More

    ನಾಗಡದಿನ್ನಿ ನ್ಯಾಯಬೆಲೆ ಅಂಗಡಿ ಮೇಲೆ ರೇಡ್, 20 ಕ್ವಿಂಟಾಲ್ ಅಕ್ರಮ ದಾಸ್ತಾನು ವಶ

    ದೇವದುರ್ಗ: ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿ ಪಡಿತರ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಿದ್ದ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ನ್ಯಾಯಬೆಲೆ ಕೇಂದ್ರದ ಮೇಲೆ ತಹಸೀಲ್ದಾರ್ ಮಧುರಾಜ್ ಯಾಳಗಿ ನೇತೃತ್ವದಲ್ಲಿ ಅಧಿಕಾರಿಗಳು ಶುಕ್ರವಾರ ಸಂಜೆ ದಾಳಿ ನಡೆಸಿದ್ದಾರೆ.

    ದಾಳಿ ವೇಳೆ ಸುಮಾರು 40 ಪ್ಯಾಕೇಟ್‌ನಲ್ಲಿದ್ದ 20 ಕ್ವಿಂಟಾಲ್ ಅಕ್ಕಿ, 14 ಬಾಕ್ಸ್‌ನಲ್ಲಿದ್ದ 140 ಲೀಟರ್ ಖಾದ್ಯತೈಲ, 25 ಬಾಕ್ಸ್‌ನ 625 ಕೆಜಿ ಉಪ್ಪು ಹಾಗೂ 8600 ರೂ. ನಗದು ವಶಕ್ಕೆ ಪಡೆಯಲಾಗಿದೆ. ಈ ದಾಸ್ತಾನು ಸುಮಾರು 140 ಪಡಿತರ ಫಲಾನುಭವಿಗಳಿಗೆ ವಿತರಣೆ ಮಾಡದೆ ಕಳೆದ 2 ವರ್ಷಗಳಿಂದ ಸಂಗ್ರಹಿಸಿಡಲಾಗಿದೆ. ಇದರಿಂದ ಬಹುತೇಕ ದಾಸ್ತಾನು ಹಾಳಾಗಿವೆ.

    ಅಂಗನವಾಡಿ ಮಾಲೀಕ ಭೀಮನಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪರವಾನಗಿ ರದ್ದುಪಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ದೇಶಕರಿಗೆ ತಹಸೀಲ್ದಾರ್ ಶಿಫಾರಸು ಮಾಡಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕ ಹಾಗೂ ಬಾಡಿಗೆ ನೀಡಿದ್ದ ಕಟ್ಟಡದ ಮಾಲೀಕನ ನಡುವೆ ಜಾಗದ ತಕರಾರು ನಡೆದ ಕಾರಣ ದಾಸ್ತಾನು ವಿತರಣೆ ಮಾಡದೆ, ಸಂಗ್ರಹಿಸಲಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ.

    ತನಿಖೆ ಮಾಡಿ: ಬಡವರಿಗೆ ಹಂಚಿಕೆ ಮಾಡಬೇಕಾದ ಪಡಿತರ ಧಾನ್ಯಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕೆಲ ದಿನಗಳ ಹಿಂದೆ ಪಟ್ಟಣದ ಮನೆಯೊಂದರಲ್ಲಿ 1.10 ಲಕ್ಷ ರೂ. ಮೌಲ್ಯದ 99 ಪ್ಯಾಕೇಟ್ ಅಕ್ಕಿ ವಶಕ್ಕೆ ಪಡೆದು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಪಡಿತರ ಧಾನ್ಯಗಳ ದುರ್ಬಳಕೆ ಮೇಲೆ ಎರಡು ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿತ್ತು. ತಾಲೂಕಿನಲ್ಲಿ ಅಕ್ರಮಜಾಲ ದೊಡ್ಡದಿದ್ದು, ಸಮಗ್ರ ತನಿಖೆ ನಡೆಸಿ, ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts