More

    ಕರೊನಾ ನಂತರ ಮೊದಲನೇ ಬಾರಿ ವಾರಣಾಸಿಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ; ಆರು ಲೇನ್​ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ

    ವಾರಣಾಸಿ: ಕರೊನಾ ಸೋಂಕು ದೇಶಕ್ಕೆ ಬಂದ ನಂತರ ಇದೇ ಮೊದಲನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ ದೇವ್​ ದೀಪಾವಳಿ ಹಬ್ಬವನ್ನು ಪ್ರಧಾನಿಯವರು ಇಂದು ಆಚರಿಸುತ್ತಿದ್ದಾರೆ.

    ಇದೇ ಸಮಯದಲ್ಲಿ ಪ್ರಧಾನಿಯವರು ಪ್ರಯಾಗ್​ರಾಜ್​- ವಾರಣಾಸಿ ನಡುವಿನ ಆರು ಲೇನ್​ ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ. 73 ಕಿ.ಮೀ ಉದ್ದದ ಈ ಹೆದ್ದಾರಿಯನ್ನು 2,447 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆ. ಈ ಹಿಂದೆ ಹೆದ್ದಾರಿಯು ನಾಲ್ಕು ಲೇನ್​ ಹೆದ್ದಾರಿಯಾಗಿತ್ತು.

    ಈ ಹೆದ್ದಾರಿಯು ವಾರಣಾಸಿ ಮತ್ತು ಪ್ರಯಾಗ್​ರಾಜ್​ ನಡುವಿನ ಸಂಪರ್ಕವನ್ನು ಸುಲಭಗೊಳಿಸಲಿದೆ. ಕಳೆದ ಕೆಲವು ವರ್ಷಗಳಿಂದ ಕಾಶಿಯನ್ನು ಸುಂದರಗೊಳಿಸುವುದರ ಜತೆಯಲ್ಲಿ ಹೆಚ್ಚಿನ ಸಂಪರ್ಕವನ್ನು ಬೆಳೆಸಲಾಗುತ್ತಿದೆ. ವಾರಣಾಸಿಯ ಜನರಿಗೆ ಬದುಕನ್ನು ಸುಲಭಗೊಳಿಸುವುದು ನನ್ನ ಉದ್ದೇಶವಾಗಿದೆ ಎಂದು ಪ್ರಧಾನಿಯವರು ಹೇಳಿದ್ದಾರೆ.

    ಇಲ್ಲಿನ ಹಣ್ಣು, ತರಕಾರಿ ಲಂಡನ್​, ದುಬೈಗೂ ತಲುಪಿದೆ. ದೇಶದಲ್ಲಿ ರೈತರಿಗೆ ಎಷ್ಟರ ಮಟ್ಟಿಗೆ ಬೆಂಬಲ ನೀಡಲಾಗಿದೆ, ಎಷ್ಟರ ಮಟ್ಟಿಗೆ ಸೌಲಭ್ಯ ಎನ್ನುವುದಕ್ಕೆ ಚಂದೋಲಿ ಕಪ್ಪು ಅಕ್ಕಿಯೇ ಸಾಕ್ಷಿ. ಒಂದು ಗ್ರಾಮಕ್ಕೆ, ನಗರಕ್ಕೆ ಸೀಮಿತವಾಗಿದ್ದ ಈ ಅಕ್ಕಿ ಇದೀಗ ದೇಶ ವಿದೇಶದಲ್ಲಿ ಮಾರಾಟವಾಗುತ್ತಿದೆ. ಎಲ್ಲ ಅಕ್ಕಿಗಳಲ್ಲಿ ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಬೆಲೆಗೆ ಈ ಅಕ್ಕಿ ಮಾರಾಟವಾಗುತ್ತಿದೆ. ಪ್ರಧಾನ ಮಂತ್ರಿ ಫಸಲ್​ ಭೀಮಾ ಯೋಜನೆಯಿಂದಾಗಿ 4 ಕೋಟಿ ಕುಟುಂಬಗಳಿಗೆ ಸಹಾಯವಾಗಿದೆ. 47 ಲಕ್ಷ ಹೆಕ್ಟೇರ್​ ಜಮೀನಲ್ಲಿ ಮೇಕ್ರೋ ಇರ್ರಿಗೇಷನ್​ ಮಾಡಲಾಗಿದೆ ಎಂದು ಪ್ರಧಾನಿ ಅವರು ಹೇಳಿದ್ದಾರೆ.

    ಚಿಕ್ಕ ಚಿಕ್ಕ ರೈತರಿಗೆ ಮಂಡಿಯಲ್ಲಿ ಆಗುತ್ತಿದ್ದ ಮೋಸಕ್ಕೆ ಅಂತ್ಯ ಹಾಡಲಾಗಿದೆ. ಈಗ ಅತ್ಯಂತ ಚಿಕ್ಕ ರೈತನಿಗೆ ಕೂಡ ಕಾನೂನಾತ್ಮಕವಾಗಿ ರಕ್ಷಣೆ ಸಿಕ್ಕಿದೆ ಎಂದು ಅವರು ಹೇಳಿದರು.

    ಹೆದ್ದಾರಿ ಉದ್ಘಾಟನೆ ಜತೆಗೆ ಪ್ರಧಾನಿಯವರು ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್​ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ. ಐದು ಸಾವಿರ ಜನರ ಮೆರವಣಿಗೆಯನ್ನು ವೀಕ್ಷಿಸಲಿದ್ದಾರೆ. ರಾಜ್​ ಘಾಟ್​ನಲ್ಲಿ ದೀಪ ಹಚ್ಚುವ ಮೂಲಕ ಹಬ್ಬ ಆಚರಿಸಲಿದ್ದಾರೆ. ನಂತರ ಗಂಗಾ ನದಿಯ ದಡದಲ್ಲಿ 11 ಲಕ್ಷ ದೀಪಗಳನ್ನು ಹಚ್ಚಲಾಗುವುದು.

    ಪ್ರತಿ ವರ್ಷ ಕಾರ್ತಿಕ ಮಾಸದ ಪೂರ್ಣಿಮೆಯಂದು ದೇವ್​ ದೀಪಾವಳಿಯನ್ನು ವಾರಣಾಸಿಯಲ್ಲಿ ಆಚರಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts