More

    ಕರಾವಳಿಯಲ್ಲಿ ಗಗನಕ್ಕೇರಿದ ಮಟನ್ ದರ

    ಉಡುಪಿ/ಮಂಗಳೂರು: ಕೆಲವು ದಿನಗಳಿಂದ ಮಟನ್ (ಕುರಿ ಮಾಂಸ) ದರ ಗಗನಕ್ಕೇರಿದೆ. ಕೆಲ ದಿನಗಳ ಹಿಂದಷ್ಟೇ ಪ್ರತಿ ಕೆ.ಜಿ.ಗೆ 550-600 ರೂ. ಇದ್ದ ಮಟನ್ ಬೆಲೆ ಈಗ 650 ರೂ. ಗಡಿ ದಾಟಿದೆ.
    ಕರಾವಳಿ ಮಾರುಕಟ್ಟೆಯಲ್ಲಿ ಮಟನ್‌ಗೆ ವಿಶೇಷ ಬೇಡಿಕೆ ಇದ್ದು, ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಆರ್ಡಿನರಿ ಮಟನ್‌ಗೆ 550ರಿಂದ 600 ರೂ, ಬನ್ನೂರು ಸ್ಪೆಷಲ್ ಮಟನ್‌ಗೆ 650ರಿಂದ 700 ರೂ. ದರ ಇದೆ. ಒಂದು ವಾರದಿಂದ ದರ ಯಥಾಸ್ಥಿತಿಯಲ್ಲಿದೆ ಎನ್ನುತ್ತಾರೆ ಉಡುಪಿಯ ಮಟನ್ ವ್ಯಾಪಾರಿ ಜಾಕೀರ್.
    ಮಂಗಳೂರಿನಲ್ಲಿ 550 ರೂ. ಇದ್ದ ಮಟನ್ ದರ 600 ರೂ. ಹಾಗೂ 720 ರೂ. ಇದ್ದ ಬನ್ನೂರು ಮಟನ್ 770 ರೂ.ಗೆ ಏರಿಕೆಯಾಗಿದೆ.

    ಕರಾವಳಿ ಜಿಲ್ಲೆಗಳಿಗೆ ಮಹಾರಾಷ್ಟ್ರ, ಚಿತ್ರದುರ್ಗದಿಂದ ಕುರಿಗಳು ಪೂರೈಕೆಯಾಗುತ್ತವೆ. ಮಂಡ್ಯ ಭಾಗದ ಕುರಿಗಳಿಗೆ ಬೇಡಿಕೆ ಮತ್ತು ದರ ಹೆಚ್ಚಿದೆ. ಬನ್ನೂರು ಸ್ಪೆಷಲ್ ಕುರಿ ಮಾಂಸ ಬಹು ಬೇಡಿಕೆಯದ್ದಾಗಿದೆ. ಇಲ್ಲಿವರೆಗೆ ವ್ಯಾಪಾರವಿಲ್ಲ. ಇನ್ನು ಕ್ರಿಸ್‌ಮಸ್ ರಜೆ, ಹೊಸ ವರ್ಷ ಸಂಭ್ರಮಕ್ಕೆ ವ್ಯಾಪಾರದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು. ಹೊರ ರಾಜ್ಯ, ಜಿಲ್ಲೆಯಿಂದ ಕುರಿಗಳು ಬರಬೇಕಿದ್ದು, ಸಾರಿಗೆ ವೆಚ್ಚ ದುಪ್ಪಟ್ಟಾಗಿರುವುದು, ಜಿಎಸ್‌ಟಿ, ಮಳಿಗೆ ಬಾಡಿಗೆ ಹೆಚ್ಚಳದಿಂದ ದರ ಏರಿಕೆಯಾಗುತ್ತಿದೆ ಎಂಬುದು ಸ್ಥಳೀಯ ವ್ಯಾಪಾರಿಗಳ ಅಭಿಪ್ರಾಯ.

    ಕೋಳಿ ಮಾಂಸ ಕೆಜಿಗೆ 200 ರೂ.
    ಕೋಳಿ ಮಾಂಸ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ಕಾಪಾಡಿಕೊಂಡಿದ್ದು, ಕಳೆದ ಎರಡು- ಮೂರು ತಿಂಗಳಿನಿಂದ ದರದಲ್ಲಿ ಹೆಚ್ಚಿನ ಇಳಿಕೆ ಕಂಡು ಬಂದಿಲ್ಲ. ಉಡುಪಿಯಲ್ಲಿ ಸಜೀವ ಕೋಳಿ ಕೆ.ಜಿ.ಗೆ 130 ರೂ, ಇದ್ದರೆ ಮಾಂಸಕ್ಕೆ 200 ರೂ. ಇದೆ. ಮಂಗಳೂರಿನಲ್ಲಿ ಚಿಕನ್ ದರ ವಿದ್ ಸ್ಕಿನ್ 180, ವಿದೌಟ್ ಸ್ಕಿನ್ 200 ರೂ. ಇದೆ. ಕೋಳಿ ಮಾಂಸದ ದರ 5ರಿಂದ 10 ರೂ.ನಷ್ಟು ಏರಿಕೆಯಾಗಿದೆ.

    ಮೊಟ್ಟೆ ದುಬಾರಿ: ಕ್ರಿಸ್‌ಮಸ್, ಹೊಸ ವರ್ಷ ಹಿನ್ನೆಲೆಯಲ್ಲಿ ಮೊಟ್ಟೆ ದರದಲ್ಲಿ ಭಾರಿ ಏರಿಕೆ ದಾಖಲಾಗಿದೆ. ಸದ್ಯ ಚಿಲ್ಲರೆ ಮೊಟ್ಟೆ ದರ 6.50 ರೂ. ಇದೆ. ಇದು 7 ರೂ. ದಾಟಿದರೂ ಅಚ್ಚರಿ ಇಲ್ಲ. ಕೇಕ್ ತಯಾರಿಕೆಗೆ ಅತಿ ಹೆಚ್ಚು ಬಳಕೆಯಾಗುತ್ತಿರುವುದು ಮೊಟ್ಟೆ ದರ ಏರಿಕೆಗೆ ಪ್ರಮುಖ ಕಾರಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts