣ್ಣ ಬಳಿ ಹೋಗಿದ್ದು, ‘ಮಗುವಿನ ಸ್ಥಿತಿ ಗಂಭೀರವಾಗಿದೆ. ಬೇರೆಡೆ ಕರೆದುಕೊಂಡು ಹೋಗಿ’ ಎನ್ನುವ ಮೂಲಕ ಅಲ್ಲಿಂದಲೂ ಅವರನ್ನು ಸಾಗಹಾಕಿದ್ದಾರೆ.

    ಅಲ್ಲಿಂದ ನಗರದ ಬಿ.ಜಿ.ಲಿಂಗೇಗೌಡ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದು, ಪರೀಕ್ಷೆ ನಡೆಸಿದ ವೈದ್ಯರು ಮಗು ಸತ್ತಿರುವುದಾಗಿ ತಿಳಿಸಿದ್ದಾರೆ. ನಂತರ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಮಗು ಬದುಕಿಲ್ಲ ಎಂದಿದ್ದಾರೆ.

    ಆರಂಭದಲ್ಲೇ ಮಗುವಿಗೆ ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿದ್ದು, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ್ದರಿಂದಲೇ ಮಗು ಸತ್ತಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಇದ್ದೊಬ್ಬ ಮಗಳನ್ನೂ ಕಳೆದುಕೊಂಡೆವು ಎಂದು ಮೃತ ಮಗುವಿನ ಪಾಲಕರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಮೃತ ಮಗುವಿನ ತಂದೆ ಪ್ರದೀಪ್​ ಗಾರೆ ಕೆಲಸ ಮಾಡುತ್ತಾರೆ.

    ಇದನ್ನೂ ಓದಿರಿ ರಾತ್ರಿಯಿಡೀ ಆಟೋದಲ್ಲೇ ನರಳಾಡಿದ ತುಂಬುಗರ್ಭಿಣಿ, ಹೊಟ್ಟೆಯಲ್ಲೇ ಹಸುಗೂಸು ಸಾವು

    ಬೆಂಗಳೂರಿನಲ್ಲಿ ತುಂಬುಗರ್ಭಿಣಿಯೊಬ್ಬರು ನಿನ್ನೆ ತಡರಾತ್ರಿಯಿಂದ ಬೆಳಗ್ಗೆವರೆಗೂ ಸತತ 8 ತಾಸು ಹತ್ತಾರು ಆಸ್ಪತ್ರೆಗಳಿಗೆ ಅಲೆದರೂ ಬೆಡ್​ ಸಿಗಲಿಲ್ಲ. ಹೆರಿಗೆ ನೋವಿನಿಂದ ನರಳಿನರಳಿ ಸುಸ್ತಾಗಿದ್ದ ಆಕೆಗೆ ಆಟೋದಲ್ಲೇ ಹೆರಿಗೆಯಾಗಿದ್ದು, ಹಸುಗೂಸು ಕೂಡ ಬದುಕುಳಿಯಲಿಲ್ಲ. ಈ ದುರ್ಘಟನೆ ಸಂಭವಿಸಿದ ಕೆಲ ಹೊತ್ತಲ್ಲೇ ಚನ್ನಪಟ್ಟಣದಲ್ಲೂ ಚಿಕಿತ್ಸೆ ಸಿಗದೆ 7 ತಿಂಗಳ ಕಂದಮ್ಮ ಸಾವಿಗೀಡಾಗಿದ್ದು, ರಾಜ್ಯದ ದುಸ್ಥಿತಿಯನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.

    ಜನರ ಪ್ರಾಣ ಉಳಿಸಬೇಕಿದ್ದ ಆಸ್ಪತ್ರೆಗಳೇ ಕೈಕಟ್ಟಿ ಕೂತರೇ ಏನು ಹೇಳೋದು? ಇನ್ನಾದರೂ ಇಂತಹ ಅವಘಡ ಸಂಭವಿಸದಂತೆ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ. ಕೇವಲ ಕೋವಿಡ್​ ಸೋಂಕಿನ ಬಗ್ಗೆಯಷ್ಟೇ ಗಮನ ಹರಿಸಿದರೆ ಸಾಲದು, ಇತರ ಆರೋಗ್ಯ ಸಮಸ್ಯೆಗೂ ಸೂಕ್ತ ಚಿಕಿತ್ಸೆ ಸಿಗುವ ವ್ಯವಸ್ಥೆ ಆಗಬೇಕಿದೆ.

    ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಗದೆ ಮಗು ಸಾವು; ಸಿಎಂ ಮನೆ ಬಳಿ ತಂದೆ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts