More

    ಸಹಜ ಹೆರಿಗೆಗೆ ಹಣ ವಸೂಲಿ; ಗಂಗಾವತಿ ಆಸ್ಪತ್ರೆ ಆಡಳಿತಾಧಿಕಾರಿಗೆ ಕೆಆರ್‌ಎಸ್ ಮುಖಂಡರ ಮುತ್ತಿಗೆ

    ಗಂಗಾವತಿ: ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗೆ ಹಣ ವಸೂಲಿ ಮಾಡಲಾಗುತ್ತಿದೆಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಗುರುವಾರ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

    ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಕುಟುಂಬಕ್ಕೆ ಸಹಜ ಹೆರಿಗೆಗಾಗಿ ಹಣ ಕೇಳಿದ್ದು, ಸ್ಕಾೃನಿಂಗ್‌ಗೆ ಹೊರಗಡೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಆಡಿಯೋ, ವಿಡಿಯೋಗಳಿವೆ. ಪ್ರಶ್ನಿಸಲು ಹೋದರೆ ವೈದ್ಯ ಸಿಬ್ಬಂದಿ ಸ್ಪಂದಿಸಿಲ್ಲ, ಆಡಳಿತಾಧಿಕಾರಿ ಕರೆ ಸ್ವೀಕರಿಸಿಲ್ಲವೆಂದು ಅಸಮಾಧಾನಗೊಂಡ ಕಾರ್ಯಕರ್ತರು, ಗುರುವಾರ ಕರ್ತವ್ಯ ಮುಗಿಸಿಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದ ಡಾ.ಈಶ್ವರ ಸವಡಿಯನ್ನು ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ತಡೆದು, ತರಾಟೆಗೆ ತೆಗೆದುಕೊಂಡರು. ಇದರಿಂದ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು. ಪಿಎಸ್‌ಐ ವಿಲಾಸ್ ಬೋಸ್ಲೆ ಆಗಮಿಸಿ ತಿಳಿಗೊಳಿಸಿದರು.

    ಆಸ್ಪತ್ರೆ ಸಿಬ್ಬಂದಿ ರೋಗಿಗಳಿಂದ ಹಣ ಕೇಳುತ್ತಿದ್ದು, ಕೊಡದಿದ್ದರೆ ಚಿಕಿತ್ಸೆ ನೀಡುತ್ತಿಲ್ಲ. ಡಾ.ಈಶ್ವರ ಸವಡಿ, ಸರ್ವಾಧಿಕಾರ ಧೋರಣೆಯಿಂದ ವರ್ತಿಸುತ್ತಿದ್ದು, ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಮಿತಿ ಪದಾಧಿಕಾರಿಗಳಾದ ಮೋಯಿನುದ್ದೀನ್, ವಿರೂಪಾಕ್ಷಪ್ಪ, ಶಂಕ್ರಪ್ಪ, ಕನಕಪ್ಪ ಇತರರು ಆರೋಪಿಸಿದರು.

    ಡಾ.ಈಶ್ವರ ಸವಡಿ ಪ್ರತಿಕ್ರಿಯಿಸಿ, ಸಿಬ್ಬಂದಿ ಹಣ ಕೇಳಿದ್ದರೆ, ಲಿಖಿತ ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು. ಏಕಾಏಕಿ ಆಸ್ಪತ್ರೆಗೆ ನುಗ್ಗಿ, ವಿಡಿಯೋ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಎಲ್ಲವೂ ಸಿಸಿ ಕ್ಯಾಮರಾಗದಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಲಾಗುವುದು ಎಂದರು.

    ಸ್ಕಾೃನಿಂಗ್ ವ್ಯವಸ್ಥೆ ಸರಿಯಿಲ್ಲ
    ವೈದ್ಯ ಸಿಬ್ಬಂದಿ ಯಾವುದೇ ಹಣ ಕೇಳಿಲ್ಲ, ಕೇಳಿದ್ರೆ ದಾಖಲೆ ಸಮೇತ ನೀಡಿ. ಈ ರೀತಿ ಗಲಾಟೆ ಮಾಡಿದ್ದಕ್ಕೆ ಆಸ್ಪತ್ರೆಯಲ್ಲಿ ಕೆಲಸ ಮಾಡಲು ತಜ್ಞ ವೈದ್ಯರು ಬರುತ್ತಿಲ್ಲ. ಸ್ಕಾೃನಿಂಗ್ ಸೇರಿ ಇತರ ವ್ಯವಸ್ಥೆ ಸರಿಯಿಲ್ಲ. ಬೇಕಾದ್ರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಕಾರ್ಯಕರ್ತರಿಗೆ ಡಾ.ಈಶ್ವರ ಸವಡಿ ಸವಾಲು ಹಾಕಿದರು. ಪರಿಸ್ಥಿತಿ ತಿಳಿಗೊಳಿಸಲು ಬಂದಿದ್ದ ಡಿವೈಎಸ್ಪಿ ಅರ್.ಎಸ್. ಉಜ್ಜನಕೊಪ್ಪ, ವಿಡಿಯೋ ಮಾಡುತ್ತಿದವರನ್ನು ತಡೆದು, ಡಿಲೀಟ್ ಮಾಡುವಂತೆ ತಿಳಿಸಿದರು. ಸಮಾಧಾನ ಚಿತ್ತದಿಂದ ಸ್ಪಂದಿಸಬೇಕಾದ ಡಾ.ಈಶ್ವರ ಸವಡಿ, ಹರಿಹಾಯ್ದಿದ್ದು ಸರಿಯಲ್ಲವೆಂದು ಸ್ಥಳದಲ್ಲಿದವರು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts