More

    ಸ್ಥಳೀಯ ಕಲಾವಿದರಿಗೆ ಸಿಗಲಿ ಆದ್ಯತೆ

    ಅವಿನಾಶ್ ಜೈನಹಳ್ಳಿ ಮೈಸೂರು


    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಂದಿನಂತೆ ಆಯೋಜಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಮುಖ್ಯವಾಗಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ.


    ಕರೊನಾ ಹಿನ್ನೆಲೆಯಲ್ಲಿ ದಸರಾ ಮಹೋತ್ಸವವನ್ನು ಎರಡು ವರ್ಷಗಳ ಕಾಲ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುವ ಮೂಲಕ ಕಲಾವಿದರಿಗೆ ಪೂರ್ಣ ಪ್ರಮಾಣದ ಅವಕಾಶ ಸಿಕ್ಕಿರಲಿಲ್ಲ. 2020ನೇ ಸಾಲಿನಲ್ಲಿ ಅರಮನೆ ವೇದಿಕೆಯಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ ವರ್ಷವೂ ಅರಮನೆ ಅಂಗಳದಲ್ಲಿ ಮಾತ್ರ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಕಲಾವಿದರ ಒತ್ತಡಕ್ಕೆ ಮಣಿದ ಸರ್ಕಾರ ಅಂತಿಮವಾಗಿ ಏಳು ವೇದಿಕೆಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದರೂ ಹೆಚ್ಚಿನ ಕಲಾವಿದರಿಗೆ ಅವಕಾಶ ನೀಡಲು ಸಾಧ್ಯವಾಗಲಿಲ್ಲ.


    ದಸರಾ ಮಹೋತ್ಸವ ಬಂತೆಂದರೆ ಸಾಕು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಹಾತೊರೆಯುತ್ತಾರೆ. ಇನ್ನು ತಮಗೂ ಕಾರ್ಯಕ್ರಮ ನೀಡಲು ವೇದಿಕೆ ಸಿಕ್ಕರೆ ಸಾಕೆಂದು ಸಾವಿರಾರು ಸ್ಥಳೀಯ ಕಲಾವಿದರು ಚಡಪಡಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ತಮಗೆ ಇಷ್ಟವಾದ ಸಂಗೀತ, ನೃತ್ಯ, ನಾಟಕ ಇನ್ನಿತರ ಕಾರ್ಯಕ್ರಮಗಳನ್ನು ಆಸ್ವಾದಿಸಲು ಕಲಾರಸಿಕರು ಕಾಯುತ್ತಿರುತ್ತಾರೆ. ಆದರೆ, ಎರಡು ವರ್ಷದಿಂದ ಸರಳ ಆಚರಣೆಯಿಂದಾಗಿ ದಸರೆಯ ಕಲಾ ವೈಭವ ಕುಂದಿತ್ತು.

    ಈಗ ಎರಡು ವರ್ಷಗಳ ಬಳಿಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಯೋಜಿಸುವ ಸಾಧ್ಯತೆಗಳಿದ್ದು, ನಾಡಹಬ್ಬಕ್ಕೆ ಸಾಂಸ್ಕೃತಿಕ ನಗರಿ ಸದ್ದಿಲ್ಲದೆ ಸಜ್ಜಾಗುತ್ತಿದೆ. ಕರೊನಾ ಸೋಂಕಿನಿಂದ ಕಳೆದೆರಡು ವರ್ಷಗಳಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ದಸರಾ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಚಿಂತಿಸಿದೆ. ಹಾಗಾಗಿ ಜು. 19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿ (ಹೈಪರ್ ಕಮಿಟಿ) ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಇಲ್ಲಿ ದಸರಾ ರೂಪರೇಷೆ ಬಗ್ಗೆ ಚರ್ಚೆಯಾಗಲಿದೆ. ಸದರಿ ಸಭೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಂದಿನಂತೆ ಆಯೋಜಿಸುವ ನಿಟ್ಟಿನಲ್ಲಿ ಚರ್ಚೆಗಳಾಗಬೇಕೆಂಬ ಕೂಗು ಕಲಾವಿದರ ವಲಯದಲ್ಲಿ ಜೋರಾಗಿದೆ.

    ಸ್ಥಳೀಯರಿಗೆ ಆದ್ಯತೆ: ಎಲ್ಲ ಜಿಲ್ಲೆಯ ಗ್ರಾಮೀಣ ಭಾಗದ ಕಲಾವಿದರಿಗೆ ಹಾಗೂ ಎಲ್ಲ ಕಲಾ ಪ್ರಕಾರಗಳಿಗೆ ಅವಕಾಶ ನೀಡಬೇಕು. ನಮ್ಮ ಜಾನಪದ ಕಲಾವಿದರನ್ನು ಗೌರವಿಸುವ ಕೆಲಸವಾಗಬೇಕು. ಸಿನಿಮಾ ಸಂಗೀತ ಕಾರ್ಯಕ್ರಮಗಳನ್ನು ನಿಲ್ಲಿಸಿ ಸಾಂಪ್ರದಾಯಿಕ ಸಂಗೀತ, ನೃತ್ಯ, ನಾಟಕೋತ್ಸವಗಳನ್ನು ಆಯೋಜಿಸಬೇಕಾಗಿದೆ.

    ನಾಡಹಬ್ಬ ದಸರಾ ಮಹೋತ್ಸವವೀಗ ಕೇವಲ ಸಾಂಪ್ರದಾಯಿಕ ಹಬ್ಬವಾಗಿಲ್ಲ. ಪ್ರತಿವರ್ಷ ದಸರಾ ಮಹೋತ್ಸವವನ್ನು ನೆಚ್ಚಿಕೊಂಡು ಅನೇಕ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದರೆ, ತಮ್ಮಲ್ಲಿನ ಕಲೆಯನ್ನು ಪ್ರದರ್ಶಿಸಲು ಕಲಾವಿದರು ಹಾತೊರೆಯುತ್ತಾರೆ. ಹೀಗಾಗಿ, ಕಲೆ ಮತ್ತು ಕಲಾವಿದರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವುದು ಅನಿವಾರ್ಯವಾಗಿದೆ. ದಸರಾದಲ್ಲಿ ಜಂಬೂಸವಾರಿ ಬಿಟ್ಟರೆ ಅತಿ ಹೆಚ್ಚು ಜನರನ್ನು ಆಕರ್ಷಿಸುವುದು ಸಾಂಸ್ಕೃತಿಕ ಕಾರ್ಯಕ್ರಮಗಳು. ಆದರೆ, ನಾಡಿನ ಎಲ್ಲ ಕಲಾವಿದರನ್ನು ಹಾಗೂ ಎಲ್ಲ ಕಲಾ ಪ್ರಾಕಾರಗಳನ್ನು ಜನರಿಗೆ ಪರಿಚಯ ಮಾಡುವ ಕಾರ್ಯಕ್ರಮ ನಡೆಯುತ್ತಿಲ್ಲ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುತ್ತಿಲ್ಲ ಎಂಬ ಕೂಗು ಅನೇಕ ವರ್ಷಗಳಿಂದ ಕೇಳುತ್ತಲೇ ಇದೆ.

    ಅರಮನೆಯ ಮುಖ್ಯ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಿಗೆ ನಿತ್ಯ ಒಂದು ಗಂಟೆ ಅವಕಾಶ ಕಲ್ಪಿಸಲು ಚಿಂತನೆ ಮಾಡಬೇಕಿದೆ. ಅದರಲ್ಲೂ ದೂರದ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನಪದ ಕಲಾವಿದರಿದ್ದು, ಅಂತಹವರಿಗೂ ಅವಕಾಶ ನೀಡಬೇಕು ಎಂಬ ಒತ್ತಾಯ ಕಲಾವಿದರಿಂದ ಕೇಳಿಬರುತ್ತಿದೆ.

    ಸಂಭಾವನೆಗೆ ಬ್ರೇಕ್: ಪ್ರತಿವರ್ಷ ಯುವ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅನ್ಯ ರಾಜ್ಯದ ಕಲಾವಿದರಿಗೆ ಲಕ್ಷಾಂತರ ರೂ. ಸಂಭಾವನೆ ಕೊಡುವುದಕ್ಕೆ ಶಾಶ್ವತವಾಗಿ ಬ್ರೇಕ್ ಹಾಕಬೇಕಿದೆ. ಎರಡು ವರ್ಷಗಳಿಂದ ಸರಳ ದಸರಾ ಹಿನ್ನೆಲೆಯಲ್ಲಿ ಯುವ ದಸರಾ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಈ ಬಾರಿ ಯುವ ದಸರಾ ಎಂದಿನಂತೆ ನಡೆಯುವ ನಿರೀಕ್ಷೆ ಇದ್ದು, ಅನ್ಯರಾಜ್ಯದ ಕಲಾವಿದರಿಗೆ ಒಂದರಿಂದ ಒಂದೂವರೆ ಗಂಟೆ ಕಾರ್ಯಕ್ರಮಕ್ಕೆ ಕನಿಷ್ಠ 30ರಿಂದ 40 ಲಕ್ಷ ರೂ. ಸಂಭಾವನೆ ಕೊಡುವುದನ್ನು ನಿಲ್ಲಿಸಬೇಕು. ಅದರ ಬದಲು ಹೊಸ ರೀತಿಯಲ್ಲಿ ಚಿಂತನೆ ಮಾಡಿ ಲೋಪ ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಕಲಾವಿದರ ಗೌರವಧನ ತೀರಾ ಕಡಿಮೆಯಾಗಿದ್ದು, ಸರ್ಕಾರ ಈ ಬಾರಿಯಾದರೂ ಉದಾರ ಮನೋಭಾವ ತೋರಿಸಬೇಕಾಗಿದೆ.

    ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನವಾಗಲಿದೆ. ಈ ಬಾರಿ ಬೇರೆ ಬೇರೆ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇವೆ.

    ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ

    ಪ್ರತಿ ವರ್ಷ ದಸರಾ ಬಂದರೆ ನಮ್ಮಂಥ ಕಲಾವಿದರಿಗೆ ನಿಜಕ್ಕೂ ಹಬ್ಬದ ಸಡಗರ. ಜತೆಗೆ ಗೌರವಧನವೂ ಸಿಗುತ್ತಿತ್ತು. ಈ ಹಣ ಜೀವನ ನಿರ್ವಹಣೆಗೂ ಸಹಕಾರಿಯಾಗುತ್ತಿತ್ತು. ಕಳೆದ ಎರಡು ಬಾರಿ ಸರಳ ದಸರಾದಿಂದ ಸಂಕಷ್ಟ ಎದುರಾಗಿದೆ. ಕೋವಿಡ್‌ನಿಂದ ಕಲಾವಿದರು ನಲುಗಿ ಹೋಗಿದ್ದಾರೆ. ಹೀಗಾಗಿ, ಅವರಿಗೆ ಹೊಸ ಚೈತನ್ಯ ತುಂಬಲು ಈ ಬಾರಿಯ ದಸರಾ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು. ಮುಖ್ಯವಾಗಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು.
    ಭಾನುಪ್ರತಾಪ್, ಕಲಾವಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts