More

    ಮೈಸೂರು ಜಿಪಂ ಕ್ಷೇತ್ರ 46ಕ್ಕೆ ಇಳಿಕೆ

    ರಾಜ್ಯದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದ್ದು, ಅದರಂತೆ ಮೈಸೂರು ಜಿಲ್ಲೆಯಲ್ಲಿದ್ದ 49 ಜಿ.ಪಂ. ಕ್ಷೇತ್ರಗಳನ್ನು 46ಕ್ಕೆ ಇಳಿಸಲಾಗಿದೆ. ಇದನ್ನು ಆಧರಿಸಿ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿದೆ.
    ಮರು ವಿಂಗಡಣೆ ಬಳಿಕ ಜಿಲ್ಲೆಯ ಜಿ.ಪಂ. ಕ್ಷೇತ್ರಗಳ ಸಂಖ್ಯೆಯನ್ನು ಅಂತಿಮಗೊಳಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

    ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯಿಸಿದೆ. ಈಗಾಗಲೇ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಜಿ.ಪಂ. ಕ್ಷೇತ್ರಗಳ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ರಾಜ್ಯ ಚುನಾವಣಾ ಆಯೋಗ 2021ರಲ್ಲಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆ ಮಾಡಿ ಕರಡು ಪ್ರತಿ ಪ್ರಕಟಿಸಿದ ಸಂದರ್ಭದಲ್ಲಿ ಜಿಪಂ ಕ್ಷೇತ್ರಗಳು (53)ಹೆಚ್ಚಾಗಿತ್ತು. ಜನಸಂಖ್ಯೆಗೆ ಅನುಗುಣವಾಗಿ ಚುನಾವಣಾ ಆಯೋಗ ಕ್ಷೇತ್ರವಾರು ವಿಂಗಡಿಸಿತ್ತು. ಆ ಬಳಿಕ ರಾಜ್ಯ ಸರ್ಕಾರ ಮತ್ತೊಮ್ಮೆ ಮರು ವಿಂಗಡಣೆ ನಡೆಸಿತ್ತು. ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಒಳಗೊಂಡಿರುವ ಗ್ರಾಮಗಳು, ಗಡಿ ಮುಂತಾದ ವಿವರಗಳನ್ನೊಳಗಂಡ ಕರಡು ಅಧಿಸೂಚನೆ ಹೊರಡಿಸಿದ್ದ ಆಯೋಗ ಜ.16ರ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಇದೀಗ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದೆ.

    ನಂಜನಗೂಡಿನಲ್ಲಿ ಅತಿ ಹೆಚ್ಚು

    ಸದ್ಯ ನಂಜನಗೂಡಿನಲ್ಲಿ ಅತಿ ಹೆಚ್ಚು ಅಂದರೆ 9 ಜಿಪಂ ಕ್ಷೇತ್ರಗಳು, ಕಡಿಮೆ ಅಂದರೆ ಸರಗೂರಿನಲ್ಲಿ 2, ಕೆ.ಆರ್.ನಗರ ಕೇವಲ 3 ಜಿಪಂ ಕ್ಷೇತ್ರಗಳಿವೆ. ಉಳಿದಂತೆ ಸಾಲಿಗ್ರಾಮ ಮತ್ತು ಎಚ್.ಡಿ.ಕೋಟೆ ತಾಲೂಕಿನಲ್ಲಿ ತಲಾ 4 ಕ್ಷೇತ್ರಗಳಿವೆ. ಮೈಸೂರು, ತಿ.ನರಸೀಪುರ, ಹುಣಸೂರು, ಪಿರಿಯಾಪಟ್ಟಣದಲ್ಲಿ ತಲಾ 6 ಕ್ಷೇತ್ರಗಳಿವೆ.
    ಮೈಸೂರು ತಾಲೂಕಿನಲ್ಲಿ ರಮ್ಮನಹಳ್ಳಿ, ಕಡಕೊಳ ಹಾಗೂ ಶ್ರೀರಾಂಪುರ ಪಟ್ಟಣ ಪಂಚಾಯಿತಿ ರಚನೆಯಾಗಿರುವುದರಿಂದ ಜಿಪಂ ಸದಸ್ಯ ಸ್ಥಾನಗಳು ಕಡಿಮೆಯಾಗಿವೆ. ಹಿನಕಲ್, ಹೂಟಗಳ್ಳಿ, ಶ್ರೀರಾಂಪುರ ಜಿಪಂ ಸ್ಥಾನಗಳು ರದ್ದಾಗಿವೆ. ಇದಲ್ಲದೆ, ಕಳೆದ ಬಾರಿ ಇದ್ದ ಜಿಪಂ ಕ್ಷೇತ್ರಗಳ ಕೇಂದ್ರಸ್ಥಾನಗಳೂ ಅದಲು ಬದಲಾಗಿವೆ.

    ತಾಲೂಕುವಾರು ಜಿಪಂ ಕ್ಷೇತ್ರಗಳ ವಿವರ

    ಮೈಸೂರು ತಾಲೂಕಿನಲ್ಲಿ 6 ಜಿಪಂ ಕ್ಷೇತ್ರಗಳಿದ್ದು, ಇಲವಾಲ, ಜಯಪುರ, ಉದ್ಬೂರು, ವರುಣ, ಸಿದ್ದಲಿಂಗಪುರ ಹಾಗೂ ಹಾರೋಹಳ್ಳಿ(ಮೆಲ್ಲಹಳ್ಳಿ) ಕ್ಷೇತ್ರಗಳನ್ನು ರಚಿಸಲಾಗಿದೆ.
    ತಿ.ನರಸೀಪುರ ತಾಲೂಕಿನಲ್ಲಿ 6 ಜಿಪಂ ಕ್ಷೇತ್ರಗಳಿದ್ದು, ತುರುಗನೂರು, ಸೋಮನಾಥಪುರ, ಸೋಸಲೆ, ತಲಕಾಡು, ಮೂಗೂರು, ಗರ್ಗೇಶ್ವರಿ ಕ್ಷೇತ್ರಗಳನ್ನು ರಚಿಸಲಾಗಿದೆ.

    ನಂಜನಗೂಡು ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ 9 ಜಿಪಂ ಕ್ಷೇತ್ರಗಳಿದ್ದು, ಹುರ, ಹುಲ್ಲಹಳ್ಳಿ, ಹೆಗ್ಗಡಹಳ್ಳಿ, ಕಳಲೆ, ಬದನವಾಳು, ದೊಡ್ಡಕವಲಂದೆ, ತಗಡೂರು, ಹದಿನಾರು, ತಾಂಡವಪುರ ಕ್ಷೇತ್ರಗಳನ್ನು ರಚಿಸಲಾಗಿದೆ.

    ಹುಣಸೂರು ತಾಲೂಕಿನಲ್ಲಿ 6 ಜಿಪಂ ಕ್ಷೇತ್ರಗಳಿದ್ದು, ಗಾವಡಗೆರೆ, ಬನ್ನಿಕುಪ್ಪೆ, ಬಿಳಿಕೆರೆ, ಧರ್ಮಾಪುರ, ಹನಗೋಡು, ಚಿಲ್ಕುಂದ ಕ್ಷೇತ್ರಗಳನ್ನು ರಚಿಸಲಾಗಿದೆ.
    ಕೆ.ಆರ್.ನಗರ ತಾಲೂಕಿನಲ್ಲಿ ಕೇವಲ 3 ಜಿಪಂ ಕ್ಷೇತ್ರಗಳನ್ನು ರಚಿಸಲಾಗಿದ್ದು, ಗಂಧನಹಳ್ಳಿ, ತಿಪ್ಪೂರು, ಹೆಬ್ಬಾಳು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಾಗಿವೆ. ಸಾಲಿಗ್ರಾಮ ತಾಲೂಕಿನಲ್ಲಿ 4 ಜಿಪಂ ಕ್ಷೇತ್ರಗಳಿದ್ದು, ತಂದ್ರೆ, ಮಿರ್ಲೆ, ಸಾಲಿಗ್ರಾಮ, ಹಳಿಯೂರು ಕ್ಷೇತ್ರಗಳನ್ನು ರಚಿಸಲಾಗಿದೆ.

    ಪಿರಿಯಾಪಟ್ಟಣ ತಾಲೂಕಿನಲ್ಲಿ 6 ಜಿಪಂ ಕ್ಷೇತ್ರಗಳಿದ್ದು, ಹಲಗನಹಳ್ಳಿ, ಬೆಟ್ಟದಪುರ, ರಾವಂದೂರು, ಕಂಪಲಾಪುರ, ಆಮಮಹಳ್ಳಿ, ಕೊಪ್ಪ ಕ್ಷೇತ್ರಗಳನ್ನು ರಚಿಸಲಾಗಿದೆ.
    ಎಚ್.ಡಿ.ಕೋಟೆ ತಾಲೂಕಿನಲ್ಲಿ 4 ಜಿಪಂ ಕ್ಷೇತ್ರಗಳಿದ್ದು, ಹಂಪಾಪುರ, ಹೈರಿಗೆ, ಅಣ್ಣೂರು, ಅಂತರಸಂತೆ, ಸರಗೂರು ತಾಲೂಕಿನಲ್ಲಿ ಅತೀ ಕಡಿಮೆ ಅಂದರೆ 2 ಜಿಪಂ ಕ್ಷೇತ್ರಗಳಿದ್ದು, ಮುಳ್ಳೂರು, ಹಂಚೀಪುರ ಕ್ಷೇತ್ರಗಳನ್ನು ರಚಿಸಲಾಗಿದೆ.

    ತಾಲೂಕು ಜಿಂಪ ಕ್ಷೇತ್ರಗಳ ಸಂಖ್ಯೆ
    ಸರಗೂರು 2
    ಕೃಷ್ಣರಾಜನಗರ 3
    ಸಾಲಿಗ್ರಾಮ 4
    ಎಚ್.ಡಿ.ಕೋಟೆ 4
    ಪಿರಿಯಾಪಟ್ಟಣ 6
    ಹುಣಸೂರು 6
    ಮೈಸೂರು 6
    ತಿ.ನರಸೀಪುರ 6
    ನಂಜನಗೂಡು 9
    ಒಟ್ಟು 46

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts