More

    ಬಸ್​ ನಿಲ್ದಾಣಕ್ಕೆ ಹೆಸರಿಡಲು ಕಿತ್ತಾಡುತ್ತಿರುವ ಕೈ-ಕಮಲ; ವಾಜಪೇಯಿ ಹೆಸರಿಡಲು ರೆಸಲ್ಯೂಷನ್​ ಪಾಸ್​..!

    ದಾವಣಗೆರೆ: ಅದು ಒಂದು ಬಸ್ ನಿಲ್ದಾಣ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದನ್ನು ಉನ್ನತೀಕರಿಸಲಾಗಿದೆ. ಜನರ ತೆರಿಗೆ ಹಣದಿಂದ ನಿರ್ಮಾಣವಾದ ಆ ಬಸ್ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಈಗ ರಾಜಕೀಯ ಶುರುವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ತಮ್ಮ ನಾಯಕರ ಹೆಸರಿಡಲು ಕೆಸರೆರಚಾಟ ಮಾಡುತ್ತಿದ್ದಾರೆ.

    ನಗರದಲ್ಲಿ ಈಗ ಸ್ಮಾರ್ಟ್ ಸಿಟಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕೂಡಾ ಸಮೀಪಿಸುತ್ತಿದೆ. ಪ್ರಗತಿ ಹಂತದಲ್ಲಿರೋ ಕಾಮಗಾರಿಗಳನ್ನು ಉದ್ಘಾಟಿಸಲು ಬಿಜೆಪಿ ಜನಪ್ರತಿನಿಧಿಗಳು ತುದಿಗಾಲಲ್ಲಿ ನಿಂತಿದ್ದಾರೆ.

    ನಗರದ ಹೃದಯ ಭಾಗದಲ್ಲಿ 28.67 ಕೋಟಿ ರೂಪಾಯಿ ವೆಚ್ಚದಲ್ಲಿ ಫುನರ್ ನಿರ್ಮಾಣ ಆಗುತ್ತಿರುವ ಹಳೆ ಖಾಸಗಿ ಬಸ್ ನಿಲ್ದಾಣಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲು ಬಿಜೆಪಿ ಮುಂದಾಗಿದೆ. ಪಾಲಿಕೆಯಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ರೆಸಲ್ಯೂಷನ್​ ಪಾಸ್​ ಮಾಡಿದ್ದು ಆಡಳಿತ ಪಕ್ಷ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಕಟುವಾಗಿ ವಿರೋಧಿಸಿದೆ.

    2005 ರಲ್ಲಿ ಇದೆ ಬಸ್ ನಿಲ್ದಾಣಕ್ಕೆ ಡಾ.ಶಾಮನೂರು ಶಿವಶಂಕರಪ್ಪ ಹೆಸರನ್ನು ನಾಮಕರಣ ಮಾಡಲಾಗಿತ್ತು. ಅಂದು ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಹಳೇ ಬಸ್ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಹೆಸರಿಡಲು ಸರ್ವ ಸದಸ್ಯರು ಒಪ್ಪಿ ಸರ್ಕಾರಕ್ಕೆ ಕಳುಹಿಸಿ ಅದೇಶ ಕೂಡ ಮಾಡಿಸಲಾಗಿತ್ತಂತೆ. ಕಾಂಗ್ರೆಸ್ಸಿಗರ ಪ್ರಕಾರ ಸಂಸದ ಜಿ.ಎಂ.ಸಿದ್ದೇಶ್ವರ್ ಈಗ ಹೆಸರಿನ ರಾಜಕೀಯ ಮಾಡುತ್ತಿದ್ದಾರೆ. ನಗರದ ಶಿವಪಾರ್ವತಿ ಬಡಾವಣೆಗೆ ಮತ್ತು ರಿಂಗ್ ರೋಡ್​ಗೆ ಸಂಸದ ಸಿದ್ದೇಶ್ವರ್​ರ ತಂದೆ, ದಿವಂಗತ ಜಿ.ಮಲ್ಲಿಕಾರ್ಜುನ್ ಹೆಸರಿಡುವ ಮೂಲಕ ಹೆಸರಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಲಿಕೆ ಬಿಜೆಪಿ ಸದಸ್ಯರು ‘ಈ ಮೊದಲು ಶಾಮನೂರು ಶಿವಶಂಕರಪ್ಪ ಹೆಸರು ನಿಯಮಾವಳಿ ಪ್ರಕಾರ ಇಟ್ಟಿರಲಿಲ್ಲ. ಅನಧಿಕೃತವಾಗಿ ಹೆಸರು ನಾಮಕರಣ ಮಾಡಿದ್ದರು. ನಾವು ಹಳೇ ಬಸ್ ನಿಲ್ದಾಣಕ್ಕೆ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲು ನಿರ್ಧರಿಸಿದ್ದೇವೆ. ಈ ಬಗ್ಗೆ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ತೀರ್ಮಾನ ಸರ್ಕಾರಕ್ಕೆ ಕಳುಹಿಸಿ ಆದೇಶ ಮಾಡಿಸಿ ಹೆಸರಿಡುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾಂಗ್ರೆಸ್ ಮುಖಂಡರು ಬರೀ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಅವರ ಬಳಿ ಸೂಕ್ತ ದಾಖಲೆ ಇದ್ದರೆ ಪಾಲಿಕೆಗೆ ಸಲ್ಲಿಸಲಿ. ನಂತರ ನೋಡೋಣ’ ಎನ್ನುತ್ತಿದ್ದಾರೆ.

    ಬಿಜೆಪಿ – ಕಾಂಗ್ರೆಸ್ ಹೆಸರಿನ ರಾಜಕೀಯ ನೋಡಿದ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಕೆಲ ಸಂಘಟನೆಗಳು ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಮತ್ತು ಹಿರಿಯ ರಂಗಕರ್ಮಿ ಚಿಂದೋಡಿ ಲೀಲಾ ಹೆಸರು ಸಹ ಮುನ್ನೆಲೆಗೆ ತಂದಿವೆ. ಒಟ್ಟಾರೆ ಎಲ್ಲರೂ ಸೇರಿ ಈ ನಾಮಕರಣ ರಾಜಕೀಯವನ್ನು ಎಲ್ಲಿ ನಿಲ್ಲಿಸುತ್ತಾರೊ ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts