More

    ನಕ್ಸಲ್‌ಪೀಡಿತ ಪ್ರದೇಶ ಮೂಲಸೌಕರ್ಯ ವಂಚಿತ

    | ನರೇಂದ್ರ ಎಸ್.ಮರ್ಸಣಿಗೆ ಹೆಬ್ರಿ
    ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ದರ್ಖಾಸ್, ಮೇಗದ್ದೆ, ಒಣಜಾರು, ಅಜ್ಜೋಳ್ಳಿ, ಕೂಡ್ಲು ಪ್ರದೇಶಗಳು ರಸ್ತೆ, ಶಾಲೆ, ಮೊಬೈಲ್ ನೆಟ್‌ವರ್ಕ್ ಮತ್ತಿತರ ಸೌಕರ್ಯಗಳಿಂದ ವಂಚಿತವಾಗಿವೆ. ಈ ಪ್ರದೇಶದಲ್ಲಿ 120 ಮನೆಗಳಿದ್ದು, 400ಕ್ಕೂ ಅಧಿಕ ಜನ ವಾಸಿಸುತ್ತಿದ್ದಾರೆ. ಅರಣ್ಯ ಇಲಾಖೆ ನಿಯಮಗಳು ಮತ್ತು ಕಾಡುಪ್ರಾಣಿಗಳ ಹಾವಳಿ ಮತ್ತಿತರ ಸಮಸ್ಯೆಯೊಂದಿಗೆ ಜೀವನ ಸಾಗಿಸುವಂತಾಗಿದೆ.
    ಕೃಷಿ ಮತ್ತು ಹೈನುಗಾರಿಕೆ ಇಲ್ಲಿಯ ಪ್ರಮುಖ ಉದ್ಯೋಗ. ಹಾಲು ಸಾಗಾಟ ಮಾಡುವವರಿಗೆ ಲೀಟರ್‌ಗೆ ಮೂರು ರೂಪಾಯಿಯಂತೆ ನೀಡಿ ನೆಲ್ಲಿಕಟ್ಟೆ ಡೇರಿಗೆ ಹಾಲು ಸಾಗಿಸಬೇಕಾಗುತ್ತದೆ. ರಸ್ತೆಯಿಲ್ಲದ ಕಾರಣ ಮಳೆಗಾಲದಲ್ಲಿ ರೈತರು ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಕೃಷಿಕರು. ಜನ ಪೇಟೆ ಸಂಪರ್ಕಿಸಬೇಕಾದರೆ 20 ಕಿ.ಮೀ. ಪ್ರಯಾಣ ಬೆಳೆಸಿ ದೂರದ ಹೆಬ್ರಿ ತಲುಪಬೇಕು. ನೆಲ್ಲಿಕಟ್ಟೆ ಕ್ರಾಸ್‌ನಿಂದ ಹೆಬ್ರಿಗೆ ಬಸ್ ವ್ಯವಸ್ಥೆಯಿದ್ದರೂ ಸಮರ್ಪಕವಾಗಿ ಸಂಚರಿಸುವುದಿಲ್ಲ.
    ಇಲ್ಲಿನ ಜನರಿಗೆ ಆರೋಗ್ಯದಲ್ಲಿ ಏರುಪೇರಾದರೆ ಬಹಳ ಕಷ್ಟ. ಗರ್ಭಿಣಿ ಹಾಗೂ ವಯೋವೃದ್ಧರನ್ನು ಆಸ್ಪತ್ರೆಗೆ ಸಾಗಿಸಲು ಸಾಹಸ ಮಾಡಬೇಕು. ಚುನಾವಣೆ ಬಂದಾಗ ಜನಪ್ರತಿನಿಧಿಗಳು ಆಶ್ವಾಸನೆ ನೀಡುತ್ತಾರೆಯೇ ಹೊರತು ಇಲ್ಲಿನ ಸಮಸ್ಯೆ ಬಗೆಹರಿಸಿಲ್ಲ. ಸೀತಾನದಿಯಲ್ಲಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ಪೂರ್ಣ ಪ್ರಮಾಣದ ವೈದ್ಯಕೀಯ ಸವಲತ್ತು ಮತ್ತು ತುರ್ತು ಚಿಕಿತ್ಸಾ ಸೌಲಭ್ಯ ಅಲ್ಲಿಲ್ಲ.

    ಅಪೂರ್ಣ ರಸ್ತೆ ಕಾಮಗಾರಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ನೆಲ್ಲಿಕಟ್ಟೆ ಕ್ರಾಸ್‌ನಿಂದ ಕೂಡ್ಲು ಸಂಪರ್ಕಿಸುವ ರಸ್ತೆಗೆ ದರ್ಖಾಸ್‌ನಿಂದ ಅಜ್ಜೋಳ್ಳಿವರೆಗೆ ಎರಡು ಕಿ.ಮೀ.ಉದ್ದದ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ಮಂಜೂರಾಗಿದೆ. ಗ್ರಾಪಂ ಚುನಾವಣೆಗೆ ಮೊದಲು ಈ ರಸ್ತೆ ಅಗೆದು ಹಾಕಿದ್ದು ಐದು ತಿಂಗಳು ಕಳೆದರೂ ಕೆಲಸ ಪೂರ್ಣವಾಗಿಲ್ಲ. ಈ ಬಗ್ಗೆ ಉಡುಪಿ ಯೋಜನಾ ವಿಭಾಗದ ಇಂಜಿನಿಯರ್ ಅನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ಕೊಡುತ್ತಾರೆ ಎಂಬ ಆರೋಪ ಸ್ಥಳೀಯರದ್ದು.

    ನೆಟ್‌ವರ್ಕ್ ಸಮಸ್ಯೆ: ಮೊಬೈಲ್ ನೆಟ್‌ವರ್ಕ್ ಇಲ್ಲದೆ ನಾಡ್ಪಾಲು, ದರ್ಖಾಸ್, ಮೇಗದ್ದೆ, ಒಣಜಾರು, ಅಜ್ಜೋಳ್ಳಿ, ಕೂಡ್ಲು ಪ್ರದೇಶಗಳ ಜನರಿಗೆ ಹೊರಜಗತ್ತನ್ನು ಸಂಪರ್ಕಿಸುವುದೇ ದೊಡ್ಡ ಸವಾಲು. ಕೆಲವು ಕಡೆ ಮಾತ್ರ ಸ್ವಲ್ಪ ನೆಟ್‌ವರ್ಕ್ ಸಿಕ್ಕಿದರೂ ಕ್ಷಣಮಾತ್ರದಲ್ಲೇ ಹೋಗುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಡಿದ್ದಾರೆ. ಲಾಕ್‌ಡೌನ್ ಸಂದರ್ಭ ಇಲ್ಲಿನ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಿಂದಲೂ ವಂಚಿತರಾಗಿದ್ದಾರೆ.

    ವಿದ್ಯಾರ್ಥಿಗಳಿಗೆ ತೊಂದರೆ: ಈ ಭಾಗದಲ್ಲಿ ಮೂರು ವರ್ಷಗಳ ಹಿಂದೆ ಮುಚ್ಚಿದ್ದ ಸರ್ಕಾರಿ ಶಾಲೆಯನ್ನು ಜನ ಹೋರಾಟ ಮಾಡಿ ಮತ್ತೆ ಬಾಗಿಲು ತೆರೆಸುವಂತೆ ಮಾಡಿದ್ದರು. ದುಸ್ಥಿತಿಯೆಂದರೆ ಶಾಲೆಯ ಅಡುಗೆ ಕೋಣೆ ಬೀಳುವ ಸ್ಥಿತಿಯಲ್ಲಿದ್ದು, ಮೇಲ್ಛಾವಣಿ ಕುಸಿದಿದೆ. ನೀರಿನ ವ್ಯವಸ್ಥೆ, ಶೌಚಗೃಹ ಮತ್ತು ಆವರಣ ಗೋಡೆ ಮೊದಲೇ ಇಲ್ಲ. ಗುಡ್ಡಗಾಡು ಪ್ರದೇಶಗಳಿಗೆ ಮಹಿಳಾ ಶಿಕ್ಷಕರನ್ನು ನಿಯೋಜಿಸಲಾಗಿದೆ. ಶಾಲೆ ಮುಚ್ಚಿದ ಸಂದರ್ಭ ಆರ್ಥಿಕ ಸ್ಥಿತಿವಂತರು ಖಾಸಗಿ ಶಾಲೆ ಸಂಪರ್ಕಿಸಿದರೆ ಅನೇಕ ಬಡ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಕೆಲವು ವಿದ್ಯಾರ್ಥಿಗಳು ಅಜ್ಜೋಳ್ಳಿ, ತನಕ ನಡೆದು ನಂತರ ಹಾಲಿನ ವಾಹನದಲ್ಲಿ ಹೆಬ್ರಿಯ ಸಂಪರ್ಕ ಪಡೆಯುತ್ತಿದ್ದಾರೆ. ಅದರಲ್ಲೂ ಸರ್ಕಾರಿ ಶಾಲೆ ಮಕ್ಕಳು ನಡೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.

    ರಸ್ತೆ ಸಮಸ್ಯೆ ಬಗ್ಗೆ ಇಂಜಿನಿಯರ್ ಜತೆ ಮಾತನಾಡಿದ್ದೇನೆ. ಕೆಲವು ತಾಂತ್ರಿಕ ಕಾರಣಗಳಿಂದ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಆದಷ್ಟು ಶೀಘ್ರ ರಸ್ತೆ ನಿರ್ಮಿಸಿ ಕೊಡುವಂತೆ ಆದೇಶಿಸಿದ್ದೇನೆ.
    |ಜ್ಯೋತಿ ಹರೀಶ್, ಜಿಲ್ಲಾ ಪಂಚಾಯಿತಿ ಸದಸ್ಯರು

    ಮೂಲಸೌಕರ್ಯ ಕಲ್ಪಿಸುವಂತೆ ಅನೇಕ ಬಾರಿ ಮಾಧ್ಯಮದವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಾಗ ಅದು ರಾಜಕೀಯ ತಿರುವು ಪಡೆಯುವುದು ಖಂಡನೀಯ. ಜನಪ್ರತಿನಿಧಿಗಳು, ಅಧಿಕಾರಿಗಳು ನ್ಯೂನತೆಗಳನ್ನು ಹೋಗಲಾಡಿಸಿ ಸಮಾಜದ ಅಭಿವೃದ್ಧಿಯತ್ತ ಚಿಂತಿಸಬೇಕಿದೆ.
    | ರಮೇಶ್ ಶೆಟ್ಟಿ ಸ್ಥಳೀಯ ನಿವಾಸಿ

    ನಾವೆಲ್ಲರೂ ಕೃಷಿ ಮಾಡಿ ಜೀವನ ಸಾಗಿಸುವವರು. ರಸ್ತೆ, ವಿದ್ಯುತ್, ನೆಟ್‌ವರ್ಕ್, ಶಾಲೆ ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ಜೀವನ ದುಸ್ತರವಾಗಿದೆ. ಮೂಲಸೌಕರ್ಯಗಳಿಲ್ಲದೆ ಜೀವನ ನಡೆಸುವುದು ಬಹಳ ಕಷ್ಟಕರ. ದಯವಿಟ್ಟು ರಾಜಕೀಯ ನಾಯಕರು ನಮ್ಮತ್ತ ಗಮನ ಹರಿಸಲಿ.
    | ವಿಜಯ್ ಶೆಟ್ಟಿ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts