More

    ಅಮೆರಿಕದ ನ್ಯೂಜೆರ್ಸಿಯಲ್ಲಿ ಉತ್ತರ ಕರ್ನಾಟಕದ ‘ನೌಕಾ’ ವನವಿಹಾರ..

    | ಸರಿತಾ ನವಲಿ

    ಅಮೆರಿಕ: ಅಮೆರಿಕದಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಭಾಗದ ಜನರು ನಾರ್ಥ್ ಅಮೆರಿಕ ಉತ್ತರ ಕರ್ನಾಟಕ ಅಸೋಸಿಯೇಷನ್​ (North America Uttar Karnataka Association- NAUKA) ಎನ್ನುವ ಸಂಘ ಕಟ್ಟಿಕೊಂಡಿದ್ದು, ಜೂ. 25ರಂದು ಮೊದಲ ನೌಕಾ ವನವಿಹಾರವನ್ನು ನ್ಯೂಜೆರ್ಸಿಯಲ್ಲಿ ಆಯೋಸಿದ್ದಾರೆ.

    ನ್ಯೂಜೆರ್ಸಿ ಮತ್ತು ಅಕ್ಕಪಕ್ಕದ ನಾಲ್ಕು ರಾಜ್ಯಗಳಿಂದ 180ಕ್ಕೂ ಹೆಚ್ಚು ಸದಸ್ಯರು ’ನೌಕಾ ಪಿಕ್ನಿಕ್’ನಲ್ಲಿ ಭಾಗವಹಿಸಿದ್ದರು. ಉತ್ತರ ಕರ್ನಾಟಕದ ಊಟ-ಉಡುಗೆ, ಭಾಷಾ ಶೈಲಿ, ಸಾಂಪ್ರದಾಯಿಕ ಆಟಗಳು, ಜನಪದ ಗೀತೆಗಳು ಈ ವನವಿಹಾರದ ವಿಶೇಷತೆಗಳಾಗಿದ್ದವು.

    ಇದು ಉತ್ತರ ಕರ್ನಾಟಕದ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿನ ಪ್ರಯತ್ನವಾಗಿದ್ದು, ಕಾರ್ಯಕ್ರಮದಲ್ಲಿ ಮೊದಲಿಗೆ ಸದಸ್ಯರು ತಂತಮ್ಮ ಪರಿಚಯವನ್ನು ಮಾಡಿಕೊಳ್ಳಲು ಅವಕಾಶ ಒದಗಿಸಲಾಯಿತು. ಹಲವಾರು ಸದಸ್ಯರು ಉತ್ತರ ಕರ್ನಾಟಕದ ವಿಶೇಷ ಉಡುಗೆಗಳಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಂಪ್ರದಾಯಿಕ ಇಳಕಲ್ ಸೀರೆಗಳನ್ನುಟ್ಟ ಮಹಿಳೆಯರು ಹಲವಾರು ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.

    ಕಲಾವಿದೆ ಶಿವರಂಜನಿ ಉಮತಾರ್ ಅವರು ಹಾಡಿದ ಜನಪ್ರಿಯ ಜಾನಪದ ಗೀತೆಗಳ ನೇರಪ್ರಸಾರವನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ನೌಕಾ ಅಧ್ಯಕ್ಷ ಅಶ್ವಿನಿಕುಮಾರ್ ಸಣಕಲ್ ಅವರು ’ನೌಕಾ’ ಬ್ಯಾನರನ್ನು ಪರಿಚಯಿಸಿ ಮಾತನಾಡಿದರು. ಇದು ಲಾಭರಹಿತ ಸಂಸ್ಥೆ ಇಂಟರ್ನಲ್ ರೆವಿನ್ಯೂ ಸರ್ವಿಸ್​ ಮತ್ತು ನ್ಯೂಯಾರ್ಕ್ ರಾಜ್ಯಗಳಿಂದ ಮಾನ್ಯತೆ ಪಡೆದುಕೊಂಡಿದೆ ಎಂದು ಅವರು ತಿಳಿಸಿದರು.

    ಅಮೆರಿಕದ ನ್ಯೂಜೆರ್ಸಿಯಲ್ಲಿ ಉತ್ತರ ಕರ್ನಾಟಕದ 'ನೌಕಾ’ ವನವಿಹಾರ..

    ಮಧ್ಯಾಹ್ನದ ಊಟದಲ್ಲಿ ಸದಸ್ಯರು ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯದೊಂದಿಗೆ ಸಾಂಪ್ರದಾಯಿಕ ತಿನಿಸುಗಳಾದ ಕರ್ಚಿಕಾಯಿ, ಲಡ್ಕಿ ಉಂಡಿ, ಶೇಂಗಾ ಹೋಳಿಗೆ, ಮಾದೇಲಿಯನ್ನು ಸವಿದರು. ಉತ್ತರ ಕರ್ನಾಟಕದ ವಿಶೇಷ ತಿನಿಸುಗಳನ್ನು ಕರ್ನಾಟಕದ ಮಹಾಲಿಂಗಪುರದಿಂದ ಸಮಯಕ್ಕೆ ಸರಿಯಾಗಿ ನ್ಯೂಜೆರ್ಸಿಗೆ ತಲುಪುವಂತೆ ಮಾಡಿದ್ದೂ ವಿಶೇಷವಾಗಿತ್ತು. ವನವಿಹಾರದ ಸಮಯದಲ್ಲಿ ಕರ್ನಾಟಕದ ಹೆಸರಾಂತ ಜಾನಪದ ಗಾಯಕ ಹುಕ್ಕೇರಿ ಬಾಳಪ್ಪರವರ ಧ್ವನಿಯಲ್ಲಿ ಬಿತ್ತರಗೊಳ್ಳುತ್ತಿದ್ದ ಜಾನಪದ ಗೀತೆಗಳನ್ನು ಎಲ್ಲರೂ ಆನಂದಿಸಿ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

    ಬಾಲ್ಯದ ದಿನಗಳನ್ನು ನೆನಪಿಸುವ ಅನೇಕ ಆಟಗಳು ಎಲ್ಲರನ್ನೂ ರಂಜಿಸಿದವು. ಬುಗುರಿ, ಲಗೋರಿ, ಚಿನ್ನಿ-ಪನ್ನಿ, ಟಯರ್-ಕೋಲು ಆಟಗಳನ್ನು ಸದಸ್ಯರೆಲ್ಲ ಆನಂದಿಸಿದರು. ಆಟಗಳ ನಂತರ ಎಲ್ಲರೂ ಮಿರ್ಚಿಬಜ್ಜಿ, ಈರುಳ್ಳಿ ಬಜ್ಜಿಯೊಂದಿಗೆ ಚಹಾ ಸವಿದರು. ವನವಿಹಾರವನ್ನು ಆಯೋಜಿಸುವಲ್ಲಿ ನೌಕಾ ತಂಡದ ಪ್ರಶಾಂತ ಮುರುಗೇಂದ್ರಪ್ಪ, ಗಿರೀಶ್ ಹೊಂಗಲ್, ವಾಣಿ ಕುಲಕರ್ಣಿಯವರು ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.

    ಅಮೆರಿಕದ ನ್ಯೂಜೆರ್ಸಿಯಲ್ಲಿ ಉತ್ತರ ಕರ್ನಾಟಕದ 'ನೌಕಾ’ ವನವಿಹಾರ..

    ಅಲ್ಲದೇ ಕೇಶವ ಉಮತಾರ್, ಮಲ್ಲಿಕಾರ್ಜುನ ಮೂಗಿ, ನಂದೀಶ್ ಮಠದ, ಸುರೇಶ್ ಕೋನಪ್ಪನವರ್, ಅಶ್ವಿನಿ ಅಮಸಿದ್ದರವರು ವಿವಿಧ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವನವಿಹಾರವನ್ನು ಯಶಸ್ವಿಯಾಗಿಸಿದರು. ’ನೌಕಾ’ ತಂಡವು ಉತ್ತರ ಅಮೆರಿಕ ಮತ್ತು ಕೆನಡಾದ ವಿವಿಧ ಭಾಗಗಳಲ್ಲಿ ಪ್ರತಿವರ್ಷ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು ಹಾಕಿಕೊಂಡಿದೆ.

    ನ್ಯೂಯಾರ್ಕ್​​ನಲ್ಲಿ ನೆಲೆಸಿರುವ ಅಶ್ವಿನಿಕುಮಾರ್ ಸಣಕಲ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕಿರಣ್ ಪರ್ವತಿಕರ್ ಅವರು ’ನೌಕಾ’ ಸಂಘದ ಸಂಸ್ಥಾಪಕರು. ಇವರಿಬ್ಬರ ಪ್ರಯತ್ನವಾಗಿ 2020ರ ಜೂನ್ 12ರಂದು ’ನೌಕಾ’ ಸ್ಥಾಪನೆಗೊಂಡಿತ್ತು. ಪ್ರಸ್ತುತ ನೌಕಾ ಕೋಶಾಧಿಕಾರಿಯಾಗಿ ಕಿರಣ್ ಪರ್ವತಿಕರ್, ಕಾರ್ಯದರ್ಶಿಯಾಗಿ ಅಶ್ವಿನಿ ಸಂಗಮ್ ಮತ್ತು ಅಧ್ಯಕ್ಷರಾಗಿ ಅಶ್ವಿನಿಕುಮಾರ್ ಸಣಕಲ್ ಕಾರ್ಯನಿರ್ವಹಿಸುತ್ತಿದ್ದಾರೆ.

    ಅಮೆರಿಕದ ನ್ಯೂಜೆರ್ಸಿಯಲ್ಲಿ ಉತ್ತರ ಕರ್ನಾಟಕದ 'ನೌಕಾ’ ವನವಿಹಾರ..

    ಅಮೆರಿಕದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ರಾಜ್ ಕುಲಗೋಡ, ವೇಣು ಕುಲಕರ್ಣಿ, ಅಶೋಕ್ ಹಂದಿಗೋಳ್, ಕಿರಣ್ ದೇಸಾಯಿ, ಕಿರಣ್ ಕೆಂಭಾವಿ, ಪ್ರಭಾತ್ ಜೋಶಿ, ವಿನಯ್ ಭಾರದ್ವಾಜ್, ಅರವಿಂದ ಝಳಕಿ, ರಾಜೀವ್ ಬನ್ನೂರು, ಶ್ರೀರಾಮ ದೇಶಪಾಂಡೆ, ಉಮೇಶ ಗಂಗಾಧರಮಠ, ರೋಹಿಣಿ ಮೆಣಸಿನಕಾಯಿ, ಪರಿಮಳ ದೇಶಪಾಂಡೆ, ಜಗದೀಶ್ ಬೆಳಗಾವಿ ಮತ್ತು ಡಾ. ಪ್ರಕಾಶ ಕಬ್ಬೂರ್ ಅವರು ಸಕ್ರಿಯವಾಗಿ ನೌಕಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts