More

    ಸಿದ್ಧಿ ಪ್ರದಾನಿಸುವ ಸಿದ್ಧಿದಾತ್ರೀ

    vittal bhatಪಂಡಿತ್ ವಿಠ್ಠಲ ಭಟ್
    ಸಿದ್ಧಗಂಧರ್ವಯಕ್ಷಾದ್ವೈ ಸುರೈರಮರೈರಪಿ |
    ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||

    ನವರಾತ್ರಿಯ ಒಂಬತ್ತನೇ ದಿನ ದೇವಿಯ ಸ್ವರೂಪದ ಹೆಸರು ಸಿದ್ಧಿದಾತ್ರೀ. ಹೆಸರೇ ಸೂಚಿಸುವಂತೆ ಸಿದ್ಧಿಯನ್ನು ಅನುಗ್ರಹಿಸುವವಳು ಅಥವಾ ನೀಡುವವಳು ಈ ಮಹಾತಾಯಿ. ಮಾರ್ಕಂಡೇಯ ಪುರಾಣದ ಪ್ರಕಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಹಾಗೂ ವಶಿತ್ವ ಹೀಗೆ ಎಂಟು ಸಿದ್ಧಿಗಳನ್ನು ಹೇಳಲಾಗಿದೆ. ಜಗಜ್ಜನನಿಯನ್ನು ಆರಾಧನೆ ಮಾಡುವುದರಿಂದ, ಅದರಲ್ಲೂ ಶರನ್ನವರಾತ್ರಿಯ ಒಂಬತ್ತನೇ ದಿನದಂದು ಸಿದ್ಧಿದಾತ್ರೀ ಸ್ವರೂಪದಲ್ಲಿ ಆರಾಧಿಸುವುದರಿಂದ ಈ ಎಲ್ಲ ಸಿದ್ಧಿಗಳು ಪ್ರಾಪ್ತವಾಗುತ್ತವೆ. ದೇವಿಪುರಾಣದಲ್ಲಿನ ಉಲ್ಲೇಖದ ಪ್ರಕಾರ, ಆ ಮಹಾಶಿವನಿಗೆ ಇವಳ ಕೃಪೆಯಿಂದಲೇ ಈ ಎಲ್ಲ ಸಿದ್ಧಿಗಳು ದೊರೆತಿತ್ತು. ಅಷ್ಟೇ ಅಲ್ಲ, ಸಿದ್ಧಿದಾತ್ರೀ ಅನುಗ್ರಹದಿಂದಲೇ ಶಿವನ ಅರ್ಧಶರೀರವು ದೇವಿಯದಾಗಿತ್ತು. ಆದ್ದರಿಂದಲೇ ಶಿವನು ಜಗತ್ತಿನಲ್ಲಿ ಅರ್ಧನಾರೀಶ್ವರ ಎಂಬ ಹೆಸರಿನಿಂದ ಪ್ರಖ್ಯಾತನಾದ, ಆದರ್ಶನಾದ.

    ಸಿದ್ಧಿದಾತ್ರೀ ದೇವಿಯ ಸ್ವರೂಪವನ್ನು ಹೀಗೆ ವಿವರಿಸಲಾಗಿದೆ: ಈ ದೇವಿಗೆ ನಾಲ್ಕು ಭುಜಗಳು. ವಾಹನ ಸಿಂಹ. ಈಕೆ ಕಮಲದ ಹೂವಿನ ಮೇಲೆ ಕುಳಿತಿದ್ದಾಳೆ. ತಾಯಿಯ ಕೆಳಗಿನ ಬಲಗೈಯಲ್ಲಿ ಚಕ್ರವಿದೆ, ಮೇಲಿನದರಲ್ಲಿ ಗದೆ ಇದೆ. ಎಡಗಡೆಯ ಕೆಳಗಿನ ಕೈಯಲ್ಲಿ ಶಂಖ ಹಿಡಿದಿದ್ದರೆ, ಮೇಲಿನ ಕೈಯಲ್ಲಿ ಕಮಲದ ಹೂವಿದೆ. ಯಾರು ಶರನ್ನವರಾತ್ರಿಯ ಒಂಬತ್ತನೇ ದಿನದಂದು ಈ ಸಿದ್ಧಿದಾತ್ರೀ ದೇವಿಯ ಆರಾಧನೆ ಮಾಡುತ್ತಾರೋ ಅಂಥವರಿಗೆ ಎಲ್ಲ ಸಿದ್ಧಿಗಳನ್ನು ಆ ತಾಯಿ ಅನುಗ್ರಹಿಸುತ್ತಾಳೆ. ಈ ಸೃಷ್ಟಿಯಲ್ಲಿ ಆ ವ್ಯಕ್ತಿಗೆ ನಿಲುಕಲಾರದ್ದು ಎಂಬುದು ಯಾವುದೂ ಇರುವುದಿಲ್ಲ.

    ನವರಾತ್ರಿಯಲ್ಲಿ ದೇವಿಯ ಒಂಬತ್ತು ಸ್ವರೂಪಗಳನ್ನು ವಿವರಿಸುತ್ತ ಕೊನೆಯದಾಗಿ ಬರುವುದು ಸಿದ್ಧಿದಾತ್ರೀ ದೇವಿ ಸ್ವರೂಪವಾಗಿದೆ. ಉಳಿದ ಎಂಟು ದಿನಗಳಂತೆ ಒಂಬತ್ತನೇ ದಿನದಂದು ಸಹ ಈ ದೇವಿಯ ಆರಾಧನೆ ಮಾಡುವುದರಿಂದ ಆರಾಧಕರ ಲೌಕಿಕ-ಪಾರಮಾರ್ಥಿಕ ಎಲ್ಲ ಬಗೆಯ ಕೋರಿಕೆಗಳು ನೆರವೇರುತ್ತವೆ. ಆ ಭಗವತಿ ಸಿದ್ಧಿದಾತ್ರೀ ದೇವಿ ಅನುಗ್ರಹಿಸಿದ ಮೇಲೆ ಬೇರೆ ಯಾವ ಕೃಪೆ, ಅನುಗ್ರಹ, ರಕ್ಷಣೆ ಆ ಆರಾಧಕರಿಗೆ ಅಗತ್ಯವಿರುವುದಿಲ್ಲ.

    ಹದಿನೆಂಟು ಸಿದ್ಧಿಗಳ ಹೆಸರು: ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಮಹಿಮಾ, ಈಶಿತ್ವ ಹಾಗೂ ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರಶ್ರವಣ, ಪರಕಾಯ ಪ್ರವೇಶನ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ ಸಿದ್ಧಿ. ಈ ದೇವಿಯ ಎಲ್ಲ ಸ್ವರೂಪವನ್ನು ಹಾಗೂ ತಾಯಿಯ ಮಹಿಮೆಯನ್ನು ತಿಳಿದುಕೊಂಡ ಎಲ್ಲರಿಗೂ ಶುಭವಾಗಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts