More

    ಧರ್ಮಾಚರಣೆ ಮರೆತರೆ ಮನುಕುಲಕ್ಕೆ ಹಿನ್ನಡೆ

    ನರಗುಂದ: ಹಿಂದಿನ ಜನ್ಮಗಳ ಅನಂತ ಪುಣ್ಯದಿಂದಲೇ ಮಾನವ ಜನ್ಮ ಪ್ರಾಪ್ತಿಯಾಗುತ್ತದೆ. ಲೌಕಿಕ ಜಗತ್ತಿನ ಜತೆಗೆ ಪಾರಮಾರ್ಥಿಕವನ್ನೂ ಸ್ವೀಕರಿಸಿ ಮುನ್ನಡೆಯಬೇಕಾಗುತ್ತದೆ. ಅದಕ್ಕೆ ಧರ್ಮ ಪರಂಪರೆಯ ನಿಖರ ಅನುಪಾಲನೆಯ ಅಗತ್ಯವಿದೆ. ಧರ್ಮಾಚರಣೆ ಮರೆತರೆ ಇಡೀ ಮನುಕುಲಕ್ಕೆ ಹಿನ್ನಡೆಯಾಗುತ್ತದೆ ಎಂದು ರಾಮದುರ್ಗ ತಾಲೂಕು ಬನ್ನೂರು ಚಿಕ್ಕಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
    ಪಟ್ಟಣದ ಪಂಚಗೃಹ ಗುಡ್ಡದ ಹಿರೇಮಠದ ಮಹಾತಪಸ್ವಿ ಲಿಂ. ಶ್ರೀಮದ್ ಘನಲಿಂಗ ಚರಚಕ್ರವರ್ತಿ ಚರಮೂರ್ತಿ ಚನ್ನವೀರ ದೇವರು ಹಾಗೂ ಗುರುವರ್ಯರ ಕರ್ತೃ ಗದ್ದುಗೆಗಳ ಮೇಲೆ ಪಂಚ ಶಿವಲಿಂಗ ಹಾಗೂ ಅದರ ಮುಂಭಾಗದಲ್ಲಿ ನಂದಿ ವಿಗ್ರಹ ಪ್ರತಿಷ್ಠಾಪನೆ, 44 ಜಂಗಮ ವಟುಗಳಿಗೆ ಸಾಮೂಹಿಕ ಶಿವದೀಕ್ಷಾ (ಅಯ್ಯಚಾರ) ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಮಾನವರು ಸಾತ್ವಿಕ ಸತ್ಯ ಶುದ್ಧ ಸದಾಚಾರ ಸಂಹಿತೆಯನ್ನು ರೂಢಿಸಿಕೊಂಡು ಎಲ್ಲರನ್ನೂ ಪ್ರೀತಿಯಿಂದ ಸ್ವೀಕರಿಸುವ ಉತ್ಕೃಷ್ಟ ಜೀವನ ವಿಧಾನವೇ ಧರ್ಮ ಎಂದೆನಿಸಿಕೊಳ್ಳುತ್ತದೆ ಎಂದರು.
    ಶ್ರೀಮರುಳ ಸಿದ್ಧಲಿಂಗ ಶ್ರೀಗಳು ಮಾತನಾಡಿ, ಸಾಕ್ಷಾತ್ಕಾರ ಸಂಪಾದನೆಯೇ ಮನುಕುಲದ ಅಂತಿಮ ಗುರಿ. ಇಷ್ಟಲಿಂಗದ ಮೂಲಕ ಶಿವಯೋಗ ಸಾಧನೆ ರೂಢಿಸಿಕೊಂಡಾಗ ಬಯಲ ಬೆಳಗು ಕಾಣಲು ಸಾಧ್ಯವಾಗುತ್ತದೆ. ಜೀವ ಶಿವನಾಗಲು, ಮಾನವ ಮಹಾದೇವನಾಗಲು, ವ್ಯಕ್ತಿ ಶಕ್ತಿಯಾಗಿ ಬೆಳೆಯಲು ವೀರಶೈವ ಧರ್ಮದ ಸೈದ್ಧಾಂತಿಕ ವಿಚಾರಗಳು ಮಾರ್ಗದರ್ಶಿಯಾಗಿವೆ. ವೀರಶೈವ ಧರ್ಮದ ಲಾಂಛನವಾಗಿರುವ ಇಷ್ಟಲಿಂಗದ ಅರ್ಚನೆ-ಆರಾಧನೆಯು ಅಖಂಡ ವಿಶ್ವವನ್ನೇ ಪ್ರೀತಿಸಬೇಕೆಂಬ ಭಾವಪೂರ್ಣತೆಯನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದರು.
    ಶ್ರೀ ಗುರುಪಾದ ಸ್ವಾಮೀಜಿ, ಉಮೇಶ್ವರ ಶಿವಾಚಾರ್ಯರು, ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಉಪದೇಶಾಮೃತ ನೀಡಿದರು.
    ಶಿವಲಿಂಗಗಳ ಪ್ರತಿಷ್ಠಾಪನೆ: ಶ್ರೀ ಗುರು ಶಿವಪ್ಪಯ್ಯ ಶಿವಯೋಗಿಗಳ ಮಠದ ವೈದಿಕ ಬಳಗದವರಿಂದ ಪಂಚ ಶಿವಲಿಂಗಗಳ ಪ್ರತಿಷ್ಠಾಪನೆ ಅಂಗವಾಗಿ ಮಹಾಸಂಕಲ್ಪ ಪೂಜೆ, ಶ್ರೀ ಮಹಾಗಣಪತಿ ಪೂಜೆ, ಶ್ರೀ ಗಂಗಾಕಲಶ ಪೂಜೆ, ಪುಣ್ಯಾಹವಾಚನ, ನಾಂದಿ ಸಮಾರಾಧನೆ, ಉಮಾಮಹೇಶ್ವರ ಪೂಜೆ ಸೇರಿದಂತೆ ಧಾರ್ಮಿಕ ವಿಧಿಗಳು ಜರುಗಿದವು. ನಿವೃತ್ತ ಎಸಿಪಿ ಜಿ.ಆರ್. ಹಿರೇಮಠ, ನಿವೃತ್ತ ಮುಖ್ಯ ಗ್ರಂಥಾಲಯಾಧಿಕಾರಿ ಬಿ.ಆರ್. ಹಿರೇಮಠ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಂ.ಆರ್. ಹಿರೇಮಠ ನೇತೃತ್ವ ವಹಿಸಿದ್ದರು. ಬಿ.ಆರ್. ಯಾವಗಲ್ಲ, ಉಮೇಶಗೌಡ ಪಾಟೀಲ, ಶಿವಾನಂದ ಮುತವಾಡ, ಸಿದ್ದನಗೌಡ ಪಾಟೀಲ, ಪಂಚಾಕ್ಷರಪ್ಪ ಬೆಳವಟಿಗಿ, ಶಂಕರಪ್ಪ ವಾಳದ, ಅಪ್ಪಣ್ಣ ನಾಯ್ಕರ್, ಗೋವಿಂದರಾಜ ಗುಡಿಸಾಗರ, ರಮೇಶಗೌಡ ಕರಕನಗೌಡ್ರ, ಚನ್ನಪ್ಪ ಕಂಠಿ, ಸುನೀಲ ಪಾಟೀಲ, ಡಾ.ಎಸ್.ಆರ್. ರಾಮನಗೌಡರ, ಅರುಣ ಚರಂತಿಮಠ, ಮಾರುತಿ ಮಾನೆ, ಪಿ.ಎಸ್. ಪತ್ರಾವಳಿ, ಕೆ.ಎನ್. ಜಾಕೋಜಿ, ಪ್ರಕಾಶ ತೊನಶಾಳ ಇತರರಿದ್ದರು. ಸಂಗಪ್ಪ ರಾಚಪ್ಪ ಗೋವೇಶ್ವರ ದಾಸೋಹ ಸೇವೆ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts