More

    ಪರಿಷ್ಕೃತ ಬೀಜ ಮಸೂದೆ ಕಾಯ್ದೆ ವಿರುದ್ಧ ಹೋರಾಡಿ

    ನಂಜನಗೂಡು: ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಪರಿಷ್ಕೃತ ಬೀಜ ಮಸೂದೆ ಕಾಯ್ದೆ ಜಾರಿಗೊಳಿಸಲು ಸಜ್ಜಾಗಿದೆ. ರೈತರು ಉದ್ದೇಶಿತ ಮಸೂದೆ ವಿರುದ್ಧ ಸಂಘಟಿತ ಹೋರಾಟ ನಡೆಸದಿದ್ದಲ್ಲಿ ಭವಿಷ್ಯದಲ್ಲಿ ಕೃಷಿ ಕ್ಷೇತ್ರ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಉದ್ದೇಶಿತ ಮಸೂದೆ ಜಾರಿಗೊಂಡಲ್ಲಿ ರೈತರು ಬಿತ್ತನೆ ಬೀಜದ ಮೇಲಿನ ಸ್ವಾಮ್ಯತೆಯನ್ನು ಕಳೆದುಕೊಳ್ಳಲಿದ್ದಾರೆ. ದೇಸೀ ತಳಿಯ ಬೀಜ ಸಂರಕ್ಷಣೆ ಅಸಾಧ್ಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಬಹುರಾಷ್ಟ್ರೀಯ ಕಂಪನಿಗಳು ಬಿತ್ತನೆ ಬೀಜ ಸಂರಕ್ಷಣೆ ಹಾಗೂ ಮಾರಾಟವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡು ಇಡೀ ಕೃಷಿ ಕ್ಷೇತ್ರವನ್ನು ತಮ್ಮ ಕಪಿಮುಷ್ಠಿಗೆ ಪಡೆದುಕೊಳ್ಳಲಿವೆ. ನಂತರದ ದಿನಗಳಲ್ಲಿ ಮಾರುಕಟ್ಟೆ ಮೇಲೂ ಹಸ್ತಕ್ಷೇಪ ಮಾಡಿ ರೈತರನ್ನು ಬೀದಿ ಪಾಲು ಮಾಡುವ ಆತಂಕವಿದೆ. ಹೀಗಾಗಿ ರೈತರು ತಕ್ಷಣ ಎಚ್ಚೆತ್ತುಕೊಂಡು ಆಹಾರ ಬೀಜೋತ್ಪಾದನೆಯ ಹಕ್ಕುಗಳ ಸಂರಕ್ಷಣೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.
    ಸರ್ಕಾರ ನಿಗದಿಗೊಳಿಸಿರುವ ಭತ್ತದ ಬೆಂಬಲ ಬೆಲೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 500 ರೂ.ಗಳ ಪ್ರೋತ್ಸಾಹ ಧನ ಘೋಷಿಸಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು. ಸಾಲಮನ್ನಾದಲ್ಲಾಗಿರುವ ಗೊಂದಲ ನಿವಾರಣೆಗೆ ತಕ್ಷಣ ಸ್ಪಷ್ಟ ನಿರ್ದೇಶನ ಕೊಡಬೇಕು. ಇಲ್ಲವಾದಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
    ತಾಲೂಕಿನ ಮೊಬ್ಬಹಳ್ಳಿ ಗ್ರಾಮದಲ್ಲಿ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲ ವಸೂಲಿ ನೆಪದಲ್ಲಿ ರೈತರಿಗೆ ಕಿರುಕುಳ ನೀಡುತ್ತಿರುವ ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆ ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸಲಾಯಿತು.
    ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಡ್ಯ ರವಿ, ಡಿ.ಸೋಮಶೇಖರ್, ಸಿಂಧುವಳ್ಳಿ ಬಸವಣ್ಣ, ಅಂಬಳೆ ಮಂಜುನಾಥ್, ವಿಶ್ವನಾಥ್, ಮಹದೇವಸ್ವಾಮಿ, ಕೊಂತಯ್ಯನಹುಂಡಿ ಮಹೇಶ್, ಚಿನ್ನಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts