More

    ನೋಡಬನ್ನಿ ತಲೆ ಎತ್ತಿ ನಿಂತಿದೆ ರಾಷ್ಟ್ರಲಾಂಛನ

    ಗಣೇಶ್ ಕಮ್ಲಾಪುರ ದಾವಣಗೆರೆ: ಅದೊಂದು ಪುಟ್ಟ ಗ್ರಾಮ. ಅಲ್ಲಿ ನಿಂತ 23.5 ಅಡಿಯ ರಾಷ್ಟ್ರಲಾಂಛನ ಹಾಗೂ 22 ಅಡಿ ಎತ್ತರದ ಧ್ವಜಸ್ತಂಭ ರಾಷ್ಟ್ರಾಭಿಮಾನವನ್ನು ಬಡಿದೆಬ್ಬಿಸುತ್ತಿದೆ. ಸಾಲದೆಂಬಂತೆ ಜಿಲ್ಲೆಯಲ್ಲೇ ಇದು ದೊಡ್ಡ ರಾಷ್ಟ್ರಲಾಂಛನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಇದನ್ನು ನೋಡಲು ನೀವು ಹರಿಹರ ತಾಲೂಕಿನ ಕಮಲಾಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರಬೇಕು.

    ಗ್ರಾಮದಲ್ಲಿದ್ದ 22 ಕ್ಕೂ ಹೆಚ್ಚಿನ ಸ್ವಾತಂತ್ರೃಹೋರಾಟಗಾರರ ಸ್ಮರಣೆ ಹಾಗೂ ಯುವಕರಲ್ಲಿ ದೇಶಾಭಿಮಾನ ಹೆಚ್ಚಿಸಲು ಏನಾದರೂ ಮಾಡಬೇಕೆಂದು ಆಲೋಚಿಸಿದಾಗ ಹೊಳೆದದ್ದೇ ಈ ಪರಿಕಲ್ಪನೆ. ಶಾಲಾವರಣದಲ್ಲಿ ರಾಷ್ಟ್ರೀಯ ಲಾಂಛನ ಸ್ಥಾಪಿಸಬೇಕೆಂಬ ಗ್ರಾಮಸ್ಥರ ಬಹುದಿನದ ಕನಸನ್ನು 2007ರಲ್ಲಿ ಕಾರ್ಯಗತಗೊಳಿಸಿದ್ದು ಅಂದಿನ ಶಿಕ್ಷಕ ಕರಿಬಸಪ್ಪ ಬಸಲಿಯವರು. ಇದನ್ನು ನಿರ್ಮಿಸಿದವರು ಜಿಲ್ಲೆಯ ಹಿಂಡಸಗಟ್ಟೆಯ ಗ್ರಾಮದ ಶಿಲ್ಪಿ ಜೆ.ಜೆ. ಶಿವಾನಂದಪ್ಪ. ಇದೆಲ್ಲಕ್ಕೂ ಸಾಥ್ ನೀಡಿದ್ದು ಆಗಿನ ಮುಖ್ಯ ಶಿಕ್ಷಕರಾಗಿದ್ದ ಜಿ.ಎಂ. ಮಲ್ಲಿಕಾರ್ಜುನಯ್ಯ, ಎ.ಕೆ. ಮಂಜಪ್ಪ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಬಿ. ಕುರುವತ್ಯಪ್ಪನವರು.

    ತಮ್ಮ ದೇಶಾಭಿಮಾನ ತೋರ್ಪಡಿಸಲು ಗ್ರಾಮಸ್ಥರು ಯಾರೆದುರೂ ಕೈಚಾಚಲಿಲ್ಲ. ಶಿಕ್ಷಕರು, ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರೆಲ್ಲ ಹಣ ಕೂಡಿಸಿದರು. 1.25 ಲಕ್ಷ ರೂ. ಗೂ ಅಧಿಕ ಮೊತ್ತದಲ್ಲಿ ರಾಷ್ಟ್ರಲಾಂಛನ ತಲೆ ಎತ್ತಿತು. ಈಗ ರಾಷ್ಟ್ರೀಯ ದಿನಗಳಂದು ಇಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಗ್ರಾಮಸ್ಥರು ಸಾರ್ಥಕ್ಯ ಭಾವ ಅನುಭವಿಸುತ್ತಾರೆ.

    ಮಾಹಿತಿಯ ಆಗರ: ಶಾಲೆಯಲ್ಲಿ ರಾಷ್ಟ್ರಲಾಂಛನದಿಂದ ಮಾತ್ರ ಗಮನ ಸೆಳೆದಿಲ್ಲ. ಬದಲಾಗಿ, ಇದು ಮಾಹಿತಿಗಳ ಭಂಡಾರವಾಗಿದೆ. ಧ್ವಜಕಟ್ಟೆಯ ಸುತ್ತ 8 ರಾಷ್ಟ್ರೀಯ ಚಿಹ್ನೆಗಳನ್ನು ಮಾಹಿತಿ ಸಮೇತ ಚಿತ್ರಿಸಲಾಗಿದೆ.

    ತ್ರಿವರ್ಣ ಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಗೀತೆ ವಂದೇ ಮಾತರಂ, ರಾಷ್ಟ್ರೀಯ ಪಂಚಾಂಗ, ರಾಷ್ಟ್ರೀಯ ವೃಕ್ಷ ಆಲದ ಮರ, ರಾಷ್ಟ್ರಪಕ್ಷಿ ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಹೂವು ಕಮಲ, ಇವುಗಳ ಮಹತ್ವ, ಇವುಗಳನ್ನು ರಕ್ಷಿಸುವಲ್ಲಿ ಕಾನೂನಿನ ಪಾತ್ರ, ಮತ್ತಿತರ ಮಾಹಿತಿಗಳು ಗ್ರಾನೈಟ್ ಶಿಲೆಯಲ್ಲಿ ಕೆತ್ತನೆಯಾಗಿವೆ.

    ಧ್ವಜಸ್ತಂಭ ಹಾಗೂ ರಾಷ್ಟ್ರಲಾಂಛನವನ್ನು ಸಂಪೂರ್ಣವಾಗಿ ಸಿಮೆಂಟ್‌ನಲ್ಲೇ ನಿರ್ಮಿಸಿದ್ದು, ಬಂಗಾರ ವರ್ಣದ ಲಾಂಛನ ಹಾಗೂ ಬಣ್ಣಗಳ ಮೂಲಕ ಬಿಡಿಸಿರುವ ಇತರೆ ಚಿಹ್ನೆಗಳು ನೋಡುಗರನ್ನು ಸೆಳೆಯುವ ಜತೆಗೆ ವಿದ್ಯಾರ್ತಿಗಳಲ್ಲಿ ರಾಷ್ಟ್ರಭಿಮಾನ ಮೂಡಿಸುತ್ತವೆ ಎಂದು ಮಾಹಿತಿ ನೀಡುತ್ತಾರೆ ಶಿಕ್ಷಕ ರಾಮನಗೌಡ ಪ್ಯಾಟಿ.

    ಇವುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸ್ಥಳಾಂತರಿಸುವಂತೆ ಸುಲಭ ತಂತ್ರಜ್ಞಾನವನ್ನು ಸಹ ಇಲ್ಲಿ ಅಳವಡಿಸಲಾಗಿದ್ದು, ಇವುಗಳನ್ನು ಮುಟ್ಟದಂತೆ ಸುತ್ತಲೂ ತಡೆಯನ್ನು ಸಹ ನಿರ್ಮಿಸಲಾಗಿದೆ.

    ಸ್ವಾತಂತ್ರೃಹೋರಾಟಕ್ಕೆ ಹೆಚ್ಚಿನ ಹೋರಾಟಗಾರರನ್ನು ನೀಡಿದ ಗ್ರಾಮ ಕಮಲಾಪುರ. ಅವರ ನೆನಪು ಚಿರಸ್ಥಾಯಿಯಾಗಿರಲು ಶಾಲೆಯಲ್ಲಿ ರಾಷ್ಟ್ರಲಾಂಛನ ನಿರ್ಮಿಸಲಾಗಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ, ಸ್ವಾತಂತ್ರೃದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.
    ಎಂ. ಚಂದ್ರಶೇಖರಪ್ಪ, ಎಸ್‌ಡಿಎಂಸಿ ಅಧ್ಯಕ್ಷ.

    ನಮ್ಮ ಶಾಲೆ ನಮ್ಮ ಹೆಮ್ಮೆ. ನಮ್ಮ ಶಾಲೆಗೆ ಹಿರಿಮೆ ಬಂದಿರುವುದೇ ಈ ರಾಷ್ಟ್ರಲಾಂಛನದಿಂದ. ಇದರಿಂದ ಶಾಲೆ ಮಕ್ಕಳು ಹಾಗೂ ಗ್ರಾಮಸ್ಥರಲ್ಲಿ ರಾಷ್ಟ್ರಪ್ರೇಮ ಮೂಡಿರುವುದರ ಜತೆಗೆ ದೇಶದ ಇತಿಹಾಸ ಕೂಡಾ ಅರಿಯಬಹುದಾಗಿದೆ.
    ಟಿ.ಡಿ. ಮಂಜುನಾಥ್, ಮುಖ್ಯ ಶಿಕಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts