More

    ಕುಂದಾಪುರ ಫ್ಲೈಓವರ್ 2 ತಿಂಗಳ ಗಡುವು

    ಉಡುಪಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಈ ಹಿಂದೆ ಭರವಸೆ ನೀಡಿದಂತೆ ಪಡುಬಿದ್ರಿ ರಸ್ತೆ ಮತ್ತು ಕುಂದಾಪುರದ ಶಾಸ್ತ್ರಿ ಸರ್ಕಲ್ ಫ್ಲೈಓವರ್ ಕಾಮಗಾರಿ ಮಾ.31ಕ್ಕೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಏ.1ರಿಂದ ಟೋಲ್ ಸಂಗ್ರಹ ಸ್ಥಗಿತಗೊಳಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು. ಬುಧವಾರ ಜಿಲ್ಲಾ ಪಂಚಾಯಿತಿ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮಿತಿ(ದಿಶಾ) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಕ್ರಿಯಿಸಿದ ಎನ್‌ಎಚ್ ಅಧಿಕಾರಿಗಳು, ಪಂಪ್‌ವೆಲ್ ಫ್ಲೈಓವರ್ ಪೂರ್ಣಗೊಂಡಿದ್ದು, ಇಲ್ಲಿನ ಎಲ್ಲ ಕಾರ್ಮಿಕರು ಹಾಗೂ ಯಂತ್ರಗಳನ್ನು ಕುಂದಾಪುರ ಶಾಸ್ತ್ರಿ ಸರ್ಕಲ್ ಫ್ಲೈಓವರ್ ಕಾಮಗಾರಿಗೆ ಬಳಸಲಾಗುತ್ತದೆ. ಏಪ್ರಿಲ್ ಅಂತ್ಯದೊಳಗೆ ಎರಡೂ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದರು. ಇದಕ್ಕೊಪ್ಪದ ಸಂಸದೆ, ಗಡುವಿನೊಳಗೆ ಕಾಮಗಾರಿ ಮುಗಿಸಲು ಸೂಚಿಸಿದರು. ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಡ್ಡಿಯಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಮಳೆಗಾಲಕ್ಕೂ ಮೊದಲೇ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.  ಪ್ರತಿಕ್ರಿಯಿಸಿದ ಅಧಿಕಾರಿಗಳು, ಇಂದ್ರಾಳಿ ರೈಲ್ವೆ ಬ್ರಿಡ್ಜ್ ಪ್ರಸ್ತಾವನೆ ಕೊಂಕಣ ರೈಲ್ವೆ ಇಲಾಖೆಯಲ್ಲಿ ಬಾಕಿಯಾಗಿದೆ. ಪೆರ್ಡೂರು ಸೇತುವೆಗೆ 13 ಕೋಟಿ ರೂ. ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮಲ್ಪೆ-ಕರಾವಳಿ ಜಂಕ್ಷನ್ ರಸ್ತೆ ವಿಸ್ತರಣೆಗೆ 50 ಕೋಟಿ ರೂ. ಅನುದಾನ ಮಂಜೂರಾಗಿದೆ. 3 ತಿಂಗಳೊಳಗೆ ಭೂಸ್ವಾಧೀನ ಮತ್ತು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮಳೆಗಾಲದ ನಂತರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಶಾಸಕ ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಡುಪಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿಲ್ಲಾಧಿಕಾರಿ ಜಿ ಜಗದೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇ ಗೌಡ ಮತ್ತಿತರರಿದ್ದರು.

    ನಗದು ರಹಿತ ಸೇವೆ: ಕಾಡೂರು ಗ್ರಾಮ ಪಂಚಾಯಿತಿಯಲ್ಲಿ ಪೈಲಟ್ ಯೋಜನೆಯಡಿ ನಗದು ರಹಿತ ಸೇವೆ ಶೇ.78 ಫಲಿತಾಂಶ ಲಭಿಸಿದ್ದು, ಈ ಸೇವೆಯನ್ನು 15 ಗ್ರಾಪಂಗಳಿಗೆ ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಪಂಗಳು ನಗದು ರಹಿತ ಸೇವೆ ನೀಡಲಿವೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಮಾಹಿತಿ ನೀಡಿದರು.

    ಮಾತೃಪೂರ್ಣ ಶೇ.20 ಮಾತ್ರ ಬಳಕೆ: ಮಾತೃ ಪೂರ್ಣಯೋಜನೆಯಿಂದ ಗರ್ಭಿಣಿ ಮತ್ತು ಬಾಣಂತಿ ತಾಯಿಯರಿಗಾಗುವ ತೊಂದರೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ಫಲಾನುಭವಿಗಳಿಗೆ ನಗದು ಹಣ ಅಥವಾ ದವಸ ಧಾನ್ಯಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಸಂಸದೆ ಹೇಳಿದರು. ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ಶೇಷಪ್ಪ, ಜಿಲ್ಲೆಯಲ್ಲಿ ಶೇ.20ರಷ್ಟು ಮಂದಿ ಮಾತ್ರ ಯೋಜನೆ ಲಾಭ ಪಡೆಯುತ್ತಿದ್ದು, ಈ ವಿಷಯವನ್ನು ಸಚಿವರ ಗಮನಕ್ಕೂ ತರಲಾಗಿದೆ. ಬದಲಿ ವ್ಯವಸ್ಥೆಗೆ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

    ಏನೇನು ಸೂಚನೆ?:
    – ಅಲೆವೂರಿನಲ್ಲಿ ಕೇಂದ್ರೀಯ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ಯತ್ನ
    – ಪ್ರತಿ ಬಾರಿಯೂ ಸಭೆಗೆ ಗೈರಾಗುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸು ಜಾರಿ
    – ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲ ಎಂದು ರೋಗಿಗಳನ್ನು ಬೇರೆಡೆ ಕಳುಹಿಸುವಂತಿಲ್ಲ.
    – ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರಿನ ಕಟ್ಟಡದ ಕೆಳಅಂತಸ್ತು 2 ಮಹಡಿಗೆ ಸೀಮಿತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts