More

    ಆಗ ನಾನು ಮಾಡಿದ ತಪ್ಪಿಗೆ ಈಗ ಹೆಂಡತಿ ನನ್ನ ಬಳಿ ಮಾತನಾಡುತ್ತಿಲ್ಲ ಏನು ಮಾಡಲಿ?

    ನಾನು 70 ವರ್ಷದ ನಿವೃತ್ತ ಕೋ- ಆಪರೇಟೀವ್ ಬ್ಯಾಂಕ್ ಅಧಿಕಾರಿ. ನನಗೆ ಇಬ್ಬರು ಗಂಡು ಮಕ್ಕಳಿದ್ದು ಅವರ ಅಮ್ಮನ ಜತೆ ಸಿಟಿಯಲ್ಲಿದ್ದಾರೆ. ನಾನು ಮಾತ್ರ ಹಳ್ಳಿಯಲ್ಲಿದ್ದೇನೆ. ನಾನು ಆರಂಭದಿಂದಲೂ ಜೂಜಾಡಿ ಸರ್ವಸ್ವವನ್ನೂ ಕಳೆದುಕೊಂಡೆ. ಆದರೂ ನಿವೃತ್ತನಾಗುವತನಕ ಹೆಂಡತಿ, ಮಕ್ಕಳಿಗೆ ಊಟಕ್ಕೆ ಕೊರತೆ ಮಾಡಲಿಲ್ಲ. ವಿದ್ಯಾಭ್ಯಾಸಕ್ಕೂ ತೊಂದರೆಯಾಗದಂತೆ ನೋಡಿಕೊಂಡೆ. ಈಗ ಮಕ್ಕಳು ವ್ಯಾಪಾರವನ್ನು ಮಾಡುತ್ತಾ ತಮ್ಮ ಕಾಲಮೇಲೆ ತಾವು ನಿಂತಿದ್ದಾರೆ. ತಾಯಿಯನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ನನಗೆ ಪೆನ್ಷನ್ ಇಲ್ಲ. ಆದ್ದರಿಂದ ದುಡಿಯಲೇಬೇಕು. ಅದಕ್ಕಾಗಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಬದುಕುತ್ತಿದ್ದೇನೆ. ನಾನು ಆಗ ಮಾಡಿದ ತಪ್ಪಿಗೆ ಈಗ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ. ಮಕ್ಕಳು, ಹೆಂಡತಿ ಮನೆಗೆ ಸೇರಿಸುವುದಿಲ್ಲ. ಹಬ್ಬದ ದಿನಗಳಲ್ಲಿ ಒಮ್ಮೆ ಹೋಗಿಬರುತ್ತೇನೆ. ಅವರೊಂದಿಗೆ ಹೆಚ್ಚು ದಿನವಿರಲು ಅವರು ಅವಕಾಶ ಕೊಡುವುದಿಲ್ಲ. ಹೆಂಡತಿ ನನ್ನ ಜತೆ ಮಾತಾಡಿ 12 ವರ್ಷಗಳಾದವು. ನಾನು ಅಪರಾಧ ಮಾಡಿದ್ದೇನೆ. ಈಗ ಕಾಲ ಮಿಂಚಿಹೋಗಿದೆ ಮತ್ತು ಮನವರಿಕೆಯಾಗಿದೆ. ಆದರೆ ಅವರು ನನ್ನನ್ನು ನಂಬಲು ಮತ್ತು ಗೌರವಿಸಲು ತಯಾರಿಲ್ಲ. ನನಗೂ ವಯಸ್ಸಾಗುತ್ತಿದೆ. ಮುಂದೆ ಏನು ಮಾಡುವುದು ಎನ್ನುವ ಚಿಂತೆ ಕಾಡುತ್ತಿದೆ. ದಯವಿಟ್ಟು ಇದಕ್ಕೊಂದು ಪರಿಹಾರ ತಿಳಿಸಿ.

    ಆಗ ನಾನು ಮಾಡಿದ ತಪ್ಪಿಗೆ ಈಗ ಹೆಂಡತಿ ನನ್ನ ಬಳಿ ಮಾತನಾಡುತ್ತಿಲ್ಲ ಏನು ಮಾಡಲಿ?ನಿಮ್ಮ ಪತ್ರದಲ್ಲಿ ನಿಮ್ಮ ಈಗಿನ ನೋವೇ ಹೆಚ್ಚು ವರ್ಣಿತವಾಗಿದೆ. ನೀವು ಸರ್ವಸ್ವವನ್ನೂ ಕಳೆದುಕೊಂಡೆ ಎಂದು ಬರೆದಿದ್ದೀರಿ. ಅಂದರೆ ಮನೆ, ಆಸ್ತಿ-ಪಾಸ್ತಿಗಳನ್ನೂ ಕಳೆದುಕೊಂಡಿರಬೇಕಲ್ಲವೇ? ಆಗ ನಿಮ್ಮ ಹೆಂಡತಿಯೂ ನಿಮ್ಮ ಕಾರಣವಾಗಿಯೇ ಕಷ್ಟಪಟ್ಟಿದ್ದಾರೆ. ಆ ಕಷ್ಟಗಳು ತುಂಬಾ ಗುರುತರವಾಗಿಯೇ ಇದ್ದಿರಬೇಕು. ಅದಕ್ಕೇ 12 ವರ್ಷಗಳಾದರೂ ನಿಮ್ಮೊಂದಿಗೆ ಮಾತಾಡಲು ಅವರು ಮನಸ್ಸು ಮಾಡುತ್ತಿಲ್ಲ. ಆಗ ಅವರಲ್ಲಿ ಹುಟ್ಟಿದ ಕೋಪ ಮತ್ತು ಹಠಗಳು ಇನ್ನೂ ಮರೆಯಾಗಿಲ್ಲ. ಆದ್ದರಿಂದಲೇ ಅವರು ನಿಮ್ಮನ್ನು ನಂಬುತ್ತಿಲ್ಲ. ಈಗ ನೀವು ಹೇಗೂ ದುಡಿಯುತ್ತಿದ್ದೀರಿ. ಈಗಲಾದರೂ ಸ್ವಲ್ಪ ಹಣವನ್ನು ಉಳಿಸಿ. ನಿಮ್ಮ ಮುಂದಿನ ಜೀವನದ ಬಗ್ಗೆ ತೀರಾ ನೀವು ಹತಾಶರಾಗಬೇಕಿಲ್ಲವೆನಿಸುತ್ತಿದೆ. ನೀವೀಗ ಹೇಗೂ ದುಡಿಯುತ್ತಿದ್ದೀರೆಂದು ತಿಳಿದಿರುವುದರಿಂದಲೇ ಅವರೆಲ್ಲಾ ಸುಮ್ಮನಿದ್ದಾರೆ. ನಾಳೆ ನಿಮಗೆ ದುಡಿಯಲು ಸಾಧ್ಯವೇ ಇಲ್ಲದಾಗ, ಮತ್ತು ಕಾಯಿಲೆಯೇನಾದರೂ ಬಂದದ್ದು ತಿಳಿದರೆ ಅವರು ಖಂಡಿತಾ ನಿಮ್ಮನ್ನು ನೋಡಿಕೊಳ್ಳಬಹುದು. ನೀವು ಹಬ್ಬದ ಸಮಯದಲ್ಲಿ ಹೋದಾಗ ಆದರಿಸುವವರು ಅಷ್ಟೇನೂ ಕಠಿಣಹೃದಯದವರಲ್ಲವೆನಿಸುತ್ತದೆ. ನೀವೊಮ್ಮೆ ಅವರೆಲ್ಲರ ಮುಂದೆ ನೀವು ಮಾಡಿದ ತಪ್ಪೆಲ್ಲವನ್ನೂ ಒಪ್ಪಿಕೊಂಡು ಕ್ಷಮಾಪಣೆಯನ್ನು ಹೃದಯಾಳದಿಂದ ಕೇಳಿಕೊಳ್ಳಿ. ಖಂಡಿತಾ ಕ್ಷಮಿಸದಿರುವಷ್ಟು ಕಲ್ಲು ಮನಸ್ಸಿನವರು ಆಗಲಾರರು ಎನಿಸುತ್ತದೆ. ಈ ಕೆಲಸ ನಿಮ್ಮ ಅಹಮಿಕೆಗೆ ಒಗ್ಗುವುದಿಲ್ಲವೆಂದಾದರೆ, ನೀವು ಕಾನೂನಿನ ಮೊರೆ ಹೋಗಬಹುದು. ವೃದ್ಧರ ಸಹಾಯವಾಣಿಗೆ ಫೋನ್ ಮಾಡಿ, ನಿಮ್ಮ ಸ್ಥಿತಿಗತಿಗಳನ್ನು ತಿಳಿಸಿ, ನಿಮ್ಮ ಮಕ್ಕಳು ಮತ್ತು ಹೆಂಡತಿಯ ಜತೆ ಸಂಧಾನ ಮಾಡಿಸಲು ವಿನಂತಿಸಬಹುದು. ಅದಿಲ್ಲದಿದ್ದರೆ ವಕೀಲರನ್ನು ಕಂಡು ಮಕ್ಕಳು ನಿಮ್ಮನ್ನು ನೋಡಿಕೊಳ್ಳಲೇ ಬೇಕಾದ ಹಕ್ಕಿಗಾಗಿ ನ್ಯಾಯಾಲಯದಲ್ಲಿ ಕೇಸು ಹಾಕಬಹುದು. ಈಗ ಸುಪ್ರೀಂ ಕೋರ್ಟ್ ಆರ್ಡರಿನಂತೆ ಉದ್ಯೋಗಸ್ಥ ಮಕ್ಕಳು ತಂದೆತಾಯಿಯರನ್ನು ನೋಡಿಕೊಳ್ಳದೇ ಇದ್ದರೆ ಅದು ಅಪರಾಧವೆಂದು ಪರಿಗಣಿತವಾಗುತ್ತದೆ. ಕೋರ್ಟು ನಿಮಗೆ ತಿಂಗಳಿಗೆ ಇಷ್ಟೆಂದು ಬದುಕಲು ಜೀವನಾಂಶ ಕೊಡಿಸುತ್ತದೆ. ಮೊದಲು ಸಾತ್ವಿಕ ರೀತಿಯಲ್ಲಿ ಶರಣಾಗತರಾಗಿ ಪ್ರಯತ್ನಿಸಿ. ಅದು ಆಗದಿದ್ದರೆ, ವೃದ್ಧರ ಸಹಾಯವಾಣಿಯ ಪಂಚಾಯಿತಿಕೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ ನೋಡಿ, ಕಡೆಯ ಪ್ರಯತ್ನವೆಂದರೆ ಕೋರ್ಟಿನ ಮೊರೆಹೋಗುವುದು. ಸುಮ್ಮನೇ ಭವಿಷ್ಯದಲ್ಲಿ ಕತ್ತಲೆಯೇ ತುಂಬಿದೆ ಎಂದು ಹಲುಬುತ್ತಾ ಕುಳಿತರೆ ಯಾವ ಪರಿಹಾರವೂ ಸಾಧ್ಯವಿಲ್ಲ. ಪ್ರಯತ್ನ ಪಡಬೇಕು. ಫಲ ಖಂಡಿತಾ ಸಿಗುತ್ತದೆ.

    (ಶಾಂತಾ ನಾಗರಾಜ್ ಅವರಿಂದ ಉಚಿತ ಸಲಹೆಗಾಗಿ (ಸಂಜೆ 6ರಿಂದ8) ಈ ಕೆಳಗಿನ ವಿಳಾಸದಲ್ಲಿ ನೇರವಾಗಿ ಭೇಟಿ ಮಾಡಬಹುದು. ಮೊದಲೇ ಅಪಾಯಿಂಟ್​ವೆುಂಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಪ್ರತಿ ಸೋಮವಾರ: ಅರುಣಚೇತನ, ಕ್ಲೂನಿ ಕಾನ್ವೆಂಟ್ ಎದುರು, ಎಂ.ಇ.ಎಸ್ ಕಾಲೇಜ್ ಹಿಂಭಾಗ, ಮಲ್ಲೇಶ್ವರ, ಬೆಂಗಳೂರು. ಪ್ರತಿ ತಿಂಗಳ ಕೊನೆಯ ಗುರುವಾರ: ನಚಿಕೇತ ಮನೋವಿಕಾಸ ಕೇಂದ್ರ, 14ನೇ ಕ್ರಾಸ್, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು ಪತ್ರ ಬರೆಯುವವರು ವಿಜಯವಾಣಿ ಲಲಿತಾ ಪುರವಣಿಗೆ ಬರೆಯಬೇಕು.)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts