More

    ಕರೊನಾ ಸೈನಿಕರಿಗೆ ಜೀವ ಭಯ !

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಮಹಾಮಾರಿ ಕರೊನಾ ವೈರಸ್ ಮಣಿಸಲು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಸಿ ಮತ್ತು ಡಿ ದರ್ಜೆ ನೌಕರರಿಗೆ ಸದ್ಯ ಅಭದ್ರತೆ ಜತೆಗೆ ಜೀವ ಭಯವೂ ಕಾಡತೊಡಗಿದೆ.

    ಕರೊನಾ ವೈರಸ್ ವ್ಯಾಪಿಸದಂತೆ ಹಗಲಿರುಳು ಶ್ರಮಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕತರ್ೆಯರು ಹಾಗೂ ಆರೋಗ್ಯ ಇಲಾಖೆ ಸಿ ಮತ್ತು ಡಿ ದರ್ಜೆ ನೌಕರರಿಗೆ ಸೂಕ್ತವಾದ ವೈದ್ಯಕೀಯ ಪರಿಕರ ಸಿಗದ ಕಾರಣ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳುವುದು ಹೇಗೆ ಎಂಬ ಆತಂಕ ಶುರುವಾಗಿದೆ. ಆರೋಗ್ಯ ಇಲಾಖೆಯಿಂದ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರಿಗೆ ನಾಮ್ಕೇವಾಸ್ತೆ ಎನ್ನುವಂತೆ ಒಂದೆರಡು ಮಾಸ್ಕ್, ಸ್ಯಾನಿಟೈಜರ್ ವಿತರಿಸಲಾಗುತ್ತಿದೆ.

    ಕರೊನಾ ಕಿರಿಕಿರಿ ಆರಂಭಗೊಳ್ಳುತ್ತಿದ್ದಂತೆ ಆರೋಗ್ಯ ಇಲಾಖೆಯಿಂದ ಗ್ರಾಮೀಣ ಭಾಗದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸೇವೆಗೆ ನಿಯೋಜಿಸಲಾಗಿದೆ. ಹಳ್ಳಿಗಾಡಿನಲ್ಲಿ ಕಂಪ್ಲೀಟ್ ನೆಟ್ವರ್ಕ್​ ಹೊಂದಿರುವ ಈ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಕುಟುಂಬದವರ ಯೋಗಕ್ಷೇಮ ವಿಚಾರಿಸುವ ಬಹುದೊಡ್ಡ ಜಿಮ್ಮೇದಾರಿ ಹೊತ್ತಿದ್ದಾರೆ.

    ಅಷ್ಟೆ ಅಲ್ಲ, ದಿನನಿತ್ಯ ಆಯಾ ಗ್ರಾಮಗಳಲ್ಲಿ ಯಾರು ಹೊಸದಾಗಿ ಪ್ರವೇಶಿಸುತ್ತಾರೋ ಅವರ ಮೇಲೆ ನಜರ್ ಇರಿಸಿ ಎಲ್ಲಿಂದ ಬಂದಿದ್ದಾರೆ? ಇಷ್ಟು ದಿನ ಯಾವ ಊರಲ್ಲಿದ್ದವರು? ಉದ್ಯೋಗ ಅರಸಿ ಗುಳೆ ಹೋದವರು ಮರಳಿ ತಮ್ಮೂರಿಗೆ ಬಂದಿದ್ದಾರೆಯೇ ಹೀಗೆ ಎಲ್ಲ ಮಗ್ಗುಲಗಳಿಂದ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿದ್ದು, ನಿತ್ಯವೂ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವರದಿ ಸಲ್ಲಿಸುತ್ತಾರೆ. ಈ ವರದಿ ಆಧರಿಸಿ ಜಿಲ್ಲಾಡಳಿತ ಕರೊನಾ ವೈರಸ್ ಮಾನಿಟರಿಂಗ್ ಮಾಡುತ್ತಿದೆ.

    ಕರೊನಾ ಹತೋಟಿಗೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ 1020 ಆಶಾ, 1300 ಅಂಗನವಾಡಿ ಕಾರ್ಯಕತರ್ೆಯರು ಹಾಗೂ 320 ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರನ್ನು ನಿಯೋಜಿಸಲಾಗಿದೆ. ದಿನಬೆಳಗಾದರೆ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವ ಇವರಿಗೆ ವೈದ್ಯಕೀಯ ಕಿಟ್ಗಳು ಸೂಕ್ತವಾಗಿ ಲಭಿಸುತ್ತಿಲ್ಲ. ಅಲ್ಲದೆ ಬೈಕ್ಗಳಲ್ಲಿ ತೆರಳುವ ಆರೋಗ್ಯ ಇಲಾಖೆ ನೌಕರರನ್ನು ಪೊಲೀಸರು ತಡೆದು ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಪ್ರಕೃತಿ ವಿಕೋಪ ನಿಧಿಯಿಂದ ಸದ್ಯ 18 ಕೋಟಿ ರೂ. ಅನುದಾನ ಜಿಲ್ಲಾಡಳಿತ ಬಳಿ ಇದ್ದು, ಕರೊನಾ ನಿಯಂತ್ರಣಕ್ಕಾಗಿ 3.5 ಕೋಟಿ ರೂ. ಬಳಸಿಕೊಂಡಿದ್ದರೂ ಈ ಎಲ್ಲ ಸಿಬ್ಬಂದಿಗೆ ಎನ್-95 ಮಾಸ್ಕ್, ಕೈಗವಸು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸ್ಯಾನಿಟೈಸರ್ ಸಿಕ್ಕಿಲ್ಲ. ಹೀಗಾಗಿ ಜಿಲ್ಲಾಡಳಿತ ಈ ಕರೊನಾ ಸೈನಿಕರಿಗೆ ಆದ್ಯತೆ ಮೇರೆಗೆ ಸುರಕ್ಷತೆ ಸಾಧನೆ ನೀಡುವುದು ಜರೂರಿ ಎನಿಸಿದೆ.

    ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ವೈದ್ಯಕೀಯ ಪರಿಕರ ವಿತರಣೆ ಮಾಡಲಾಗಿದೆ. ಎನ್-95 ಮಾಸ್ಕ್ ಎಲ್ಲರೂ ಬಳಸಬೇಕು ಎಂಬ ನಿಯಮವೇನಿಲ್ಲ. ಆದರೂ ಇವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
    | ಎಂ.ಕೂರ್ಮಾರಾವ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts