More

    ಕಟ್ಟಡ ಕಾರ್ಮಿಕರ ಪ್ರತಿಭಟನೆ

    ಮೈಸೂರು: ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಪ್ರಕಟಿಸಿರುವ ಕೋವಿಡ್-19 ಪರಿಹಾರ 5 ಸಾವಿರ ರೂ. ಕಾರ್ಮಿಕರಿಗೆ ಸಮರ್ಪಕವಾಗಿ ತಲುಪಿಲ್ಲ. ಕೂಡಲೇ ಪಾವತಿಗೆ ಕ್ರಮ ವಹಿಸಬೇಕು ಎಂದು ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

    ಲಾಕ್‌ಡೌನ್‌ನಿಂದ ಕಟ್ಟಡ ನಿರ್ಮಾಣ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಪ್ರಕಟಿಸಿರುವ ಪರಿಹಾರ ಕ್ರಮವನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಬಲಪಡಿಸಿ ಕಾರ್ಮಿಕರ ನೆರವಿಗೆ ಬರಬೇಕು. ಲಾಕ್‌ಡೌನ್ ಮುಂದುವರಿದ್ದು, ಈ ಹಿನ್ನೆಲೆಯಲ್ಲಿ ಮಾಸಿಕ 8 ಸಾವಿರ ರೂ. ಪರಿಹಾರವನ್ನು ಮುಂದಿನ ಮೂರು ತಿಂಗಳು ಪ್ರತಿ ಕಾರ್ಮಿಕನ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಬೇಕು. ಮಂಡಳಿಯಿಂದ ವಿತರಿಸಲಾದ ದಿನಸಿ ಕಿಟ್‌ಗಳನ್ನು ಶಾಸಕರಿಗೆ ನೀಡುವ ಕ್ರಮ ನಿಲ್ಲಿಸಬೇಕು. ಇವರು ನೈಜ ಕಾರ್ಮಿಕರಿಗೆ ವಿತರಿಸದೆ ತಮ್ಮ ರಾಜಕೀಯ ಪ್ರಚಾರಕ್ಕೆ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಮಂಡಳಿಗೆ ಕೆಟ್ಟ ಹೆಸರನ್ನು ತರುವ ಪ್ರಯತ್ನವಾಗಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು. ಅರ್ಹರಿಗೆ ದಿನಸಿ ಕಿಟ್ ನೀಡಬೇಕು ಎಂದು ಆಗ್ರಹಿಸಿದರು.

    ದೀರ್ಘಕಾಲದಿಂದ ವಿವಿಧ ಜಿಲ್ಲೆಗಳಲ್ಲಿ ಬಾಕಿ ಇರುವ ಪಿಂಚಣಿ, ಮದುವೆ, ವೈದ್ಯಕೀಯ, ಶೈಕ್ಷಣಿಕ, ಹೆರಿಗೆ ಮೊದಲಾದ ಸಹಾಯಧನದ ಅರ್ಜಿಗಳನ್ನು ಕಾಲಮಿತಿ ಒಳಗೆ ವಿಲೇವಾರಿ ಮಾಡಬೇಕು. ಸದಸ್ಯತ್ವ ನವೀಕರಣ ಪ್ರಕ್ರಿಯೆಯನ್ನು ಒಟಿಪಿ ರಹಿತವಾಗಿ ಮಾಡಬೇಕು. ಲಂಚ ಪಡೆದು ಹೊಸ ಸದಸ್ಯತ್ವ ಕಾರ್ಡ್ ವಿತರಣೆಗೆ ಕಡಿವಾಣ ಹಾಕಬೇಕು. ಅದಕ್ಕಾಗಿ ಕೇರಳ, ಒರಿಸ್ಸಾ ಮಾದರಿಯಲ್ಲಿ ಕಾರ್ಮಿಕ ಇಲಾಖೆ ಅಂಗೀಕೃತ ಕಾರ್ಮಿಕ ಸಂಘಟನೆಗಳ ಮೂಲಕ ಹೊಸ ಸದಸ್ಯತ್ವ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ವಲಸೆ ಕಾರ್ಮಿಕರ ಸ್ಥಿತಿ ದಯನೀಯವಾಗಿದೆ. ಕಾರ್ಮಿಕರನ್ನು ಕರೆತಂದ ಮಧ್ಯವರ್ತಿಗಳು, ಅವರನ್ನು ದುಡಿಸಿಕೊಳ್ಳುವ ಬಿಲ್ಡರ್‌ಗಳು ಅವರ ಕುರಿತು ಕಿಂಚಿತ್ತೂ ಗಮನ ನೀಡುತ್ತಿಲ್ಲ. ಆದ್ದರಿಂದ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ವಲಸೆ ಕಾರ್ಮಿಕರಿಗೆ ವಸತಿ, ಕುಡಿಯುವ ನೀರು, ಶೌಚಗೃಹ, ಆರೋಗ್ಯ ಸುರಕ್ಷತೆ, ವೇತನ ಖಾತ್ರಿ ಪಡಿಸುವ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts