More

    ಬೆಳಕು ಕಾಣದ ರಾಷ್ಟ್ರೀಯ ಹೆದ್ದಾರಿ

    ಕೊಳ್ಳೇಗಾಲ ಚಿಕ್ಕಮಾಳಿಗೆ
    ಪಟ್ಟಣದ ಮಧ್ಯೆ 6.5 ಕಿ.ಮೀ. ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ಬೀದಿದೀಪ ಅಳವಡಿಸದ ಕಾರಣ ನಿತ್ಯ ರಾತ್ರಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಅವಘಡದ ಭೀತಿ ಆವರಿಸಿದೆ.

    2018ರ ಜೂನ್‌ನಲ್ಲಿ ಪಟ್ಟಣದ ಮೈಸೂರು ರಸ್ತೆಯ ಮುಡಿಗುಂಡ ಸೇತುವೆಯಿಂದ ಬಸ್ ನಿಲ್ದಾಣ, ಎಂಜಿಎಸ್‌ವಿ ಕಾಲೇಜು, ತಾಪಂ ವೃತ್ತ, ಐಬಿ ವೃತ್ತ, ಬದರನ್ ಚರ್ಚ್, ಎಸ್‌ವಿಕೆ ಕಾಲೇಜು, ಎಂಸಿಕೆಸಿ ಶಾಲೆ, ಆನಂದಜ್ಯೋತಿ, ಹೊಸ ಅಣಗಳ್ಳಿ ಮಾರ್ಗದ ಪಾಪನಕೆರೆವರೆಗೆ ಹೆದ್ದಾರಿ ನಿರ್ಮಿಸಲಾಗಿದೆ. ಈ ಪೈಕಿ ಪಟ್ಟಣದ ಹೃದಯ ಭಾಗದಲ್ಲಿ 2.5 ಕಿ.ಮೀ. ಕಾಂಕ್ರೀಟ್, ಉಳಿದೆಡೆ ಡಾಂಬರು ರಸ್ತೆ ನಿರ್ಮಿಸಲಾಗಿದೆ.

    ಹೆದ್ದಾರಿಯ ವಿಭಜಕ ಸೇರಿ ಅಲ್ಲಲ್ಲಿ ರಸ್ತೆಯ 2 ಕಡೆ 2.16 ಕೋಟಿ ರೂ. ವೆಚ್ಚದಲ್ಲಿ ಒಟ್ಟು 216 ವಿದ್ಯುತ್ ಕಂಬಗಳ ಅಳವಡಿಕೆಗೆ ಸ್ಥಳ ಗುರುತಿಸಲಾಗಿದೆ. ಆದರೆ, ಇದುವರೆಗೂ ವಿದ್ಯುತ್ ಕಂಬ ಮತ್ತು ದೀಪಗಳನ್ನು ಅಳವಡಿಸಿಲ್ಲ. ಪರಿಣಾಮ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.

    ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್‌ಗಳು ಪಟ್ಟಣದೊಳಗೆ ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ಡಿವೈಡರ್‌ಗೆ ವಿದ್ಯುತ್ ಕಂಬ ಮತ್ತು ದೀಪ ಅಳವಡಿಕೆಗೆ ಅಗತ್ಯ ಅನುದಾನ ಮೀಸಲಿರಿಸಿ, ಕ್ರೀಯಾ ಯೋಜನೆ ಸಿದ್ಧಪಡಿಸದ ಕಾರಣ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.

    ಕಳೆದ 2 ವರ್ಷಗಳಿಂದಲೂ ಪಟ್ಟಣದ ಚತುಷ್ಪಥ ರಸ್ತೆಗೆ ವಿದ್ಯುತ್‌ದೀಪ ಅಳವಡಿಸದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ ಹಾಗೂ ಬೀದಿದೀಪಗಳಿಲ್ಲದೆ ಹೆದ್ದಾರಿ ಅಂದವನ್ನು ಕಳೆದುಕೊಂಡಿದೆ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಲಿ.
    ಡಿ.ಉಮಾಶಂಕರ್, ಬಸವೇಶ್ವರನಗರ ನಿವಾಸಿ, ಕೊಳ್ಳೇಗಾಲ

    ಪಟ್ಟಣದೊಳಗೆ ಹಾದು ಹೋಗಿರುವ ಚತುಷ್ಪಥ ರಸ್ತೆಯ ಡಿವೈಡರ್‌ಗೆ ವಿದ್ಯುತ್ ಕಂಬ ಹಾಗೂ ದೀಪ ಅಳವಡಿಸಲು 2.16 ಕೋಟಿ ರೂ. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇನ್ನೂ ಅನುದಾನ ಬಂದಿಲ್ಲ. ಈ ಕುರಿತು ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ನಗರಸಭೆಯ 15ನೇ ಹಣಕಾಸು ಯೋಜನೆಯಡಿ 47 ಲಕ್ಷ ರೂ. ಬಳಸಿಕೊಂಡು ಆಯ್ದ ಕಡೆಗಳಲ್ಲಿ ಸದ್ಯಕ್ಕೆ ಬೀದಿದೀಪ ಅಳವಡಿಸಲು ಕ್ರಮವಹಿಸಲಾಗಿದೆ.
    ನಾಗಶೆಟ್ಟಿ, ನಗರಸಭೆ ಆಯುಕ್ತ, ಕೊಳ್ಳೇಗಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts