More

    ಎನ್​ಸಿಸಿಗೂ ಶುಕ್ರದೆಸೆ! ಇದು ಇನ್ನು ಪಠ್ಯೇತರ ಅಲ್ಲ, ಪದವಿ ಕೋರ್ಸ್

    • ರಮೇಶ್ ಮೈಸೂರು

    ಯುವ ಪೀಳಿಗೆಯಲ್ಲಿ ಶಿಸ್ತು, ದೇಶಭಕ್ತಿ ಮೂಡಿಸಿ, ಸಶಸ್ತ್ರ ಪಡೆಗಳ ಭಾಗವಾಗಲು ಉತ್ತೇಜಿಸುವ ನ್ಯಾಷನಲ್ ಕೆಡೆಟ್ ಕೋರ್ (ಎನ್​ಸಿಸಿ) ಇನ್ನು ಮುಂದೆ ಪದವಿ ಅಧ್ಯಯನದ ಕೋರ್ಸ್ ಆಗಲಿದೆ. ವಿಶ್ವವಿದ್ಯಾಲಯಗಳಲ್ಲಿ ಎನ್​ಸಿಸಿಯನ್ನು ಒಂದು ಕೋರ್ಸ್ ಆಗಿ ಬೋಧಿಸಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಅವಕಾಶ ನೀಡಿದೆ.

    ಈ ಪ್ರಯತ್ನ ಮೊದಲು ಸಹ ನಡೆದಿತ್ತಾದರೂ ಹಲವು ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಬಂದ ಕಾರಣದಿಂದಾಗಿ ಇದಕ್ಕೆ ಬಲ ಬಂದಿದೆ. ಎನ್​ಸಿಸಿಯನ್ನು ಇನ್ನಷ್ಟು ಜನಪ್ರಿಯಗೊಳಿಸುವ ಹಾಗೂ ಎನ್​ಸಿಸಿಯಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಯುಜಿಸಿ ತಿಳಿಸಿದೆ. ಎನ್​ಇಪಿಯಲ್ಲಿ ಚಾಯ್್ಸ ಬೇಸ್ಡ್ ಕ್ರೆಡಿಟ್ ಸಿಸ್ಟಮ್ೆ (ಸಿಬಿಸಿಎಸ್) ಅವಕಾಶವಿದೆ. ಅದರಂತೆ, ಎನ್​ಸಿಸಿಯನ್ನು ಸಾಮಾನ್ಯ ಐಚ್ಛಿಕ ಕ್ರೆಡಿಟ್ ಕೋರ್ಸ್ ಆಗಿ ಬೋಧಿಸುವಂತೆ ಸೂಚಿಸಿದೆ. ಈ ಮೂಲಕ ಹೆಚ್ಚು ವಿದ್ಯಾರ್ಥಿಗಳು ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಎನ್​ಸಿಸಿ ಕೆಡೆಟ್​ಗಳಿಗೆ ನೀಡುವ ಉದ್ಯೋಗ ಮೀಸಲಾತಿ ಹಾಗೂ ಇತರ ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗಲಿದೆ. ಕೋರ್ಸ್ ಅನುಷ್ಠಾನಕ್ಕೆ ನೆರವಾಗಲು ರಾಜ್ಯಮಟ್ಟದಲ್ಲಿ ಎನ್​ಸಿಸಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

    ಕ್ಯಾಂಪ್ ಚಟುವಟಿಕೆ ವಿಪತ್ತು ನಿರ್ವಹಣೆ ತರಬೇತಿ, ಸಮಾಜ ಸೇವೆ ಹಾಗೂ ಸಾಮುದಾಯಿಕ ಅಭಿವೃದ್ಧಿ ಚಟುವಟಿಕೆಗಳು, ಸೇನಾ ಇತಿಹಾಸ ಬೋಧನೆ ಹಾಗೂ ದೈಹಿಕ ತರಬೇತಿಯನ್ನು ಕ್ಯಾಂಪ್ ಚಟುವಟಿ ಕೆಗಳಲ್ಲಿ ನೀಡಲಾಗುತ್ತದೆ. ಇದಲ್ಲದೆ, ವಿದ್ಯಾರ್ಥಿಗಳು ಡ್ರಿಲ್, ರಾಷ್ಟ್ರೀಯ ಭಾವೈಕ್ಯ, ಶಸ್ತ್ರಾಸ್ತ್ರ ತರಬೇತಿ, ಮ್ಯಾಪ್ ರೀಡಿಂಗ್, ಅಡೆತಡೆಗಳನ್ನು ದಾಟುವುದು, ವಿವಿಧ ಕ್ಷೇತ್ರಿಯ, ಸಮರಭೂಮಿಯ ಚಟುವಟಿಕೆ ಕಲಿಸಲಾಗುತ್ತದೆ.

    ಎನ್​ಸಿಸಿಯ ಧ್ಯೇಯ

    ?ಶಿಸ್ತು, ಚಾರಿತ್ರ್ಯ, ಬಾಂಧವ್ಯ, ಜಾತ್ಯತೀತ ಮನೋಭಾವ, ಸಾಹಸಿ ಗುಣ, ನಿಸ್ವಾರ್ಥ ಮನೋಭಾವ ರೂಪಿಸುವುದು ? ಸಂಘಟಿತ, ಸ್ಪೂರ್ತಿದಾಯಕ, ನಾಯಕತ್ವ ಗುಣ ಬೆಳೆಸುವುದು. ?ದೇಶಸೇವೆಗೆ ಸಜ್ಜಾಗಿರುವಂತೆ ತಯಾರು ಮಾಡುವುದು. ?ಸೇನಾಪಡೆ ಸೇರಲು ಉತ್ತೇಜನ ನೀಡುವುದು.

    ಎನ್​ಸಿಸಿಯಿಂದೇನು ಪ್ರಯೋಜನ?

    ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಎನ್​ಸಿಸಿ ಪ್ರಮುಖ ಪಾತ್ರ ವಹಿಸುವುದಂತೂ ಸತ್ಯ. ಅದರೊಂದಿಗೆ ವೃತ್ತಿಯ ಆಯ್ಕೆಯಲ್ಲಿಯೂ ಹಲವು ಪ್ರಯೋಜನಗಳು ಇದರಿಂದ ಒದಗುತ್ತವೆ. ಶೈಕ್ಷಣಿಕವಾಗಿ ಹೇಳುವುದಾದರೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದಲ್ಲೂ ಎನ್​ಸಿಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ಅನ್ವಯವಾಗುತ್ತದೆ. ಉದ್ಯೋಗದಲ್ಲೂ ಮೀಸಲು ನೀಡಲಾಗುತ್ತದೆ. ಇನ್ನು ಸೇನೆಯಲ್ಲಂತೂ ಇವರಿಗೆ ಆದ್ಯತೆ ಇದ್ದೇ ಇದೆ. ಇದರ ಹೊರತಾಗಿಯೂ ಹಲವು ಸೌಲಭ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಕ ನೀಡಲಾಗುತ್ತದೆ. ಪ್ರೋತ್ಸಾಹಧನ, ಸ್ಕಾಲರ್​ಶಿಪ್​ನಂತಹ ಯೋಜನೆಗಳನ್ನು ರೂಪಿಸಲಾಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಾಧಕರಿಗೆ ವಿಶೇಷ ಮನ್ನಣೆ ದೊರಕುತ್ತದೆ.

    ಕೋರ್ಸ್ ಸ್ವರೂಪ

    ಒಟ್ಟು ಆರು ಸೆಮಿಸ್ಟರ್​ಗಳಾಗಿ ಈ ಕೋರ್ಸ್ ಅನ್ನು ವಿಂಗಡಿಸಲಾಗಿದೆ. ಪ್ರತಿ ಸೆಮಿಸ್ಟರ್​ನಲ್ಲೂ ಥಿಯರಿ, ಪ್ರಾಯೋಗಿಕ ಪಾಠ ಹಾಗೂ ತರಬೇತಿ ಶಿಬಿರ (ಕ್ಯಾಂಪ್) ಇರಲಿವೆ. ವಿದ್ಯಾರ್ಥಿಗಳು ಎರಡು ಕ್ಯಾಂಪಿಂಗ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ವಾಗಿದ್ದು, ಮೊದಲನೇ ಕ್ಯಾಂಪ್​ನ ಅಂಕಗಳನ್ನು ಮೂರನೇ ಸೆಮಿಸ್ಟರ್​ಗೆ ಹಾಗೂ ಮೂರನೇ ಕ್ಯಾಂಪ್​ನ ಅಂಕಗಳನ್ನು ಐದನೇ ಸೆಮಿಸ್ಟರ್​ಗೆ ಪರಿಗಣಿಸ ಲಾಗುತ್ತದೆ ಎಂದು ಯುಜಿಸಿ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನಮೂದಿ ಸಲಾಗಿದೆ.

    ಯುಜಿಸಿ ವ್ಯಾಖ್ಯಾನ

    ಸಮಸ್ಯೆಯನ್ನು ನಿವಾರಿಸುವ ಕೌಶಲ ಹಾಗೂ ವಿಶ್ಲೇಷಣಾ ಚಿಂತನೆಗಳ ಮೂಲಕ ನಿಜ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಸೀಮಿತ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಈ ಕೋರ್ಸ್​ನ ಒಟ್ಟಾರೆ ಉದ್ದೇಶ. ಇದರ ಜತೆಗೆ ಸಣ್ಣ ಸಣ್ಣ ಗುಂಪುಗಳಾಗಿ ಕಾರ್ಯ ನಿರ್ವಹಿಸುವ ಹಾಗೂ ಅದರ ನಾಯಕನಾಗಿ ಮುನ್ನಡೆಸುವ ಗುಣವನ್ನು ಬೆಳೆಸುವ ಗುರಿ ಹೊಂದಲಾಗಿದೆ.

    ನಮ್ಮ ರಾಜ್ಯದಲ್ಲಿ ಏನು ಉತ್ತೇಜನ?

    ಕರ್ನಾಟಕದಲ್ಲಿ ಇತರ ರಾಜ್ಯಗಳಂತೆ ಉದ್ಯೋಗಾವಕಾಶದಲ್ಲಿ ಮೀಸಲು ಇಲ್ಲದಿದ್ದರೂ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ. ಪದವಿ ಶಿಕ್ಷಣದ ನಂತರ ಇದಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬಹುದೆಂಬ ನಿರೀಕ್ಷೆ ಹೊಂದಲಾಗಿದೆ.

    ಡಿಪ್ಲೊಮಾ ಹಾಗೂ ಇತರ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಮೀಸಲು

    ಇಂಜಿನಿಯರಿಂಗ್ ಸೀಟುಗಳಲ್ಲಿ ಕೋಟಾ

    ಬಿಎಸ್​ಸಿ ತೋಟಗಾರಿಕೆ ಸೀಟುಗಳು

    ವೈದ್ಯಕೀಯ ಸೀಟು ಮೀಸಲು

    ಬಿಎಸ್​ಸಿ ನರ್ಸಿಂಗ್/ ಫಿಜಿಯೋಥೆರಪಿ ಸೀಟು ಮೀಸಲು

    ಇದಲ್ಲದೆ, ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ಹಾಗೂ ಇತರ ಪರೇಡ್​ಗಳಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಪ್ರೋತ್ಸಾಹ ಧನ.

    ಉದ್ಯೋಗಾವಕಾಶಗಳು

    ಎನ್​ಸಿಸಿಯಲ್ಲಿ ವಿವಿಧ ಪ್ರಮಾಣಪತ್ರ ಪಡೆದವರಿಗೆ ಪ್ರಸ್ತುತ ವಿವಿಧ ರಾಜ್ಯಗಳಲ್ಲಿ ಉದ್ಯೋಗಾವಕಾಶಗಳಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಹುದ್ದೆಗಳನ್ನೇ ಮೀಸಲು ಇಡಲಾಗಿದೆ. ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ ಮೊದಲಾದೆಡೆ ಉದ್ಯೋಗ ಮೀಸಲಾತಿ ಅನ್ವಯವಾಗುತ್ತದೆ. ನರ್ಸ್​ಗಳ ನೇಮಕಾತಿಯಲ್ಲೂ ಎನ್​ಸಿಸಿ ಅಭ್ಯರ್ಥಿಗಳಿಗೆ ಆದ್ಯತೆ ಇದೆ. ಅಂತೆಯೇ ಕೇರಳದಲ್ಲೂ ಪೊಲೀಸ್, ಕಾರಾಗೃಹ, ಅಬಕಾರಿ, ಅಗ್ನಿಶಾಮಕ ದಳದ ಹುದ್ದೆಗಳಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸಲಾಗಿದೆ. ಇದಲ್ಲದೆ ಆಂಧ್ರಪ್ರದೇಶ, ಹರಿಯಾಣ, ಹಿಮಾಚಲಪ್ರದೇಶ, ಒಡಿಶಾ, ರಾಜಸ್ಥಾನ, ಪಂಜಾಬ್, ಪಶ್ಚಿಮ ಬಂಗಾಳದಲ್ಲೂ ಎನ್​ಸಿಸಿ ಅಭ್ಯರ್ಥಿಗಳಿಗೆ ಸಮವಸ್ತ್ರದ ಹುದ್ದೆಗಳಲ್ಲಿ ಆದ್ಯತೆಯಿದೆ.

    ಶತಮಾನಗಳ ಇತಿಹಾಸ

    ಭಾರತದಲ್ಲಿ ಎನ್​ಸಿಸಿ ಸ್ವಾತಂತ್ರ್ಯಾನಂತರ ರೂಪುಗೊಂಡರೂ, ಜಾಗತಿಕವಾಗಿ ಇದಕ್ಕೆ ನಾಲ್ಕು ಶತಮಾನಗಳ ಇತಿಹಾಸವಿದೆ. ಜರ್ಮನಿಯಲ್ಲಿ 1666ರಲ್ಲಿ ಇದು ಸ್ಥಾಪಿತವಾಯಿತು. ಭಾರತದಲ್ಲಿ 1950ರಲ್ಲಿ ಈ ಕಾಯ್ದೆಯನ್ನು ರಚಿಸಲಾಯಿತು. ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಎನ್​ಸಿಸಿ ಅವಕಾಶ ಕಲ್ಪಿಸುತ್ತದೆ. ರಾಷ್ಟ್ರೀಯ ಸೇನಾ ಅಕಾಡೆಮಿ ಹಾಗೂ ನೌಕಾ ಅಕಾಡೆಮಿ, ವಾಯುಪಡೆ ಅಕಾಡೆಮಿಗಳಲ್ಲಿ ತರಬೇತಿಗೆ ಆಯ್ಕೆಯಾಗಲು ಇದು ಸಹಾಯಕವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts