More

    ನಂಜನಗೂಡು ಶ್ರೀಕಂಠೇಶ್ವರನ ಭಕ್ತರ ಭಾವನೆಗಳಿಗೆ ಪೆಟ್ಟು

    ಶಿಕಾರಿಪುರ: ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಾಜ್ಯ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

    ಮಹಾಸಂಘದ ಸದಸ್ಯ ಶಿವಯ್ಯ ಮಾತನಾಡಿ, ನಿರಂತರವಾಗಿ ಹಿಂದುಗಳ ಮೇಲೆ, ಹಿಂದು ದೇವಾಲಯಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸರ್ಕಾರ ತಕ್ಷಣ ಇಂತಹ ಕೃತ್ಯ ಎಸಗಿದವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
    ಡಿ.26ರಂದು ಶ್ರೀಕಂಠೇಶ್ವರನ ದೇಗುಲದಲ್ಲಿ ಸಂಪ್ರದಾಯದಂತೆ ಅಂಧಕಾಸುರನ ಸಂಹಾರ ನಡೆಯುವಾಗ ಕೆಲವು ದುಷ್ಕರ್ಮಿಗಳು ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಈ ಉತ್ಸವ ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಕೆಲವು ದುಷ್ಕರ್ಮಿಗಳು ಪೂರ್ವನಿಯೋಜಿತವಾಗಿ ಗಲಾಟೆ ಮಾಡಿದ್ದಾರೆ. ದೇವರಿಗೆ ಧಿಕ್ಕಾರ ಕೂಗಿ, ಉತ್ಸವ ಆಚರಣೆಗೆ ಭಂಗ ತರುವ ಮೂಲಕ ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದರು.
    ಘಟನೆ ಖಂಡಿಸಿ ಶಾಂತಿಯುತ ಪ್ರತಿಭಟನೆ ಮಾಡಿದ ಸ್ಥಳೀಯರನ್ನೇ ಪೊಲೀಸರು ಬಂಧಿಸಿ ದೂರು ದಾಖಲಿಸಿರುವುದು ಖಂಡನೀಯ. ಕೂಡಲೇ ಸರ್ಕಾರ ಎಚ್ಚೆತ್ತು ಉತ್ಸವಕ್ಕೆ ಅಡ್ಡಿಪಡಿಸಿದ ಅಪರಾಧಿಗಳನ್ನು ಕೂಡಲೇ ಬಂಧಿಸಿ, ತಕ್ಕ ಶಾಸ್ತಿ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸಬೇಕು. ಈ ಘಟನೆಯ ನಂತರ ಅನೇಕ ಹಿಂದು ವಿರೋಧಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೀಕಂಠೇಶ್ವರನ ಬಗ್ಗೆ ಅತ್ಯಂತ ಕೆಟ್ಟದಾಗಿ ಬರೆದು ಅಪಮಾನ ಮಾಡಿದ್ದಾರೆ. ಇಂತಹವರ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
    ಮಹಾಸಂಘದ ಸದಸ್ಯರಾದ ವಿ.ರಾಮಣ್ಣ, ವಿ.ರಘು, ವೀರಶೈವ ಪುರೋಹಿತ ಅರ್ಚಕರ ಸಂಘದ ಅಧ್ಯಕ್ಷ ಪ್ರಭುಸ್ವಾಮಿ ಆರಾಧ್ಯಮಠ, ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿ, ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ರವಿ ನಾಯ್ಕ, ರಾಜ್ಯ ಶಕ್ತಿ ಸಂಗ್ರಾಮ ವೇದಿಕೆ ತಾಲೂಕು ಅಧ್ಯಕ್ಷ ಆನಂದ್, ಸವಿತ ಯುವಕ ಸಂಘದ ಅಧ್ಯಕ್ಷ ಎಸ್.ಮಧು ಕುಮಾರ್, ವಿಎಚ್‌ಪಿಯ ಪ್ರಕಾಶ್, ಆರ್‌ಎಸ್‌ಎಸ್‌ನ ಬಿ.ವಿ.ಮಂಜುನಾಥ್, ಮಹಾಂತಯ್ಯ, ಚನ್ನವೀರಯ್ಯ, ಕರಿಬಸವಯ್ಯ, ಶಂಭುಲಿಂಗಯ್ಯ, ವಿನಾಯಕ ಸ್ವಾಮಿ, ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts