More

    ಮೈಸೂರು ದಸರಾ ಅಂಬಾರಿ ಆನೆಗಳ ಕಥೆ ಇದು…

    ಮೈಸೂರು: ನಾಡಹಬ್ಬ ದಸರಾದಲ್ಲಿ ಈ ಬಾರಿ ವಿಖ್ಯಾತ ಚಿನ್ನದ ಅಂಬಾರಿ ಹೊರುವ ‘ಕ್ಯಾಪ್ಟನ್’ ಬದಲಾಗಲಿದ್ದಾನೆ. ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದ್ದ ಅರ್ಜುನ ಆನೆಗೆ 60 ವರ್ಷವಾಗಿದ್ದರಿಂದ ಸರ್ಕಾರದ ನಿಯಮದ ಪ್ರಕಾರ ಆತ ಅಂಬಾರಿ ಹೊರುವಂತಿಲ್ಲ. ಹೀಗಾಗಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಬದಲು ‘ಅಭಿಮನ್ಯು’ ಆನೆಯನ್ನು ಅರಣ್ಯ ಇಲಾಖೆ ಗುರುತಿಸಿದೆ. ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕುವ ಆನೆಯೇ ಆಕರ್ಷಕ. ದಸರಾ ಆರಂಭಗೊಂಡಾಗಿನಿಂದ ಇದುವರೆಗೆ ಸುಮಾರು 18 ಆನೆಗಳು ಅಂಬಾರಿ ಹೊತ್ತು ನಡೆದಿರುವ ಇತಿಹಾಸವಿದೆ.

    45 ವರ್ಷ ಹೊತ್ತ ಜಯಮಾರ್ತಾಂಡ : ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಕೀರ್ತಿ ಜಯಮಾರ್ತಾಂಡ ಆನೆಯದು. ಮೈಸೂರು ಒಡೆಯರ್ ಕಾಲದಲ್ಲಿ ಪ್ರಾರಂಭವಾದ ವಿಜಯದಶಮಿಯಿಂದ ಅಂದಾಜು 45 ವರ್ಷ ಇದು ಮಹಾರಾಜರು ಕೂರುತ್ತಿದ್ದ ಅಂಬಾರಿ ಹೊತ್ತು ನಡೆದಿದೆ. ಅರಮನೆಯ ಮಹಾದ್ವಾರಕ್ಕೆ ಜಯಮಾರ್ತಾಂಡ ಹೆಸರು ಇಡಲಾಗಿದೆ. ಬಳಿಕ 1902ರಿಂದ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್, ಸುಂದರ್​ರಾಜ್ ಹಾಗೂ ಐರಾವತ ಆನೆಗಳು ಅಂಬಾರಿ ಹೊತ್ತಿವೆ. 1935ರಲ್ಲಿ ಐರಾವತ ಆನೆಯನ್ನು ಹಾಲಿವುಡ್ ಚಿತ್ರ ‘ದಿ ಎಲಿಫೆಂಟ್ ಬಾಯ್’ನಲ್ಲಿ ಬಳಸಿಕೊಳ್ಳಲಾಗಿದೆ. ಆನೆಯ ಮಾವುತನ 7 ವರ್ಷದ ಮಗ ಸಾಬು ದಸ್ತಗೀರ್ ಎಂಬಾತ ಈ ಚಿತ್ರದಲ್ಲಿ ನಟಿಸಿ, ಬಳಿಕ ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸಿದ್ದರು.

    ಅಂಬಾರಿ ಹೊತ್ತ ಆನೆಗಳಲ್ಲಿ ಅತ್ಯಂತ ದೈತ್ಯ ಎನ್ನುವ ಕೀರ್ತಿಗೆ ಪಾತ್ರವಾಗಿದ್ದ ಬಿಳಿಗಿರಿ, 10.5 ಅಡಿ ಎತ್ತರವಿತ್ತು. ಸುಮಾರು 7 ಸಾವಿರ ಕೆ.ಜಿ. ತೂಕವಿದ್ದ ಈ ಆನೆ ಅಂಬಾರಿಯಲ್ಲಿ ಕೂತ ರಾಜರನ್ನು ಹೊತ್ತು ಸಾಗಿದ ಕೊನೆ ಆನೆಯಾಗಿದೆ. ಬಳಿಕ ಅಂಬಾರಿಯಲ್ಲಿ ಶ್ರೀಚಾಮುಂಡೇಶ್ವರಿ ವಿಗ್ರಹ ಇಟ್ಟು ಮೆರವಣಿಗೆ ಮಾಡುವ ಪದ್ಧತಿ ನಡೆದು ಬಂದಿದೆ. ಬಳಿಕ ‘ರಾಜೇಂದ್ರ’ ಆನೆ ಕೆಲ ವರ್ಷ ಅಂಬಾರಿ ಹೊತ್ತಿತ್ತು. ಈ ಆನೆ ಗಂಧದಗುಡಿ ಚಿತ್ರದಲ್ಲಿ ನಾವಾಡುವ ನುಡಿಯೇ ಕನ್ನಡ ನುಡಿ ಹಾಡಿನಲ್ಲಿ ಡಾ.ರಾಜ್​ಕುಮಾರ್ ಅವರನ್ನು ತನ್ನ ದಂತದ ಮೇಲೆ ಕೂರಿಸಿಕೊಂಡು ಸಾಗುತ್ತದೆ.

    ಜಯಮಾರ್ತಾಂಡ ಬಳಿಕ ಅತಿ ಹೆಚ್ಚು ಬಾರಿ ಅಂಬಾರಿ ಹೊತ್ತ ಕೀರ್ತಿ ದ್ರೋಣನಿಗೆ ಸಲ್ಲುತ್ತದೆ. 10.25 ಅಡಿ ಎತ್ತರ, ಸುಮಾರು 6,400 ಕೆಜಿ ತೂಕ ಇದ್ದ ದ್ರೋಣ ಆನೆಯು 18 ವರ್ಷ ಸತತವಾಗಿ ಅಂಬಾರಿಗೆ ಬೆನ್ನುಕೊಟ್ಟಿತ್ತು. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಸೋರ್ಡ್ ಆಫ್ ಟಿಪ್ಪು ಸುಲ್ತಾನ್​ನಲ್ಲಿ ಭಾಗವಹಿಸಿತ್ತು. 1998ರಲ್ಲಿ ನಾಗರಹೊಳೆ ಅರಣ್ಯದಲ್ಲಿ ಹೈ ಟೆನ್ಶನ್ ವಿದ್ಯುತ್ ಆಘಾತದಲ್ಲಿ ದ್ರೋಣ ಸಾವನ್ನಪ್ಪಿತು.

    ನಂತರ ಅರ್ಜುನನ ಹೆಗಲಿಗೆ ಅಂಬಾರಿ ಹೊರುವ ಜವಾಬ್ದಾರಿ ಬಂತು. ಒಂದು ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೂ ನಂತರದ ದಿನಗಳಲ್ಲಿ ಮಾವುತನನ್ನು ಕೊಂದ ಆರೋಪದಲ್ಲಿ ಅರ್ಜುನನನ್ನು ಉತ್ಸವದಿಂದ ಹೊರಗುಳಿಸಲಾಯಿತು. ಬಳಿಕ ಬಂದ ಬಲರಾಮ, ಶಾಂತ ಸ್ವಭಾವದಿಂದ ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ. ಹನ್ನೊಂದು ವರ್ಷಗಳ ಕಾಲ ಅಂಬಾರಿ ಹೊತ್ತ ನಂತರ ವಯೋನಿವೃತ್ತಿ ನೀಡಲಾಯಿತು.

    ಕೀಟಲೆ ಸ್ವಭಾವವಿದ್ದ ಅರ್ಜುನನನ್ನು ಪಳಗಿಸಿದ್ದರಿಂದ ಬದಲಾಗಿದ್ದ. ಹೀಗಾಗಿ ಮತ್ತೆ ಅರ್ಜುನನಿಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಯಿತು. 8 ವರ್ಷ ಯಶಸ್ವಿಯಾಗಿ ಅಂಬಾರಿ ಹೊತ್ತು ಸಾಗಿದ. ಈಗ ಅಭಿಮನ್ಯುವನ್ನು ಆಯ್ಕೆ ಮಾಡಲಾಗಿದೆ. 12 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಅಭಿಮನ್ಯು, ಅರಮನೆ ವಾದ್ಯ ಸಂಗೀತದ ಗಾಡಿ ಎಳೆಯುವ ಜವಾಬ್ದಾರಿ ನಿರ್ವಹಿಸುತ್ತಿದೆ.

    ನಾಳೆ ಜಂಬೂಸವಾರಿ : ಮನೆಯಲ್ಲೇ ಕುಳಿತು ದಸರಾ ಸಂಭ್ರಮ ವೀಕ್ಷಿಸಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts