ಬೆಳಗಾವಿ: ದೇಶದ ಸುರಕ್ಷತೆಗೆ ಮಾರಕವಾಗಿದ್ದ ಜಮ್ಮು ಕಾಶ್ಮೀರದ 365ನೇ ವಿಧಿ ರದ್ದತಿ, ಮುಸ್ಲಿಂ ಮಹಿಳೆಯರ ಜೀವನ ಕಿತ್ತು ತಿನ್ನುತ್ತಿದ್ದ ತ್ರಿವಳಿ
ತಲಾಕ್ ನಿಷೇಧ ಮತ್ತು ಕರೊನಾ ಮಹಾಮಾರಿ ಹಾವಳಿ ಸಂದರ್ಭದಲ್ಲಿ 20 ಲಕ್ಷ ಕೋಟಿ ರೂ.ಪ್ಯಾಕೇಜ್ ಆತ್ಮ ನಿರ್ಭರ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಶಕ್ತ ಭಾರತ ನಿರ್ಮಾಣ ಮಾಡಿದ್ದಾರೆ ಎಂದು ಜಿಲ್ಲಾ ಗ್ರಾಮೀಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ 70ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ಬೆನಕನಹಳ್ಳಿಯ ಸರ್ಕಾರಿ ಕನ್ನಡ-ಮರಾಠಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನ ಹಾಗೂ ಕರೊನಾ ಸೇನಾನಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಮಾತನಾಡಿ, ಶತಮಾನಗಳ ರಾಮಮಂದಿರ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಿದ ಮೋದಿಯವರು ದೇಶದ ಜನತೆಗೆ ಸುಭದ್ರ ಆಡಳಿತ ನೀಡುತ್ತಿದ್ದಾರೆ. ಜನಸಾಮನ್ಯರ ಕಷ್ಟ ಅರಿತಿರುವ ಅವರು ಕೃಷಿಕರು, ಕೂಲಿಕಾರ್ಮಿರಿಗೆ ಹಾಗೂ ಬೀದಿ ವ್ಯಾಪಾರಸ್ಥರಿಗೆ ಸಾಹಯಹಸ್ತ ನೀಡಿದ್ದಾರೆ. ಜತೆಗೆ ದೇಶದ ಕಾಯಕ ಜೀವಿಗಳಿಗೆ ಅಭಯ ನೀಡಿದ್ದಾರೆ ಎಂದರು.
ನಂತರ ಗಣೇಶಪುರದಲ್ಲಿರುವ ‘ಜೇಸಸ್ ಕೇರ್ಸ್’ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಘಟಕದ ಪದಾಧಿಕಾರಿಗಳು ಹಣ್ಣು ವಿತರಿಸಿದರು. ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ ಎಫ್.ಎಸ್. ಸಿದ್ಧನಗೌಡರ, ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ, ಜಿಲ್ಲಾ ಕಾರ್ಯದರ್ಶಿ ರಂಜನಾ ಕೋಲಕಾರ, ಶಾಲು ಫರ್ನಾಂಡೀಸ್, ಡಾ.
ಯಲ್ಲಪ್ಪ ಪಾಟೀಲ, ಅರುಣ ಕೋಲಕಾರ, ಅಭಯ ಅವಲಕ್ಕಿ, ಬಾಪು ಪಾಟೀಲ, ನಿತಿನ್ ಚೌಗಲಾ ಹಾಗೂ ಕಾರ್ಯಕರ್ತರು ಇದ್ದರು.