More

    ನೈರ್ಮಲ್ಯ ಕಾಪಾಡಲು ಸೋಪ್‌ಪಿಟ್, ತೆಲಂಗಾಣ ಮಾದರಿಯಲ್ಲಿ ಹೊಸಕೋಟೆಯಲ್ಲಿ ಪ್ರಥಮ ಅನುಷ್ಠಾನ

    ವಿ.ಮಂಜುನಾಥ್ ಸೂಲಿಬೆಲೆ
    ಗ್ರಾಮಾಂತರ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಹಲವಾರು ದಶಕಗಳಿಂದ ಸರ್ಕಾರಗಳು ನಿರ್ಮಲ ಗ್ರಾಮ, ಸ್ವಚ್ಛಗ್ರಾಮ ಯೋಜನೆ ರೂಪಿಸಿದ್ದರೂ ಕೂಡ ಸಮರ್ಪಕವಾಗಿ ಸಫಲತೆ ಕಂಡಿಲ್ಲ. ಏತನ್ಮಧ್ಯೆ ಹೊಸಕೋಟೆ ತಾಲೂಕಿನಲ್ಲಿ ನೈರ್ಮಲ್ಯ ಕಾಪಾಡಲು ಸೋಪ್‌ಪಿಟ್ ವಿಧಾನ ಅಳವಡಿಕೆಗೆ ಮುಂದಾಗಿದೆೆ.

    ಏನಿದು ಸೋಪ್‌ಪಿಟ್ ವಿಧಾನ: ಮನೆಯಲ್ಲಿ ಪ್ರತಿದಿನ ಉತ್ಪಾದನೆ ಆಗುವ ಪಾತ್ರೆ ಹಾಗೂ ಬಟ್ಟೆ ತೊಳೆಯುವ ನೀರು ಮೋರಿಗೆ ಸಂಪರ್ಕ ಮಾಡಿ ಮೋರಿಯಲ್ಲಿ ಹರಿಸುವ ಬದಲಾಗಿ ಮನೆ ಬದಿಲ್ಲೇ 1.5 ಮೀಟರ್ ಆಳ-ಅಗಲ ಗಾತ್ರದಲ್ಲಿ ಗುಂಡಿ ತೋಡಿ ಅದರಲ್ಲಿ 3 ಸಿಮೆಂಟ್ ರಿಂಗ್ ಅಳವಡಿಸಿ, ತಳಭಾಗದಲ್ಲಿ 10 ಹಾಗೂ 20 ಮಿಮಿ ಗಾತ್ರದ ನಿರುಪಯುಕ್ತ ಕಲ್ಲುಗಳನ್ನು ತುಂಬಿಸಿ ನಿರ್ಮಾಣ ಮಾಡುವ ಪಿಟ್ ಇದಾಗಿದೆ. ನಂತರ ಪಿಟ್‌ನ ಮೇಲ್ಬಾಗ ಸಂಪೂರ್ಣವಾಗಿ ಮುಚ್ಚಲ್ಪಡಲಿದ್ದು, ಮನೆಯಲ್ಲಿ ಪ್ರತಿ ದಿನ ಉತ್ಪಾದನೆ ಆಗುವ ತ್ಯಾಜ್ಯ ನೀರು ಈ ಗುಂಡಿಗೆ ಹರಿಸಲಿದ್ದು ಭೂಮಿಯಲ್ಲಿ ಸಂಪೂರ್ಣ ಇಂಗಿಕೊಳ್ಳುವ ವಿಧಾನ ಇದಾಗಿದೆ.

    ಹೆಚ್ಚಿನ ಬೇಡಿಕೆ: ಪ್ರಥಮವಾಗಿ ಸೂಲಿಬೆಲೆ ಹೋಬಳಿ ಕಂಬಳೀಪುರ, ನಂದಗುಡಿ ಹೋಬಳಿ ಶಿವನಾಪುರ, ಅನುಗೊಂಡಹಳ್ಳಿ ಹೋಬಳಿಯ ಮುತ್ಸಂದ್ರ, ಕಲ್ಕುಂಟೆ ಅಗ್ರಹಾರ ಗ್ರಾಮಗಳಲ್ಲಿ ಪ್ರಾರಂಭ ಮಾಡಲಾಗಿದ್ದು, ಈಗಾಗಲೇ ನೂರಕ್ಕೂ ಅಧಿಕ ಮಂದಿ ನಿರ್ಮಾಣ ಮಾಡಲು ಮುಂದಾಗಿದ್ದು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ 3 ಸಾವಿರ ಪಿಟ್ ನಿರ್ಮಾಣದ ಗುರಿ ಹೊಂದಿರುವುದಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್‌ಗೌಡ ತಿಳಿಸಿದ್ದಾರೆ.

    ಸೋಪ್‌ಪಿಟ್ ನಿರ್ಮಾಣಕ್ಕೆ 17 ಸಾವಿರ ಅನುದಾನ: ಸೋಪ್‌ಪಿಟ್ ನಿರ್ಮಾಣ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 17 ಸಾವಿರದವರೆಗೂ ಅನುದಾನ ನೀಡಲಿದೆ. ಆದ್ದರಿಂದ ಈ ಯೋಜನೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಸಹಕಾರಿಯಾಗುವುದರ ಜತೆಗೆ ಸರ್ಕಾರದ ಅನುದಾನವೂ ಸದ್ಬಳಕೆ ಆಗಲಿದೆ. ಮನೆ ಮುಂದೆ ನಿರ್ಮಾಣ ಮಾಡುವ ಇಚ್ಛಾಶಕ್ತಿ ಇರುವವರು ಸ್ಥಳೀಯ ಗ್ರಾಪಂಗೆ ಸಂಪರ್ಕಿಸಬಹುದಾಗಿದೆ.

    ಸೋಪ್‌ಪಿಟ್ ಯೋಜನೆ ತೆಲಂಗಾಣದ ಇಬ್ರಾಂಹಿಪುರ ಗ್ರಾಪಂನಲ್ಲಿ ಪ್ರಥಮವಾಗಿ ಅನುಷ್ಠಾನವಾಗಿದ್ದು, ಅಲ್ಲಿ ಇದರಿಂದ ಮಾದರಿ ಗ್ರಾಪಂ ಆಗಿದೆ. ಅದೇ ವಿಧಾನವನ್ನು ನಾನು ಸ್ವತಃ ವೀಕ್ಷಣೆ ಮಾಡಿ, ಹೊಸಕೋಟೆ ತಾಲೂಕಿನಲ್ಲಿ ಅಳವಡಿಕೆಗೆ ಮುಂದಾಗಿದ್ದೇನೆ. ಇದರಿಂದ ಸಾಂಕ್ರಾಮಿಕ ರೋಗ ಹಾಗೂ ಅನೈರ್ಮಲ್ಯಕ್ಕೆ ತಡೆಹಾಕಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಶಾಲೆ, ಅಂಗನವಾಡಿಗಳಲ್ಲಿ ಸೋಪ್‌ಫಿಟ್ ನಿರ್ಮಾಣ ಕಡ್ಡಾಯವಾಗಲಿದೆ.
    ಶ್ರೀನಾಥ್‌ಗೌಡ, ಇಒ ಹೊಸಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts