More

    ಸ್ವಚ್ಛನಗರಿ ಮೈಸೂರಿನಲ್ಲಿ ಅನುಪಯುಕ್ತ ವಸ್ತುಗಳೂ ಉಪಯುಕ್ತ..!

    • ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಅಭಿಯಾನ
    • ಹಳೆಯ ಬಟ್ಟೆ, ಪುಸ್ತಕ, ಆಟಿಕೆಗಳ ಸಂಗ್ರಹ

    ಸದೇಶ್ ಕಾರ್ಮಾಡ್ ಮೈಸೂರು
    ನಿಮ್ಮ ಮನೆಯಲ್ಲಿ ನಿಮಗೆ ಅನುಪಯುಕ್ತ ಅನಿಸಿದ ವಸ್ತುಗಳು ಕೆಲವರಿಗೆ ತುಂಬಾ ಉಪಯುಕ್ತವಾದ ವಸ್ತು ಕೂಡ ಆಗಿರಬಹುದು. ಈ ರೀತಿ ನಿಮಗೆ ಅನುಪಯುಕ್ತವಾದ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಬೇಕಾದವರಿಗೆ ತಲುಪಿಸಲು ನಗರ ಪಾಲಿಕೆ ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಅಭಿಯಾನ ಹಮ್ಮಿಕೊಂಡಿದೆ.

    ಬಳಸಬಹುದಾದ ಸ್ಥಿತಿಯಲ್ಲಿರುವ ಹಳೆಯ ಬಟ್ಟೆಗಳು, ಹಳೆಯ ಪುಸ್ತಕಗಳು, ದಿನ ಪತ್ರಿಕೆಗಳು, ಮಾಸಪತ್ರಿಕೆಗಳು, ಆಟಿಗಳು, ಪ್ಲಾಸ್ಟಿಕ್ ಬ್ಯಾಗ್‌ಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಈ ಅಭಿಯಾನದಲ್ಲಿ ನೀಡಬಹುದು. ಹಳೆಯ ಬಟ್ಟೆಗಳನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ನೀಡಲಾಗುವುದು. ಆದರೆ, ನೀವು ನೀಡುವ ಬಟ್ಟೆಯು ಮತ್ತೊಬ್ಬರು ಬಳಸುವ ಸ್ಥಿತಿಯಲ್ಲಿ ಇರಬೇಕು ಹಾಗೂ ಬಟ್ಟೆಯನ್ನು ಒಗೆದು ಸ್ವಚ್ಛಗೊಳಿಸಿ ನೀಡಬೇಕು.

    ಅದೇ ರೀತಿ ಹಳೆಯ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಅಥವಾ ಅವಶ್ಯಕತೆ ಇರುವವರಿಗೆ ದೊರೆಯುವಂತೆ ಮಾಡಲಾಗುವುದು. ಹಳೆಯ ಆಟಿಕೆಗಳನ್ನು ಪುನರ್ವಸತಿ ಕೇಂದ್ರಗಳು ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಸಂಘ ಸಂಸ್ಥೆಗಳಿಗೆ ನೀಡಲಾಗುವುದು. ಹಳೇಯ ನ್ಯೂಸ್‌ಪೇಪರ್‌ಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಮರು ಬಳಕೆ ಮಾಡಲು ಸಂಬಂಧಿಸಿದ ಕಂಪನಿಗೆ ವಹಿಸಲಾಗುವುದು. 250 ಗ್ರಾಂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ನೀಡಿದರೆ ಅದಕ್ಕೆ ಪ್ರತಿಯಾಗಿ ಒಂದು ಬಟ್ಟೆ ಬ್ಯಾಗ್‌ಅನ್ನು ಪಡೆಯಬಹುದು. ಶಾಲಾ ವಿದ್ಯಾರ್ಥಿಗಳು ಬಳಕೆ ಮಾಡಿದ ಹಳೆಯ ನೋಟ್‌ಬುಕ್ ನೀಡಿದರೆ ಐಟಿಸಿ ಕಂಪನಿಯವರು ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಅಭಿಯಾನದ ಅಂಗವಾಗಿ ಹೊಸ ನೋಟ್‌ಬುಕ್‌ಗಳನ್ನು ನೀಡಲಾಗುತ್ತಿದೆ.

    ಈ ಅಭಿಯಾನವು ಮೇ 20 ರಿಂದ ಪ್ರಾರಂಭಗೊಂಡಿದ್ದು, ಜೂನ್ 5ರಂದು ಅಂತ್ಯಗೊಳ್ಳಲಿದ್ದು, ಜನರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಜೂ.5 ವಿಶ್ವ ಪರಿಸರ ದಿನವಾಗಿದ್ದು, ಆ ದಿನ ನಗರದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳುವ ಮೂಲಕ ಅಭಿಯಾನವನ್ನು ಮುಕ್ತಾಯಗೊಳಿಸಲು ಪಾಲಿಕೆ ಉದ್ದೇಶಿಸಿದೆ. ಜನರು ತಮಗೆ ಬೇಡವಾದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಈ ಅಭಿಯಾನದಡಿ ಅರ್ಹರಿಗೆ ತಲುಪಿಸುವುದು ಉತ್ತಮ. ಇಂತಹ ಕಾರ್ಯವನ್ನು ಈ ಹಿಂದೆ ವಿವಿಧ ಸಂಘ ಸಂಸ್ಥೆಗಳು ಯಶಸ್ವಿಯಾಗಿ ಮಾಡಿದ್ದು, ಪ್ರಥಮ ಬಾರಿಗೆ ಸರ್ಕಾರ ಇಂಥದೊಂದು ಕಾರ್ಯಕ್ಕೆ ಕೈ ಹಾಕಿರುವುದು ಸಂತಸದ ವಿಚಾರವಾಗಿದೆ.

    ಎಲ್ಲೆಲ್ಲಿ ನೀಡಬಹುದು?

    ಕಸವನ್ನು ರಸವನ್ನಾಗಿಸುವ ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಅಭಿಯಾನದಡಿ ಹಳೆಯ ವಸ್ತುಗಳನ್ನು ನೀಡಲು ನಗರ ಪಾಲಿಕೆಯು 27 ಕಡೆಗಳಲ್ಲಿ ರೆಡ್ಯೂಸ್, ರೀಯೂಸ್, ರೀಸೈಕಲ್ ಕೇಂದ್ರ(ಆರ್‌ಆರ್‌ಆರ್)ಗಳನ್ನು ತೆರೆದಿದೆ. ಅಲ್ಲದೆ ಪ್ರತಿನಿತ್ಯ ಮನೆ ಮನೆಗೆ ಕಸ ಸಂಗ್ರಹಿಸಲು ಆಗಮಿಸುವ ಪೌರ ಕಾರ್ಮಿಕರಿಗೂ ಹಳೆಯ ವಸ್ತುಗಳನ್ನು ನೀಡಬಹುದು.

    ಉತ್ತರಾದಿಮಠ ಬಳಿ ಇರುವ ಆರ್‌ಆರ್‌ಆರ್ ಕೇಂದ್ರ, ವಿದ್ಯಾರಣ್ಯಪುರಂ ಆರ್‌ಆರ್‌ಆರ್ ಕೇಂದ್ರ, ಗುಂಡೂರಾವ್‌ನಗರದ ಶೂನ್ಯ ತ್ಯಾಜ್ಯ ಘಟಕ, ಜಯನಗರದ ಇಸ್ಕಾನ್ ದೇವಾಲಯ ರಸ್ತೆ, ಕುವೆಂಪುನಗರದ ನಂದಿನಿ ಬೂತ್, ಅಶೋಕಪುರಂನ 10ನೇ ಕ್ರಾಸ್, ಜೆಪಿ ನಗರ ಶೂನ್ಯತ್ಯಾಜ್ಯ ನಿರ್ವಹಣಾ ಘಟಕ-2, ಅರವಿಂದ ನಗರದ ಹೈಟೆನ್ಷನ್ ರಸ್ತೆ, 45ನೇ ವಾರ್ಡ್‌ನ ಡಿಡಬ್ಲುೃಸಿಸಿ ಹೈಟೆನ್ಷನ್ ರೋಡ್, ಡಿಡಬ್ಲುೃಸಿ ವಿಶ್ವಮಾನವ ಜೋಡಿ ರಸ್ತೆ, ಯಾದವಗಿರಿಯ ಸಂಕಲ್ಪ ಸೆಂಟ್ರಲ್ ಪಾರ್ಕ್ ಅಪಾರ್ಟ್‌ಮೆಂಟ್, ವಾಣಿವಿಲಾಸ ವಾಟರ್ ವರ್ಕ್ಸ್, ಪಡುವಾರಹಳ್ಳಿಯ ಮಾತೃಮಂಡಳಿ ವೃತ್ತ, ವಿಜಯನಗರ 3ನೇ ಹಂತ, ಐಶ್ವರ್ಯ ಆಸ್ಪತ್ರೆ ಬಳಿ, ಗೋಕುಲಂನ ಗಣಪತಿ ದೇವಸ್ಥಾನದ ಕಾಂಟೂರ್ ರಸ್ತೆ ಬಳಿ, ಕುಂಬಾರಕೊಪ್ಪಲಿನ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ, ವಿಜಯನಗರದ ಯೋಗಾನರಸಿಂಹ ದೇವಸ್ಥಾನ ಬಳಿ, ವಲಯ ಕಚೇರಿ 6ರ ಮುಂಭಾಗ, ನಜರ್‌ಬಾದ್‌ನ ಸರ್ಕಾರಿ ಅತಿಥಿ ಗೃಹ, ಹೈವೇ ವೃತ್ತದ ಪುತಲಿ ಪಾರ್ಕ್, ರಾಜೀವ್ ನಗರದ ಗುಜರಿ ಬಳಿ, ಎನ್.ಅರ್. ಮೊಹಲ್ಲಾದ ಶಿವಾಜಿ ಉದ್ಯಾನ, ಕಲ್ಯಾಣಗಿರಿಯ ತ್ರಿವೇಣಿ ಉದ್ಯಾನ, ಗಾಯತ್ರಿಪುರಂನ ಚರ್ಚ್ ಬಳಿ, ಸಿದ್ದಾರ್ಥನಗರದ ವಿಹಾರ ಮಾರ್ಗದಲ್ಲಿ ಹಳೆಯ ವಸ್ತುಗಳನ್ನು ಸ್ವೀಕರಿಸಲಾಗುತ್ತಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಈ ಕೇಂದ್ರಗಳು ತೆರೆದಿರುತ್ತವೆ.

    ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಅಭಿಯಾನಕ್ಕೆ ನಗರದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ನಗರದ ಜನರ ಜತೆಗೆ ವಿವಿಧ ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಕೈ ಜೋಡಿಸಿವೆ. ಅಭಿಯಾನದಲ್ಲಿ ಬಳಸಬಹುದಾದ ಸ್ಥಿತಿಯಲ್ಲಿರುವ ಹಳೆಯ ಬಟ್ಟೆಗಳು, ಹಳೆಯ ಪುಸ್ತಕಗಳು, ದಿನ ಪತ್ರಿಕೆಗಳು, ಮಾಸಪತ್ರಿಕೆಗಳು, ಆಟಿಗಳು, ಪ್ಲಾಸ್ಟಿಕ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡಬಹುದು. ಇವುಗಳನ್ನು ಸ್ವೀಕರಿಸಲು ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೆ, ಪೌರ ಕಾರ್ಮಿಕರ ಬಳಿಯೂ ನೀಡಬಹುದು. ಅಭಿಯಾನಕ್ಕೆ ನಗರದ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಕುರಿತು ಪೌರ ಕಾರ್ಮಿಕರು ಮನೆ ಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೆ ಪಾಲಿಕೆ ಅಧಿಕಾರಿಗಳ ತಂಡ ಶಾಲಾ, ಕಾಲೇಜು, ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದಾರೆ.
    ಡಾ.ಡಿ.ಜಿ. ನಾಗರಾಜ್, ಆರೋಗ್ಯಾಧಿಕಾರಿ, ನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts