More

    ಕರಾವಳಿ- ಮಲೆನಾಡು ಜನಪರ ಒಕ್ಕೂಟ ಸಭೆ 31ಕ್ಕೆ

    ಚಿಕ್ಕಮಗಳೂರು: ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕರಾವಳಿ- ಮಲೆನಾಡು ಜನಪರ ಒಕ್ಕೂಟ ರಚಿಸಲಾಗಿದ್ದು, ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಅ.31 ರಂದು ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೋಳಿ ಹೇಳಿದರು.
    ನಗರದ ಪ್ರೆಸ್‌ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಲೆನಾಡು ಜನಪರ ಒಕ್ಕೂಟ ಸ್ಥಾಪನೆ ಮಾಡಿ, ಅದರಿಂದ ಜನರ ಸಮಸ್ಯೆಗಳ ನಿವಾರಣೆಗೆ ಅನೇಕ ಹೋರಾಟ ನಡೆಸಲಾಗಿತ್ತು. ಅದನ್ನು ಈಗ ವಿಸ್ತರಣೆ ಮಾಡುವ ದೃಷ್ಟಿಯಿಂದ ಕರಾವಳಿ ಹಾಗೂ ಮಲೆನಾಡು ಪ್ರದೇಶ ಒಳಗೊಂಡ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದ ಜನರ, ಕೂಲಿ ಕಾರ್ಮಿಕರ, ಬೆಳೆಗಾರರ ಸಮಸ್ಯೆ ಬಗೆಹರಿಸಲು ಒಕ್ಕೂಟ ರಚಿಸಲಾಗಿದೆ ಎಂದರು.
    ಎಲ್ಲ ಜಿಲ್ಲೆಗಳ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 200 ಕುಟುಂಬಗಳಿಗೆ ನಿವೇಶನ ಒದಗಿಸಲು ಕ್ರಮಕೈಗೊಳ್ಳಬೇಕಿದೆ. ಕರಾವಳಿ ಭಾಗದ ಮೀನುಗಾರರು, ಸಾರಿಗೆ ವಾಹನ ಚಾಲಕರು, ಕೂಲಿ ಕಾರ್ಮಿಕರ ಸಮಸ್ಯೆ ಅರಿತಿದ್ದು, ಧಾರವಾಡ, ಕಲಬುರಗಿಯಲ್ಲಿ ಹೈಕೋರ್ಟ್ ಪೀಠದಂತೆ ಮಲೆನಾಡು ಹಾಗೂ ಕರಾವಳಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಭಾಗದಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪಿಸಬೇಕಿದೆ.
    ಜನರ ಬದುಕು, ಭಾವನೆ ಪ್ರಶ್ನೆ ಬಂದಾಗ, ಬದುಕು ರೂಪಿಸಿಕೊಳ್ಳುವುದು ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದ ಸಭೆಗೆ ರೈತರು, ನಿವೃತ್ತ ಪ್ರಾಧ್ಯಾಪಕರು, ವಕೀಲರು, ಸರ್ವ ಪಕ್ಷ ಹಾಗೂ ಸಂಘಟನೆ ಪ್ರಜ್ಞಾವಂತ ಮುಖಂಡರು ಭಾಗವಹಿಸಲಿದ್ದು, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರಮಿಸಲಾಗುವುದು ಎಂದು ಹೇಳಿದರು.
    ಕೆಲವು ಸಮಸ್ಯೆಗಳ ಪರಿಹಾರಕ್ಕೆ ಏಕ ಧ್ವನಿಯ ಅವಶ್ಯಕತೆ ಇರುವುದರಿಂದ, ಹೋರಾಟಕ್ಕೆ ಅನುಕೂಲವಾಗಲಿದೆ. ಈ ಪ್ರದೇಶವನ್ನು ಕೃಷಿ ವಿಶೇಷ ವಲಯವನ್ನಾಗಿ ಘೋಷಿಸಬೇಕು, ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮ ನೀತಿ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
    ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ನವೀನ್ ಕರುವಾನೆ, ದುರ್ಗಾಚಾರ್, ಪೂರ್ಣೇಶ್ ಮೈಲಿಮನೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts