More

    ಕೃಷಿರಂಗಕ್ಕೆ ನಮೋಚೈತನ್ಯ: ಮಹತ್ವದ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಸಭೆ ಒಪ್ಪಿಗೆ

    ನವದೆಹಲಿ: ಕರೊನಾದಿಂದ ತೀವ್ರ ಹಿನ್ನಡೆ ಕಂಡಿದ್ದ ಆರ್ಥಿಕತೆಗೆ ಚುರುಕು ನೀಡಲು ಕೇಂದ್ರ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್​ನ ಮಹತ್ವದ ಭಾಗವಾಗಿರುವ ರೈತ ಸಮುದಾಯ ಹಾಗೂ ಗ್ರಾಮೀಣ ಭಾರತಕ್ಕೆ ನವಚೈತನ್ಯ ನೀಡುವ ಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

    ಆರೂವರೆ ದಶಕಗಳಷ್ಟು ಹಳೆಯ ಅಗತ್ಯ ವಸ್ತುಗಳ ಕಾನೂನಿಗೆ ತಿದ್ದುಪಡಿ ತರಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಧಾನ್ಯಗಳು, ಈರುಳ್ಳಿ ಸಹಿತ ಹಲವು ಆಹಾರ ಪದಾರ್ಥಗಳ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಲು ಈ ತಿದ್ದುಪಡಿ ನೆರವಾಗಲಿದೆ. ಇದು ಕೃಷಿ ಕ್ಷೇತ್ರದಲ್ಲಿ ಪರಿವರ್ತನೆ ತಂದು ರೈತರ ಆದಾಯ ಹೆಚ್ಚಿಸಲು ಸಹಾಯಕವಾಗಲಿದೆ. ಸಂಸ್ಕರಣೆದಾರರು, ಸಗಟು ವ್ಯಾಪಾರಿಗಳು, ದೊಡ್ಡ ಪ್ರಮಾಣದ ಚಿಲ್ಲರೆ ವ್ಯಾಪಾರಸ್ಥರು ಮತ್ತು ರಫ್ತುದಾರರೊಂದಿಗೆ ರೈತರು ನೇರವಾಗಿ ವ್ಯವಹರಿಸಲು ಸಾಧ್ಯವಾಗುವಂತೆ ‘ಬೆಲೆ ಆಶ್ವಾಸನೆ ಮತ್ತು ರೈತ ಸೇವೆ ಕುರಿತ ರೈತರ ಸಬಲೀಕರಣ ಮತ್ತು ರಕ್ಷಣಾ ಒಪ್ಪಂದ ಸುಗ್ರೀವಾಜ್ಞೆ -2020’ಅನ್ನು ಸಂಪುಟ ಅನುಮೋದಿಸಿದೆ.

    ಇದನ್ನೂ ಓದಿ   ದೊಡ್ಡ ಗಡಿಯಾರದ ಮೇಲೂ ಕರೊನಾ ಕರಿನೆರಳು

    ಏನು ಅನುಕೂಲ?: ಅಗತ್ಯ ವಸ್ತುಗಳ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ದವಸ-ಧಾನ್ಯ, ಬೇಳೆ-ಕಾಳುಗಳು, ಖಾದ್ಯ ತೈಲ, ಈರುಳ್ಳಿ ಮತ್ತು ಆಲೂಗಡ್ಡೆಯಂಥ ಕೃಷಿ ಉತ್ಪನ್ನಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಇವುಗಳ ಉತ್ಪಾದನೆ, ವಿತರಣೆ, ಸರಬರಾಜು, ದಾಸ್ತಾನು ಮೊದಲಾದವುಗಳ ಮೇಲಿನ ನಿಯಂತ್ರಣ ತೆರವಾಗಿ ಮುಕ್ತ ಸ್ವಾತಂತ್ರ್ಯ ಸಿಗಲಿದೆ. ಇದರಿಂದ ಆರ್ಥಿಕ ಚಟುವಟಿಕೆಗಳ ಪ್ರಮಾಣ ಗರಿಗೆದರುತ್ತದೆ. ಕೃಷಿ ಕ್ಷೇತ್ರಕ್ಕೆ ಖಾಸಗಿ ಹಾಗೂ ವಿದೇಶಿ ಬಂಡವಾಳ ಹೆಚ್ಚು ಪ್ರಮಾಣದಲ್ಲಿ ಹರಿದು ಬರಲು ಅವಕಾಶವಾಗುತ್ತದೆ. ಶೀತಲೀಕರಣ ಘಟಕಗಳಲ್ಲಿ ಹೂಡಿಕೆಯ ವೇಗ ಹೆಚ್ಚಲು ಮತ್ತು ಆಹಾರ ಸರಬರಾಜು ಸರಪಣಿಯ ಆಧುನೀಕರಣಕ್ಕೂ ನೆರವಾಗುತ್ತದೆ.

    ಈರುಳ್ಳಿ ಆಲೂಗಡ್ಡೆ ಮುಕ್ತ ಮುಕ್ತ
    ಈರುಳ್ಳಿ, ಆಲೂಗಡ್ಡೆ ಸಹಿತ ಕೆಲ ಪದಾರ್ಥಗಳು ಆವಶ್ಯಕ ವಸ್ತುಗಳ ಪಟ್ಟಿಯಿಂದ ಹೊರಕ್ಕೆ
    ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಸುಗ್ರೀವಾಜ್ಞೆ
    ರೈತರಿಗೆ ಪ್ರಯೋಜನಗಳೇನು?: ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ದಾಸ್ತಾನು ಮಾಡಬಹುದು. ಇದರಿಂದ ರೈತರು ಬೆಳೆದ ಬೆಳೆಗಳಿಗೆ ಬೇಡಿಕೆ ಹೆಚ್ಚಳ, ಆಯ್ದ ಕೆಲ ಪರಿಸ್ಥಿತಿಯಲ್ಲಿ ಮಾತ್ರ ಸರ್ಕಾರದ ನಿಯಂತ್ರಣ
    ರೈತರು ಎಪಿಎಂಸಿ ಹೊರತಾಗಿ ಖಾಸಗಿಯವರಿಗೂ ಕೃಷಿ ಉತ್ಪನ್ನ ಮಾರಾಟ ಮಾಡಬಹುದು
    ಬೇರೆ ರಾಜ್ಯಗಳಲ್ಲೂ ಬೆಳೆ ಮಾರಾಟ ಮಾಡಬಹುದು

    ಇದನ್ನೂ ಓದಿ   ಹಸಿರು ಮೈಸೂರು ತಂಡದಿಂದ 15 ಸಾವಿರ ಸಸಿಗಳನ್ನು ನೆಡಲು ಸಿದ್ಧತೆ

    ಒಂದು ಭಾರತ, ಒಂದು ಕೃಷಿ ಮಾರುಕಟ್ಟೆ
    ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಇರುವ ತೊಡಕುಗಳನ್ನು ನಿವಾರಣೆ ಮಾಡುವ ಉದ್ದೇಶದಿಂದ ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಎಪಿಎಂಸಿಗಳ ಹೊರತಾಗಿ ಖಾಸಗಿಯವರು ಹಾಗೂ ಇತರ ರಾಜ್ಯಗಳಲ್ಲೂ ರೈತರು ತಮ್ಮ ಫಸಲನ್ನು ಮಾರಾಟ ಮಾಡಲು ಇದರಿಂದ ನೆರವಾಗುತ್ತದೆ. ‘ದೇಶದಲ್ಲಿನ ಅತಿ ನಿಯಂತ್ರಿತ ಕೃಷಿ ಮಾರುಕಟ್ಟೆಗಳನ್ನು ಮುಕ್ತ ಮಾಡುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ’ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಎಪಿಎಂಸಿ ಪ್ರಾಂಗಣದ ಹೊರಗೆ ಹೆಚ್ಚುವರಿ ವ್ಯಾಪಾರ ವಹಿವಾಟಿಗೆ ರೈತರಿಗೆ ಅನುಕೂಲ ಕಲ್ಪಿಸಿದರೆ ಅಧಿಕ ಸ್ಪರ್ಧೆಯಿಂದಾಗಿ ಹೆಚ್ಚಿನ ಬೆಲೆ ಸಿಗಲಿದೆ. ಇದು ‘ಒಂದು ಭಾರತ-ಒಂದು ಕೃಷಿ ಮಾರುಕಟ್ಟೆ’ ಸೃಷ್ಟಿಗೆ ಹಾದಿ ಮಾಡಿಕೊಡಲಿದೆ ಎಂದು ಅವರು ತಿಳಿಸಿದ್ದಾರೆ.

    ರೈತ ಕಲ್ಯಾಣದ ಗುರಿ: ಸ್ವಾವಲಂಬಿ ಭಾರತ ಯೋಜನೆ ಅನ್ವಯ ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಉತ್ತೇಜನ ನೀಡುವ ಸಲುವಾಗಿ ಅನೇಕ ಕ್ರಮಗಳನ್ನು ಪ್ರಕಟಿಸಲಾಗಿತ್ತು. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರಿಯಾಯಿತಿ ದರದ ಸಾಲ, ಕೃಷಿ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸುವುದು ಮೊದಲಾದ ಕ್ರಮಗಳು ಅದರಲ್ಲಿ ಸೇರಿವೆ. ಮೀನುಗಾರರ ಸಬಲೀಕರಣಕ್ಕಾಗಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ, ಹಸುಗಳಿಗೆ ಬರುವ ಕಾಲು-ಬಾಯಿ ಮತ್ತು ಬ್ರುಸೆಲೊಸಿಸ್ ರೋಗಗಳಿಗೆ ಲಸಿಕೆ ಹಾಕುವುದು, ಜೇನು ಸಾಕಣೆದಾರರಿಗೆ ಪೋ›ತ್ಸಾಹ, ಆಪರೇಷನ್ ಗ್ರೀನ್ ಮೊದಲಾದವೂ ಅದರಲ್ಲಿ ಒಳಗೊಂಡಿವೆ.

    ಇದನ್ನೂ ಓದಿ  ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಆಡಳಿತ ಸುವರ್ಣ ಕಾಲ

    ರೈತರಿಗೆ ಶೋಷಣೆ ಭಯ ಬೇಡ: ಹೊಸ ತಿದ್ದುಪಡಿಯಿಂದ ರೈತರ ಮೇಲೆ ಶೋಷಣೆಯಾಗುತ್ತದೆ ಎಂಬ ಭಯ ಅನಗತ್ಯ. ಇದರಿಂದ ದೇಶದ ರೈತರಿಗೆ ನೆರವಾಗಲಿದೆ. ಕೃಷಿ ಕ್ಷೇತ್ರದ ಪರಿವರ್ತನೆಗೆ ಸಹಾಯವಾಗಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅಭಿಪ್ರಾಯಪಟ್ಟಿದ್ದಾರೆ. ಈ ತಿದ್ದುಪಡಿಯು ಸರ್ಕಾರದ ಅತಿಯಾದ ನಿಯಂತ್ರಣಗಳ ಬಗ್ಗೆ ಖಾಸಗಿ ಹೂಡಿಕೆದಾರರಲ್ಲಿರುವ ಭೀತಿಯನ್ನು ನಿವಾರಿಸಲಿದೆ ಎಂದಿದ್ದಾರೆ.

    ಗ್ರಾಹಕರ ಹಿತರಕ್ಷಣೆ: ಅವಶ್ಯ ವಸ್ತು ಕಾನೂನಿನ ನಿಯಂತ್ರಣಗಳನ್ನು ತೆಗೆದುಹಾಕುವುದರ ಜೊತೆಯಲ್ಲಿ ಗ್ರಾಹಕರ ಹಿತರಕ್ಷಣೆಗೂ ಸರ್ಕಾರ ಒತ್ತು ನೀಡಿದೆ. ಯುದ್ಧ, ಕ್ಷಾಮ, ಅಸಾಧಾರಣ ಬೆಲೆಯೇರಿಕೆ ಮತ್ತು ಪ್ರಕೃತಿ ವಿಕೋಪದಂಥ ಪರಿಸ್ಥಿತಿಗಳಲ್ಲಿ ಈ ಆಹಾರ ವಸ್ತುಗಳನ್ನು ನಿಯಂತ್ರಣಕ್ಕೆ ಒಳಪಡಿಸಬಹುದಾಗಿದೆ. ಈ ತಿದ್ದುಪಡಿಯಿಂದ ರೈತರಿಗೂ ಗ್ರಾಹಕರಿಗೂ ಲಾಭದಾಯಕವಾಗಲಿದೆ.

    9.25 ಕೋಟಿ ಕುಟುಂಬಗಳಿಗೆ ಲಾಭ: ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಿಂದ 9.25 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ ನೆರವಾಗಿದೆ. ಲಾಕ್​ಡೌನ್ ಅವಧಿಯಲ್ಲಿ ಇದುವರೆಗೆ 18,517 ಕೋಟಿ ರೂಪಾಯಿಗಳನ್ನು ಈ ಯೋಜನೆಯಡಿ ವಿತರಿಸಲಾಗಿದೆ. ಪಿಎಂ ಫಸಲ್ ಬಿಮಾ ಯೋಜನೆಯನ್ವಯ ಲಾಕ್​ಡೌನ್ ಅವಧಿಯಲ್ಲಿ ಈವರೆಗೆ 6003.6 ಕೋಟಿ ರೂಪಾಯಿ ಮೊತ್ತದ ಕ್ಲೇಮುಗಳನ್ನು ಇತ್ಯರ್ಥಪಡಿಸಲಾಗಿದೆ.

    ಸುವರ್ಣಸೌಧಕ್ಕೆ ಸರ್ಕಾರಿ ಕಚೇರಿ ಸ್ಥಳಾಂತರಿಸಲು ಸಿಎಂ ಗಡುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts