More

  60 ವರ್ಷವಾದರೂ ಇಲ್ಲ ಸ್ವಂತ ಜಾಗ

  ಕಿರುವಾರ ಎಸ್.ಸುದರ್ಶನ್ ಕೋಲಾರ
  ಜಿಲ್ಲೆಯ ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಹಾಗೂ ಸೈನಿಕರನ್ನು ಸೃಷ್ಟಿ ಮಾಡಲು ಪ್ರಮುಖ ಪಾತ್ರ ವಹಿಸುತ್ತಿರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಕಚೇರಿಗೆ ಸ್ವಂತ ಜಾಗ ಇಲ್ಲದೆ ಇರುವುದರಿಂದ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.

  ರಾಜ್ಯದಲ್ಲಿ 1953ರ ಆ.26ರಂದು ಎನ್‌ಸಿಸಿ ವತಿಯಿಂದ ಪ್ರಥಮ ಪರೇಡ್‌ಗೆ ಆಂದಿನ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಚಾಲನೆ ನೀಡಿದ್ದರು. ಅಂದಿನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎನ್‌ಸಿಸಿ ಕಚೇರಿಗಳನ್ನು ಸ್ಥಾಪಿಸಿ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲಿ 1964ರಲ್ಲಿ 10 ಕರ್ನಾಟಕ ಬಿಎನ್‌ಎನ್‌ಸಿಸಿ ಕಚೇರಿ ಸ್ಥಾಪನೆಯಾಗಿ 59 ವರ್ಷಗಳೇ ಕಳೆದಿದ್ದರೂ ಸ್ವಂತ ಸೂರು ಸೇರಿದಂತೆ ವಿವಿಧ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಇದರಿಂದಾಗಿ ಕೋಲಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಮಾಂಡೆಂಟ್ ಅಧಿಕಾರಿ ಕಚೇರಿಯು ಬೇರೆ ಜಿಲ್ಲೆಗೆ ಸ್ಥಳಾಂತರವಾಗುವ ಆತಂಕ ಮನೆ ಮಾಡಿದೆ.
  ಸ್ವಂತ ಕಟ್ಟಡ ಇಲ್ಲದೆ ಇರುವುದರಿಂದ ಕಚೇರಿಯ ಚಟುವಟಿಕೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇಲ್ಲಿ ಹಣಕಾಸು ವಿಭಾಗ, ಕಮಾಂಡೆಂಟ್ ಅಧಿಕಾರಿ ಕಚೇರಿ, ಕಮಾಂಡೆಂಟ್ ಕಚೇರಿ ಹೀಗೆ ವಿವಿಧ ಕಚೇರಿಗಳು ಒಂದೇ ಕಟ್ಟಡಗಳಲ್ಲಿ ನಡೆಸುತ್ತಿರುವುದರಿಂದ ಇಕ್ಕಟ್ಟಾಗಿದೆ. ಆದರೆ ಆಳುವ ಸರ್ಕಾರಗಳು ಜಿಲ್ಲಾ ಎನ್‌ಸಿಸಿಗೆ ಸ್ವಂತ ಕಟ್ಟಡ, ಚಟುವಟಿಕೆಗಳನ್ನು ನಡೆಸಲು ಸೂಕ್ತ ಸ್ಥಳ ಕಲ್ಪಿಸದೆ ಇರುವುದು ಚಟುವಟಿಕೆಗಳನ್ನು ನಡೆಸಲು ತೀವ್ರ ಹಿನ್ನಡೆಯಾಗಿದೆ. ಜಿಲ್ಲಾ ಕಚೇರಿಯಿಂದ ಪಿಯುಸಿ, ಪ್ರಥಮ ದರ್ಜೆ ಹಾಗೂ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಅಸಕ್ತ ವಿದ್ಯಾರ್ಥಿಗಳಿಗೆ ನಾಯಕತ್ವ, ಶಿಸ್ತು, ರಕ್ಷಣೆ ಇಲಾಖೆಯಲ್ಲಿ ಸೇವೆಗೆ ಸೇರಲು ಅಗತ್ಯವಾಗಿ ಬೇಕಾಗಿರುವ ತರಬೇತಿಯನ್ನು ನೀಡಲಾಗುತ್ತಿದೆ.
  ಪ್ರಥಮ ದರ್ಜೆ ಹಾಗೂ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಬೇತಿ ನೀಡಲು, ಚಟುವಟಿಕೆಗಳನ್ನು ನಡೆಸಲು ಸೂಕ್ತ ಜಾಗಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಪಂಗೆ ಹಲವು ಬಾರಿ ಪ್ರಸ್ತಾವ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ರೀತಿ ಸ್ಪಂದನೆ ಸಿಕ್ಕಿಲ್ಲ.

  • ತರಬೇತಿಯಿಲ್ಲದ ಕಾರಣ ಜಿಲ್ಲೆಗಿಲ್ಲ ಅವಕಾಶ
   ಎನ್‌ಸಿಸಿಯಿಂದ 2024ರ ಜ.26ರಂದು ಬೆಂಗಳೂರಿನ ಎನ್‌ಸಿಸಿ ಗ್ರೌಂಡ್‌ನಲ್ಲಿ ಬೃಹತ್ ಪರೇಡ್ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ತುಕಡಿಗಳು ಭಾಗವಹಿಸಲಿವೆ. ಆದರೆ ಕೋಲಾರದಿಂದ ಯಾವುದೇ ತುಕಡಿಯು ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಸರಿಯಾದ ರೀತಿ ಯುವಕರಿಗೆ ತರಬೇತಿ ದೊರೆಯದೆ ಇರುವುದು ಪ್ರಮುಖ ಕಾರಣವಾಗಿದೆ. ತರಬೇತಿ ಕೊರತೆಯಿಂದ ಜಿಲ್ಲೆಯೂ ಅನರ್ಹಗೊಂಡಿದೆ. ನವದೆಹಲಿಯ ಜಂತರ್ ಮಂಥರ್‌ನಲ್ಲಿ ಜ.26ರಂದು ನಡೆಯಲಿರುವ ಪರೇಡ್‌ನಲ್ಲಿ ಎನ್‌ಸಿಸಿ ಕೆಡಟ್‌ಗಳು ಭಾಗಿಯಾಗುವ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಈ ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಅವಕಾಶದಿಂದ ವಂಚಿತರಾದವರು ರಾಜ್ಯಮಟ್ಟದ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೆ ಜಿಲ್ಲೆಯು ಇದೆಲ್ಲವುಗಳಿಂದ ದೂರವಾಗಿದೆ.
   ಎನ್‌ಸಿಸಿಯ ಚಟುವಟಿಕೆಗಳು ಸಕ್ರಿಯವಾಗಿ ನಡೆಯಬೇಕು, ಶಾಲಾ ಕಾಲೇಜುಗಳಲ್ಲಿ ತುಕಡಿಗಳ ರಚನೆ, ತರಬೇತಿ ಕಾರ್ಯಕ್ರಮಗಳು, ಕ್ಯಾಂಪ್‌ಗಳು ಹಾಗೂ ಕ್ರೀಡಾ ಚಟುವಟಿಕೆಗಳು ಸಕಾಲಕ್ಕೆ ನಡೆಯಬೇಕು. ಸರ್ಕಾರ ಕಾಲೇಜುಗಳಲ್ಲಿ ಕಡ್ಡಾಯವಾಗಿ ತಂಡಗಳನ್ನು ರಚನೆ ಮಾಡಬೇಕು ಹಾಗೂ ತಂಡ ನಿರ್ವಹಣೆಗೆ ಉಪನ್ಯಾಸಕರನ್ನು ಆಯೋಜಕರನ್ನಾಗಿ ನೇಮಕ ಮಾಡಲಾಗುತ್ತದೆ. ಪ್ರತಿ ಶನಿವಾರ ಕಾಲೇಜು ಆವರಣದಲ್ಲಿ ಶಿಭಿರಾರ್ಥಿಗಳಿಗೆ ತರಬೇತಿ ನೀಡಲು ಎನ್‌ಸಿಸಿಯಿಂದಲೇ ಕಮಾಂಡೆಂಟ್ ಆಗಮಿಸುತ್ತಾರೆ. ಈ ಎಲ್ಲದರ ಕೊರತೆ ನೀಗಿಸಲು ಹಲವು ಕೊರತೆಗಳು ಕಾಡುತ್ತಿವೆ.
  • ಪ್ರಸ್ತಾವ ಸಲ್ಲಿಸಿದರೂ ಸಿಗದ ಸ್ಪಂದನೆ
   ಎನ್‌ಸಿಸಿ ಕಚೇರಿಗೆ ಹಾಗೂ ಚಟುವಟಿಕೆಗಳನ್ನು ನಡೆಸಲು ಜಿಲ್ಲಾಡಳಿತ ಹಾಗೂ ಜಿಪಂಗೆ 8 ಎಕರೆ ಜಾಗ ಮಂಜೂರು ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಈ ಕಾರಣದಿಂದ ಜಿಲ್ಲಾ ಕಚೇರಿಯು ಬೇರೆ ಜಿಲ್ಲೆಗೆ ಸ್ಥಳಾಂತರವಾಗುವ ಆತಂಕ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಎನ್‌ಸಿಸಿ ಕಚೇರಿ ಜಿಲ್ಲೆಯಲ್ಲಿ ತೆಗೆಯಬೇಕಾದರೆ ಐದಾರು ದಶಕಗಳೇ ಕಾಯಬೇಕಾಗುತ್ತದೆ. ಕಚೇರಿಯು ಬೇರೆ ಜಿಲ್ಲೆಗೆ ಸ್ಥಳಾಂತರವಾಗದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕು.
  60 ವರ್ಷವಾದರೂ ಇಲ್ಲ ಸ್ವಂತ ಜಾಗ

  ಸೌಲಭ್ಯಗಳ ಕೊರತೆಯಿರುವುದರಿಂದ ಎನ್‌ಸಿಸಿ ಚಟುವಟಿಕೆಗಳ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ಕೋಲಾರದಲ್ಲಿ ಹಿನ್ನಡೆಯಾಗಿದೆ. ಮುಂದಿನ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಜಿಲ್ಲೆಯ ತುಕಡಿ ಆಯ್ಕೆಯಾಗದೆ ಇರುವುದು ಬೇಸರ ತಂದಿದೆ. ಇದಕ್ಕೆಲ್ಲ ಚಟುವಟಿಕೆ ನಡೆಸಲು ಸ್ವಂತ ಜಾಗ, ಕಟ್ಟಡ ಇಲ್ಲದೆ ಇರುವುದು ಕಾರಣವಾಗಿದೆ.

  • ವಿಕಾಸ್ ಶುಕ್ಲ, ಕಮಾಂಡೆಂಟ್ ಅಧಿಕಾರಿ, ಕೋಲಾರ.
  60 ವರ್ಷವಾದರೂ ಇಲ್ಲ ಸ್ವಂತ ಜಾಗ

  ಇಚ್ಛಾಶಕ್ತಿಯಿಲ್ಲದ ರಾಜಕಾರಣಿಗಳು, ಮುಂದಾಲೋಚನೆಯಿಲ್ಲದ ಅಧಿಕಾರಿಗಳು ಇರುವುದರಿಂದ ಎನ್‌ಸಿಸಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಜನಪ್ರತಿನಿಧಿಗಳು ಕೇವಲ ಮತಗಳಿಕೆಯಾಗುವ ಕೆಲಸಗಳಿಗೆ ಒತ್ತು ನೀಡದೆ, ಯುವಕರಲ್ಲಿ ಶಿಸ್ತು, ನಾಯತ್ವ ಗುಣಗಳನ್ನು ಹುಟ್ಟಿ ಹಾಕುವ ಸೇವಾ ಮನೋಭಾವವುಳ್ಳ ಸಂಸ್ಥೆಗಳಿಗೆ ಸೌಕರ್ಯ ಕಲ್ಪಿಸಲು ಒತ್ತು ನೀಡಬೇಕು.

  • ವಿ.ಕೆ.ರಾಜೇಶ್, ನಗರಸಭೆ ಮಾಜಿ ಉಪಾಧ್ಯಕ್ಷ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts