More

    ಸಂಪತ್‌ರಾಜ್ ಶರಣಾಗಲು ಡಿಕೆಶಿ ಸೂಚಿಸಲಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್

    ಉಡುಪಿ: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಇರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ನೈತಿಕತೆ ಇದ್ದರೆ ಶರಣಾಗಲು ಸೂಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.

    ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ದಲಿತ ಶಾಸಕನ ಮೇಲಿನ ಹಲ್ಲೆ ಖಂಡನೀಯ. ಅವರಿಗೆ ಅನ್ಯಾಯವಾಗಿದೆ. ನ್ಯಾಯಕೊಡಿಸುವ ಕೆಲಸ ಬಿಜೆಪಿ ಮಾಡುತ್ತದೆ. ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡಬೇಕು. ಸಂಪತ್‌ರಾಜ್ ಬಂಧನವಾಗಲೇಬೇಕು. ಅವರು ತಲೆಮರೆಸಿಕೊಂಡಿಲ್ಲ. ಮನೆಯಲ್ಲೇ ಇದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಿದ್ದಾರೆ. ಹಾಗಾದರೆ ಪೊಲೀಸರ ಕೈಗೆ ಕೊಡುವ ಕೆಲಸವನ್ನು ಕಾಂಗ್ರೆಸ್ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರದ ಸೋಲಿಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ನಡುವಿನ ವೈಯಕ್ತಿಕ ಪ್ರತಿಷ್ಠೆ ಕಾರಣವಾಗಿದೆ. ಇಬ್ಬರೂ ಮುಂದಿನ ಚುನಾವಣೆಯಲ್ಲಿ ಸಿಎಂ ಸೀಟಿಗೆ ಟವೆಲ್ ಹಾಕಿದ್ದಾರೆ. ಹೀಗಾಗಿ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂದರು.

    ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ನಂತರ ಪಕ್ಷದೊಳಗೆ ಚರ್ಚೆ ನಡೆದು ಹೈಕಮಾಂಡ್ ಅಂತಿಮ ನಿರ್ಧಾರ ಕೈಕೊಳ್ಳುತ್ತದೆ ಎಂದು ನಳಿನ್ ಹೇಳಿದರು.

    ಬಸನಗೌಡ ಪಾಟೀಲ್ ಯತ್ನಾಳ್ ಭಿನ್ನಮತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅವರು, ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಪಕ್ಷದ ನಿಯಮ ಮೀರಿ ಯಾರೂ ವರ್ತಿಸಬಾರದು. ಎಲ್ಲವನ್ನೂ ಪಕ್ಷದ ವೇದಿಕೆಯಲ್ಲೇ ಮಾತನಾಡಬೇಕು. ಅವರ ಬಗ್ಗೆ ಪಕ್ಷದ ಒಳಗೆ ಏನು ತೀರ್ಮಾನ ತೆಗೆದುಕೊಳ್ಳಬೇಕೋ ಅದನ್ನು ಮಾಡಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts