More

    ಹೊಸ ಅಧ್ಯಕ್ಷರಿಗೆ ಸಮಸ್ಯೆಗಳ ಸರಮಾಲೆಯ ಸ್ವಾಗತ

    ನರೇಗಲ್ಲ: ನರೇಗಲ್ಲ ಪಟ್ಟಣ ಪಂಚಾಯಿತಿಗೆ ಎರಡು ವರ್ಷಗಳ ನಂತರ ಆಡಳಿತ ಮಂಡಳಿ ರಚನೆಯಾಗಿದೆ. ನೂತನ ಅಧ್ಯಕ್ಷೆ ಅಕ್ಕಮ್ಮ ಮಣ್ಣೋಡ್ಡರ ಮುಂದೆ ಸಮಸ್ಯೆಗಳ ಸರಮಾಲೆಯೇ ಇದೆ.

    ಕೋಡಿಕೊಪ್ಪ, ಕೋಚಲಾಪೂರ, ದ್ಯಾಂಪೂರ, ಮಲ್ಲಾಪೂರ, ತೋಟಗಂಟಿ ಸೇರಿ 17 ವಾರ್ಡ್​ಗಳ ವ್ಯಾಪ್ತಿಯನ್ನು ಸ್ಥಳೀಯ ಪಪಂ ಹೊಂದಿದೆ. ಎರಡು ವರ್ಷಗಳಿಂದ ಪಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಎಲ್ಲೆಂದರಲ್ಲಿ ಅನೈರ್ಮಲ್ಯ, ಅವೈಜ್ಞಾನಿಕ ಕಾಮಗಾರಿಗಳಿಂದ ಕಿತ್ತು ಹೋಗಿರುವ ಸಿಸಿ ರಸ್ತೆಗಳು, ತುಂಬಿ ತುಳುಕುತ್ತಿರುವ ಚರಂಡಿಗಳು, ಕಳೆದ 10 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಆಶ್ರಯ ಮನೆಗಳ ನಿರ್ಮಾಣ ಮತ್ತು ಹಂಚಿಕೆ, ಅಧ್ವಾನವಾಗಿರುವ ಸಾರ್ವಜನಿಕ ಉದ್ಯಾನ, ಹಾಳು ಕೊಂಪೆಯಾಗಿರುವ ಸಾರ್ವಜನಿಕ ಗ್ರಂಥಾಲಯ, ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಗ್ರಹಣ ಹಿಡಿದಿರುವುದು, ಪಪಂ ಆದಾಯದ ಮೂಲವಾಗಿರುವ ವಾಣಿಜ್ಯ ಮಳಿಗೆಗಳ ಲಕ್ಷಾಂತರ ರೂ.ಗಳ ಬಾಡಿಗೆ ಬಾಕಿ, ಹಾಳು ಕೊಂಪೆಯಾಗಿರುವ ಐತಿಹಾಸಿಕ ನಾಗರಕೆರೆ, ಹಿರೇಕೆರೆಗಳು… ಇಂತಹ ಹತ್ತಾರು ಸಮಸ್ಯೆಗಳಿಂದ ಪಟ್ಟಣ ಸೊರಗುತ್ತಿದೆ.

    ನರೇಗಲ್ಲ ಪಪಂಗೆ ಕಳೆದ 5 ವರ್ಷಗಳಿಂದ ಕಾಯಂ ಇಂಜಿನಿಯರ್ ಇಲ್ಲ. ಜಿಲ್ಲೆಯ ಬೇರೆ ಸ್ಥಳೀಯ ಸಂಸ್ಥೆಯ ಇಂಜಿನಿಯರ್​ಗಳನ್ನು ವಾರದಲ್ಲಿ ಎರಡು, ಮೂರು ದಿನಕ್ಕೆ ಪ್ರಭಾರಿಯಾಗಿ ನೇಮಿಸಲಾಗುತ್ತದೆ. ಅವರು ಸಮರ್ಪಕವಾಗಿ ಬಾರದೆ, ಬಹುತೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ನಡೆದಿರುವ ಕೆಲ ಕಾಮಗಾರಿಗಳು ಕಳಪೆಯಾಗಿವೆ ಎಂಬ ಆರೋಪ ಕೇಳಿಬರುತ್ತಿದೆ.

    ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕಗಳು: ಪಪಂ ವ್ಯಾಪ್ತಿಯಲ್ಲಿ ಒಟ್ಟು 10 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಎಂಟು ಘಟಕಗಳು ದುರಸ್ತಿಯಲ್ಲಿವೆ. ದತ್ತಾತ್ರೇಯ ದೇವಸ್ಥಾನದ ಹತ್ತಿರದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹಿರೇಕೆರೆಯ ದಂಡೆಯ ಮೇಲಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ.

    ಸ್ಮಶಾನಗಳ ದುಸ್ಥಿತಿ: ಪಟ್ಟಣದಲ್ಲಿ ವಿವಿಧ ಸಮುದಾಯಗಳ ಸ್ಮಶಾನಗಳಿದ್ದರೂ, ಅವು ಹಾಳು ಕೊಂಪೆಯಂತಾಗಿವೆ. ಸ್ಮಶಾನಗಳಿಗೆ ಸಂರ್ಪಸುವ ರಸ್ತೆಗಳು ಹಾಳಾಗಿವೆ. ಸ್ಮಶಾನದಲ್ಲಿ ಜಾಲಿ ಕಂಟಿ ಬೆಳೆದಿದ್ದು, ಶವಸಂಸ್ಕಾರಕ್ಕೆ ಹೋಗದ ಪರಿಸ್ಥಿತಿ ನಿರ್ವಣವಾಗಿದೆ. ಇತ್ತೀಚೆಗೆ, ಕುಡುವಕ್ಕಲಿಗ ಸಮಾಜದ ವ್ಯಕ್ತಿಯೊಬ್ಬರು ಮೃತಪಟ್ಟಾಗ ಸ್ಮಶಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದನ್ನು ಖಂಡಿಸಿ, ಪಪಂ ಕಾರ್ಯಾಲಯದ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ್ದರು.

    ಪಟ್ಟಣದ ವಸತಿ ರಹಿತರಿಗಾಗಿ ದ್ಯಾಂಪೂರ ಗ್ರಾಮದ ಹತ್ತಿರ 2010ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಹಾಲಿ ಶಾಸಕ ಕಳಕಪ್ಪ ಬಂಡಿ ಸುಮಾರು 40 ಎಕರೆ ಭೂಮಿ ಖರೀದಿಸಿ 1246 ಆಶ್ರಯ ಮನೆಗಳ ನಿರ್ವಣಕ್ಕೆ ಚಾಲನೆ ನೀಡಿದ್ದರು. ಆದರೆ, 150 ಮನೆಗಳು ನಿರ್ವಣವಾಗಿ 96 ಮನೆಗಳಿಗೆ ಅಡಿಪಾಯ ಹಾಕಿದ್ದು ಬಿಟ್ಟರೆ, ಕಳೆದ 10 ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ನಿರ್ವಣವಾಗಿರುವ ಮನೆಗಳ ಹಸ್ತಾಂತರ ಹಾಗೂ ಇನ್ನುಳಿದ ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕಿದೆ.

    ಪಪಂ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ಈಗಾಗಲೇ ಎರಡು ಸುತ್ತಿನ ಸಭೆಗಳನ್ನು ನಡೆಸಲಾಗಿದ್ದು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಾಡದೇ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ. ಕಟ್ಟಡ ಪರವಾನಗಿ, ಉತಾರ ಪಡೆಯಲು ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಸಂಸದರು, ಶಾಸಕರ ಸಹಕಾರದೊಂದಿಗೆ ಅಧಿಕಾರವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಲು ಶ್ರಮಿಸುತ್ತೇನೆ.
    | ಅಕ್ಕಮ್ಮ ಮಣ್ಣೋಡ್ಡರ ಪಪಂ ಅಧ್ಯಕ್ಷೆ, ನರೇಗಲ್ಲ

    2 ವರ್ಷದಿಂದ ಖಾಲಿ: ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಮೀಸಲಾತಿ ಪ್ರಶ್ನಿಸಿ ಹಲವರು ಕೋರ್ಟ್ ಮೆಟ್ಟಿಲೇರಿದ್ದರಿಂದ ಈ ಪ್ರಕ್ರಿಯೆಗೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಹೀಗಾಗಿ, ಜನಪ್ರತಿನಿಧಿಗಳ ಆಡಳಿತ ಇಲ್ಲದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿತ್ತು. ಅಲ್ಲದೆ, ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವವರು ಇಲ್ಲದಂತಾಗಿತ್ತು. ಆದರೆ, ಅಕ್ಟೋಬರ್ 19ರಂದು ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ನವೆಂಬರ್ 10ರೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶಿಸಿತ್ತು. ಹೀಗಾಗಿ, ನವೆಂಬರ್ 6ರಂದು ನರೇಗಲ್ಲ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts