More

    ಕುಡಿಯುವ ನೀರಿನ ಸಮಸ್ಯೆ ಜಟಿಲ, ಸಾಕಾರಗೊಳ್ಳದ ಶಾಶ್ವತ ನೀರಾವರಿ ಯೋಜನೆ

    ವಿ.ಮಂಜುನಾಥ್ ಸೂಲಿಬೆಲೆ
    ಹೊಸಕೋಟೆ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಜಟಿಲವಾಗುತ್ತಿದ್ದು, ಸ್ಥಳೀಯ ಆಡಳಿತ ಖಾಸಗಿ ಬೋರ್‌ವೆಲ್ ಮೂಲಕ ನೀರು ಖರೀದಿ ಮಾಡುವ ಪರಿಸ್ಥಿತಿ ಉದ್ಬವವಾಗಿದೆ.

    ಬೇಸಿಗೆ ಪ್ರಾರಂಭದ ದಿನಗಳಲ್ಲೆ ತಾಲೂಕಿನ 7 ಗ್ರಾಮ ಪಂಚಾಯಿತಿಗಳ 11 ಗ್ರಾಮಗಳಲ್ಲಿ ತೀವ್ರ ಸಮಸ್ಯೆ ಉಲ್ಬಣವಾಗಿದ್ದು, ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತಾಗಿದೆ.

    ಹಲವಾರು ಗ್ರಾಮಗಳಲ್ಲಿ ಈ ಹಿಂದಿನಿಂದಲೂ ನೀರಿನ ಸಮಸ್ಯೆ ಕಂಡುಬಂದಿದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
    ತಾಲೂಕಿನ ಹೆತ್ತಕ್ಕಿ ಗ್ರಾಪಂ ವ್ಯಾಪ್ತಿಯ ಲಿಂಗಾಪುರ, ಹೆತ್ತಕ್ಕಿ, ಓಬಳಹಳ್ಳಿ, ಗಿಡ್ಡಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯ ಸಿದ್ದೇನಹಳ್ಳಿ, ಓರೋಹಳ್ಳಿ ಗ್ರಾಪಂ ವ್ಯಾಪ್ತಿಯ ಓರೋಹಳ್ಳಿ, ಅಂಬಲೀಪುರ, ದೊಡ್ಡತಗ್ಗಲಿ, ಮುಗಬಾಳ, ಖಾಜಿಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಕಟ್ಟಿಗೇನಹಳ್ಳಿ, ತರಬಹಳ್ಳಿ, ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಿಮಾಕನಪುರ, ಮುತ್ಸಂದ್ರ ಗ್ರಾಪಂ ವ್ಯಾಪ್ತಿಯ ಹೆಮ್ಮಂಡಹಳ್ಳಿ ಗ್ರಾಮಗಳಲ್ಲಿ ಒಂದು ವರ್ಷದಿಂದ ನೀರಿನ ಸಮಸ್ಯೆ ಉಲ್ಬಣಗೊಂಡು ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರತಿದಿನ 2ರಿಂದ 3 ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರತಿ ಟ್ಯಾಂಕರ್‌ಗೆ 450 ರೂ., ನಿಗದಿಪಡಿಸಲಾಗಿದೆ.

    ಶಾಶ್ವತ ನೀರಾವರಿ ಯೋಜನೆ ಇಲ್ಲ: ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸಮ್ಮೇತನಹಳ್ಳಿ ಏತನೀರಾವರಿ ಯೋಜನೆ ಅಳವಡಿಕೆ ಮಾಡಿರುವ ಪರಿಣಾಮ ಅಂತರ್ಜಲಮಟ್ಟ ಹೆಚ್ಚಾಗಿ ತುಸು ನೀರಿನ ಸಮಸ್ಯೆ ಸುಧಾರಣೆ ಕಂಡಿದ್ದು, ರೈತಾಪಿ ವರ್ಗ ನಿಟ್ಟುಸಿರು ಬಿಡುವಂತಾಗಿದೆ. ಉಳಿದಂತೆ ಜಡಿಗೇನಹಳ್ಳಿ, ಸೂಲಿಬೆಲೆ, ನಂದಗುಡಿ ಹೋಬಳಿಗೆ ಇದುವರೆಗೂ ಯಾವುದೇ ಶಾಶ್ವತ ನೀರಾವರಿ ಯೋಜನೆ ಸಾಕಾರಗೊಂಡಿಲ್ಲ. ಕೆ.ಸಿ.ವ್ಯಾಲಿ ನೀರನ್ನು ನಂದಗುಡಿ ಹೋಬಳಿ ತಾವರೆಕೆರೆ ಹಾಗೂ ಯಲಚಹಳ್ಳಿ ಕೆರೆಗೆ ಹರಿಸಲಾಗುತ್ತಿದ್ದು, ಕೆಲ ಗ್ರಾಮಗಳಿಗೆ ಅಷ್ಟೆ ಉಪಯೋಗವಾಗಿದೆ.

    ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಪಂಗೆ ಸಲ್ಲಿಸಲಾಗಿದೆ. ವಿಪತ್ತು ಪರಿಹಾರ ನಿಧಿಯಯಲ್ಲಿ ಮಂಜೂರಾಗುವ ಹಣದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದವರೆಗೂ ನೀರಿನ ಸಮಸ್ಯೆ ನಿವಾರಣೆ ಅಸಾಧ್ಯ.
    ಸಿ.ಎಸ್.ಶ್ರೀನಾಥ್‌ಗೌಡ, ತಾಪಂ ಕಾರ್ಯನಿರ್ವಾಹಣಾಧಿಕಾರಿ

    ಶಾಶ್ವತ ನೀರಾವರಿ ಅನುಷ್ಠಾನದ ಬಗ್ಗೆ ಸರ್ಕಾರಗಳು ದಶಕಗಳಿಂದ ಭರವಸೆ ನೀಡುತ್ತಿದೆ. ಸಮಸ್ಯೆ ಬಗೆಹರಿಸುವ ಬಗ್ಗೆ ಅಧಿವೇಶನದಲ್ಲೂ ಚರ್ಚೆ ಮಾಡಿದ್ದೇನೆ. ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಗೆ ಇದುವರೆಗೂ ಅಂತರ್ಜಲ ವೃದ್ಧಿಸುವ ಯಾವುದೇ ಯೋಜನೆ ಸಾಕಾರವಾಗಿಲ್ಲ. ಎಚ್‌ಎನ್ ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ಮೂಲಕ ಕೆರೆಗಳಿಗೆ ನೀರು ಹರಿಸುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು.
    ಶರತ್ ಬಚ್ಚೇಗೌಡ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts