More

    ಕಾಯಕ ಯೋಗಿಗಳ ಸಹಾಯಕ್ಕೆ ನಾನಾ ಯೋಜನೆಗಳು

    ಸತೀಶ್ ಕೆ. ಬಳ್ಳಾರಿ ಬೆಂಗಳೂರು

    ಕಾಯಕ ಯೋಗಿಗಳ ಸಹಾಯಕ್ಕೆ ನಾನಾ ಯೋಜನೆಗಳುಕಾರ್ವಿುಕರ ನೋವಿಗೆ ಸ್ಪಂದನೆ, ಅವರ ಕುಟುಂಬ ನಿರ್ವಹಣೆಗೆ ತೊಂದರೆ ಆಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ರಾಜ್ಯದಲ್ಲಿ 80 ಲಕ್ಷಕ್ಕೂ ಅಧಿಕ ಕಾರ್ವಿುಕರು ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದ್ದರೂ ಕಾರ್ವಿುಕ ಇಲಾಖೆಯಲ್ಲಿ ನೋಂದಣಿ ಯಾಗಿರುವವರು ಕೇವಲ 20.56 ಲಕ್ಷ. ಎಲ್ಲ ಕಾರ್ವಿುಕರೂ ನೋಂದಣಿ ಮಾಡಿಕೊಳ್ಳುವುದರ ಮೂಲಕ ಸಹಾಯ ಪಡೆಯಬಹುದಾದ ಯೋಜನೆಗಳ ವಿವರ ಈ ಕೆಳಕಂಡಂತಿದೆ.

    ಒಂದು ದೇಶ ಒಂದು ಸಂಖ್ಯೆ: ಪ್ರತಿ ಮಾಲೀಕರೂ ಕಾರ್ವಿುಕರ ಇಎಸ್​ಐ, ಪಿಎಫ್ ಹಣ ಭರ್ತಿ ಮಾಡಬೇಕೆಂಬ ನಿಯಮವಿದೆ. ಆದರೆ ಅಸಂಘಟಿತ ಕಾರ್ವಿುಕರು ಒಂದೆಡೆ ಕೆಲಸ ಮುಕ್ತಾಯದ ನಂತರ ಮಾಲೀಕರನ್ನು ಬದಲಾಯಿಸಿದಾಗ ಈ ಹಣ ಹಿಂಪಡೆಯದೆ ಸರ್ಕಾರದ ಬಳಿಯೇ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿದಿತ್ತು. ಈ ಕಾರಣಕ್ಕೆ ಕೇಂದ್ರ ಸರ್ಕಾರ ಯುನಿವರ್ಸಲ್ ಐಡೆಂಟಿಟಿ ನಂಬರ್ (ಯುಎಎನ್) ಜಾರಿ ಮಾಡಿದೆ. ಒಬ್ಬ ಕಾರ್ವಿುಕ ಒಂದೇ ಸಂಖ್ಯೆಯನ್ನು ತನ್ನ ಜೀವನ ಪೂರ್ತಿ ಹೊಂದಲಿದ್ದು, ಹೊಸ ಮಾಲೀಕರೂ ಇದೇ ಖಾತೆಗೆ ತಮ್ಮ ಪಾಲಿನ ಹಣ ಭರಿಸುತ್ತಾರೆ. ಕಾರ್ವಿುಕ ಕೆಲಸ ಬದಲಿಸಿದಂತೆಲ್ಲ ಪಿಎಫ್ ಹಣವೂ ಹಿಂಬಾಲಿಸುತ್ತದೆ, ಇದರಿಂದ ಬರುವ ಬಡ್ಡಿ ಮೊತ್ತವೂ ಹೆಚ್ಚಳವಾಗುತ್ತದೆ.

    ಶ್ರಮ ಸಮ್ಮಾನ ಪ್ರಶಸ್ತಿ

    ವಿಶೇಷ ಸಾಧನೆ ಮಾಡಿದ ಕಾರ್ವಿುಕರನ್ನು ಗುರುತಿಸಿ, ಮಾರ್ಚ್ 1 ರಂದು ಪ್ರತಿ ಜಿಲ್ಲೆಗೆ 11 ರಂತೆ ಒಟ್ಟು 330 ಕಾರ್ವಿುಕರಿಗೆ  10 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡ ಶ್ರಮ ಸಮ್ಮಾನ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ಜಿಲ್ಲೆಗೆ 110 ರಂತೆ ಒಟ್ಟು 3300 ಕಾರ್ವಿುಕರಿಗೆ ತಲಾ 1 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡ ವಿಶೇಷ ಪುರಸ್ಕಾರ ನೀಡಲಾಗುತ್ತಿದೆ. ಅಸಂಘಟಿತ ಕಾರ್ವಿುಕರಿಗೆ ಲಭ್ಯವಿರುವ ಯೋಜನೆಗಳ ಮಾಹಿತಿ ನೀಡಲು, ಯೋಜನೆಗಳ ಸೌಲಭ್ಯ ಪಡೆಯಲು ರಾಜ್ಯದ 175 ತಾಲ್ಲೂಕುಗಳಲ್ಲಿ ಕಾರ್ವಿುಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

    ಅಪಘಾತ ಪರಿಹಾರ

    ಖಾಸಗಿ ವಾಣಿಜ್ಯ ಸಾರಿಗೆಯ ಎಲ್ಲ 20 ರಿಂದ 70 ವರ್ಷದೊಳಗಿನ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್​ಗಳು ಅಪಘಾತಕ್ಕೀಡಾಗಿ ಮರಣ ಹೊಂದಿದರೆ ಕುಟುಂಬದ ನಾಮನಿರ್ದೇಶಿತರಿಗೆ -ಠಿ; 5 ಲಕ್ಷ ಪರಿಹಾರ ನೀಡಲಾಗುತ್ತದೆ. ಶಾಶ್ವತ ಅಂಗವೈಕಲ್ಯಕ್ಕೆ -ಠಿ; 2 ಲಕ್ಷ, ತಾತ್ಕಾಲಿಕ ದುರ್ಬಲತೆಗೆ 50 ಸಾವಿರದಿಂದ -ಠಿ; 1 ಲಕ್ಷ ದವರೆಗೆ ಸಹಾಯಧನ ನೀಡಲಾಗುತ್ತದೆ.

    ಕಾರ್ವಿುಕ ಕಲ್ಯಾಣ ಮಂಡಳಿ

    ಕಲ್ಯಾಣ ಯೋಜನೆಗಳಿಗೆ ನೋಂದಣಿ ಮಾಡಿಸಲು 28 ರಿಂದ 60 ವರ್ಷದೊಳಗಿನ ಮಾಸಿಕ 15 ಸಾವಿರ ರೂ.ಗಿಂತ ಕಡಿಮೆ ವೇತನ ಪಡೆಯುವವರು ಸೌಲಭ್ಯ ಪಡೆಯಬಹುದು. ಇಂತಹ ಕಾರ್ವಿುಕರ ಮಕ್ಕಳಿಗೆ ಪ್ರೌಡ ಶಾಲೆ ಶಿಕ್ಷಣಕ್ಕೆ  3 ಸಾವಿರ ರೂ. ಪಿಯುಸಿಗೆ 4 ಸಾವಿರ ರೂ.  ಪದವಿ ಮತ್ತು ಸ್ನಾತಕೋತ್ತರ ಪದವಿ ವೇಳೆ – 5 ಸಾವಿ ರೂ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್​ಗಳಿಗೆ  10 ಸಾವಿರ ರೂ. ಶೈಕ್ಷಣಿಕ ಪ್ರೋತ್ಸಾಹಧನ ನೀಡಲಾಗುವುದು. ಇದಕ್ಕೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗ ಶೇಕಡ 50, ಎಸ್​ಸಿ/ಎಸ್​ಟಿ ಶೇ.45 ರಷ್ಟು ಅಂಕ ಪಡೆದು ತೇರ್ಗಡೆ ಹೊಂದಿರಬೇಕು.

    ಆಶಾದೀಪ ಯೋಜನೆ

    ಖಾಸಗಿ ವಲಯದ ಕೈಗಾರಿಕೆ ಅಥವಾ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ ಉದ್ಯೋಗಾವಕಾಶ ಕಲ್ಪಿಸಲು ಆಶಾದೀಪ ಯೋಜನೆ ಇದೆ. ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದವರನ್ನು ಕಾಯಂ ಕೆಲಸಗಾರರಾಗಿ ನೇಮಿಸಿಕೊಳ್ಳುವ ಮಾಲೀಕರ ಪಾಲಿನ ಭವಿಷ್ಯ ನಿಧಿ (ಪಿಎಫ್) ಹಾಗೂ ಕಾರ್ವಿುಕರ ರಾಜ್ಯ ವಿಮಾ (ಇಎಸ್​ಐ) ವಂತಿಕೆಯನ್ನು ನೇಮಕ ಮಾಡಿದ ಮೊದಲ 2 ವರ್ಷಗಳವರೆಗೆ ಹಾಗೂ ಗುತ್ತಿಗೆ ಕಾರ್ವಿುಕರಾಗಿ ನೇಮಿಸಿಕೊಂಡಲ್ಲಿ 1 ವರ್ಷದವರೆಗೆ ಸರ್ಕಾರ ಮರು ಪಾವತಿಸುತ್ತದೆ.

    ವೈದ್ಯಕೀಯ ನೆರವು

    ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ವರ್ಗಾವಣೆ, ಕ್ಯಾನ್ಸರ್, ಆಂಜಿಯೋಪ್ಲಾಸ್ಟಿ, ಕಣ್ಣು, ಅರ್ಥೊಪೆಡಿಕ್, ಗರ್ಭಕೋಶದ ಶಸ್ತ್ರ ಚಿಕಿತ್ಸೆ, ಗಾಲ್ ಬ್ಲಾಡರ್ ತೊಂದರೆ, ಮಿದುಳಿನ ರಕ್ತಸ್ರಾವ ಚಿಕಿತ್ಸೆಗೆ -ಠಿ; 10 ಸಾವಿರವರೆಗೆ, ಆರೋಗ್ಯ ತಪಾಸಣೆಗೆ 1 ಸಾವಿರ ರೂ. ವರೆಗೆ ಸಹಾಯ. ಕೆಲಸದ ವೇಳೆ ಅಪಘಾತವಾದಲ್ಲಿ 3 ಸಾವಿರ ರೂ. ವರೆಗೆ ಧನಸಹಾಯ ನೀಡ ಲಾಗುವುದು.

    ಕಟ್ಟಡ ಕಾರ್ವಿುಕರಿಗೆ ಸೌಲಭ್ಯ

    ಕಟ್ಟಡ ಕಾರ್ವಿುಕ ಕೆಲಸ ಮಾಡುವ 18 ರಿಂದ 60 ವರ್ಷದೊಳಗಿನವರು, ಕಾರ್ವಿುಕ ಅಧಿಕಾರಿಗಳು, ಹಿರಿಯ ಕಾರ್ವಿುಕ ನಿರೀಕ್ಷಕರು, ಬೆಂಗಳೂರು ಮೆಟ್ರೋ ಮುಖ್ಯ ಇಂಜಿನಿಯರ್ ಕಾರ್ವಿುಕರು ಇಲ್ಲಿ ನೋಂದಣಿ ಮಾಡಿಸಬಹುದು. ನಿಗದಿತ ಅರ್ಜಿ, ಕಾಮಗಾರಿ ನಡೆಯುವ ಕಟ್ಟಡದ ಮಾಲೀಕರು, ಗುತ್ತಿಗೆದಾರರು, ಕಾರ್ವಿುಕ ಸಂಘಟನೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಗುರುತಿಸಿ ನೀಡಿದ ಉದ್ಯೋಗದ ದೃಢೀಕರಣ ಪತ್ರ, ಮೂರು ಭಾವಚಿತ್ರಗಳು, ವಯಸ್ಸಿನ ದೃಢೀಕರಣ ಪತ್ರದ ಜತೆಗೆ  25 ರೂ. ಪಾವತಿಸಿ ನೋಂದಣಿ ಮಾಡಿಸಬೇಕು. ಪ್ರತಿ ವರ್ಷ 25 ರೂ. ಪಾವತಿಸಿ ನವೀಕರಣ ಮಾಡಬೇಕು. ಮಾಸಿಕ ಪಿಂಚಣಿ, ಮಕ್ಕಳಿಗೆ ಶೈಕ್ಷಣಿಕ ಧನಸಹಾಯ, ಮರಣ ಸಂದರ್ಭ ಹಾಗೂ ಅಪಘಾತದ ಸಂದರ್ಭದಲ್ಲಿ ನೆರವಿನ ಅನೇಕ ಅವಕಾಶಗಳಿವೆ.

    ಕರೊನಾ ಸಂಕಷ್ಟಕ್ಕೆ ಹಣ

    ಕರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಷ್ಟಕ್ಕೀಡಾಗಿರುವ ಕಾರ್ವಿುಕರು ತಮ್ಮ ಇಪಿಎಫ್ ಹಣ ಹಿಂಪಡೆಯಲು ಕೇಂದ್ರ ಸರ್ಕಾರ ವಿಶೇಷ ಅವಕಾಶ ನೀಡಿದೆ. ಈ ಹಿಂದೆ ಯಾವುದೇ ಕಾರಣಕ್ಕೆ ಇಪಿಎಫ್ ಹಣ ಪಡೆದಿದ್ದರೂ, ತಮ್ಮ ಮೂರು ತಿಂಗಳ ವೇತನ ಅಥವಾ ಒಟ್ಟು ಪಿಎಫ್ ಹಣದ ಶೇಕಡ 75ರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ಹಿಂಪಡೆಯಲು ಅವಕಾಶ ನೀಡಲಾಗಿದೆ. ಈ ಹಣವನ್ನು ಮತ್ತೆ ಪಾವತಿ ಮಾಡಬೇಕಿಲ್ಲ. ಈ ಸೌಲಭ್ಯ ಪಡೆಯಲು ಯುಎಎನ್ ಸಂಖ್ಯೆಯ ಹೊಂದಿರುವುದು ಕಡ್ಡಾಯ.

    ಎಲ್ಲರಿಗೂ ಸ್ಮಾರ್ಟ್​ಕಾರ್ಡ್

    ಕರ್ನಾಟಕ ರಾಜ್ಯ ಅಸಂಘಟಿತ ಕಾರ್ವಿುಕರ ಸಾಮಾಜಿಕ ಭದ್ರತಾ ಮಂಡಳಿಯು ಅಂಬೇಡ್ಕರ್ ಕಾರ್ವಿುಕ ಸಹಾಯ ಹಸ್ತ ಯೋಜನೆಯಡಿ 11 ಅಸಂಘಟಿತ ವಲಯಗಳನ್ನು ಏಕ ಶೀರ್ಷಿಕೆ ಮತ್ತು ಏಕ ಚಿಹ್ನೆಯಡಿ ನೋಂದಾಯಿಸಿ ಅಂಬೇಡ್ಕರ್ ಕಾರ್ವಿುಕ ಸಹಾಯ ಹಸ್ತ ಯೋಜನೆಯಡಿ ಸ್ಮಾರ್ಟ್​ಕಾರ್ಡ್ ನೀಡುತ್ತಿದೆ.

    ಸಹಾಯವಾಣಿ: 155214

    ವಾಟ್ಸ್​ಆಪ್: 93333 33684

    ಕರೊನಾ ನೆರವು: 82773 70000

    ಮುಸ್ಲಿಂ ಹುಡುಗಿಗೆ ಸೆಹ್ರಿ ಆಯೋಜಿಸಿದ ಹಿಂದು ಮಹಿಳೆ ಮೇಲೆ ಆರ್​ಎಸ್​ಎಸ್ ಹಲ್ಲೆ​ ನಡೆಸಿತೇ?: ಫ್ಯಾಕ್ಟ್​ಚೆಕ್​​ನಲ್ಲಿ ಸತ್ಯಾಂಶ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts