More

    108 ಆಂಬುಲೆನ್ಸ್‌ಗೆ ಬೇಕಿದೆ ಚಿಕಿತ್ಸೆ, ತುರ್ತು ಸೇವೆ ಇಲ್ಲದೆ ರೋಗಿಗಳ ಪರದಾಟ

    ಮಸ್ಕಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರ್ಕಾರ ಒದಗಿಸಿರುವ ಆಂಬುಲೆನ್ಸ್ ಸೂಕ್ತ ನಿರ್ವಹಣೆ ಇಲ್ಲದೆ ನಿಂತಲ್ಲೇ ನಿಂತು ಹಾಳಾಗಿದೆ.

    ಬಡವರು, ಗ್ರಾಮೀಣ ಭಾಗದ ರೋಗಿಗಳ ಅನುಕೂಲಕ್ಕಾಗಿ ಸರ್ಕಾರ ರಾಜ್ಯಾದ್ಯಂತ 108 ಆಂಬುಲೆನ್ಸ್ ಸೇವೆ ಕಲ್ಪಿಸಿದೆ. ಪಟ್ಟಣದಲ್ಲಿ ಈ ಜೀವ ರಕ್ಷಕ ವಾಹನ ಇದ್ದೂ ಈ ಭಾಗದ ರೋಗಿಗಳಿಗೆ ಅದರ ಸೌಲಭ್ಯ ಸಿಗದಂತಾಗಿರುವುದು ವಿಷಾದನೀಯ.

    ಆಂಬುಲೆನ್ಸ್ ಟಯರ್ ಪಂಕ್ಚರ್ ಆಗಿ 15ಕ್ಕಿಂತ ಹೆಚ್ಚು ದಿನಗಳಾಗಿವೆ. ಟಯರ್ ಸಂಪೂರ್ಣ ಸವೆದು ತಂತಿಗಳು ಹೊರಬಂದಿವೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಏಜೆನ್ಸಿಯವರಾಗಲಿ, ಆರೋಗ್ಯ ಇಲಾಖೆಯಾಗಲಿ ಮುಂದಾಗಿಲ್ಲ. ಇದರಿಂದ ಆಂಬುಲೆನ್ಸ್‌ಅನ್ನು ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಈ ಭಾಗದ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಕರವೇ ಅಧ್ಯಕ್ಷ ಅಶೋಕ ಮುರಾರಿ ಮತ್ತಿತರರು ಒತ್ತಾಯಿಸಿದ್ದಾರೆ.

    ಮರೀಚಿಕೆಯಾದ ತುರ್ತು ಸೇವೆ: ಮಸ್ಕಿಯ ರಾಷ್ಟ್ರೀಯ ಹೆದ್ದಾರಿ 150 (ಎ) ಹಾದುಹೋಗಿದ್ದು ಹೆಚ್ಚಿನ ಅವಘಡಗಳು ಸಂಭವಿಸುತ್ತಿರುತ್ತವೆ. ಗ್ರಾಮೀಣ ಭಾಗದ ಬಹುತೇಕ ರೋಗಿಗಳು 108 ಆಂಬುಲೆನ್ಸ್ ಅವಲಂಬಿಸಿದ್ದಾರೆ. ಆದರೆ, ವಾಹನ ಸುಸ್ಥಿತಿಯಲ್ಲಿ ಇಲ್ಲದಿರುವುದು ಯಾವ ಸಂದರ್ಭದಲ್ಲಿ ಕೆಟ್ಟು ನಿಲ್ಲುತ್ತದೆ ಎಂಬುದು ಚಾಲಕನಿಗೂ ಗೊತ್ತಿಲ್ಲದಂತಾಗಿದೆ. ಟಯರ್‌ಗಳ ಬದಲಾವಣೆ ಮಾಡದ ಕಾರಣ ತುರ್ತು ಸೇವೆ ಮರೀಚಿಕೆ ಆಗಿದೆ.

    ಮಸ್ಕಿಯಲ್ಲಿರುವ 108 ಆಂಬುಲೆನ್ಸ್‌ನ ಟಯರ್ ಹಾಳಾಗಿ ಸೇವೆ ಸ್ಥಗಿತಗೊಂಡಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಆ ವಾಹನಗಳ ನಿರ್ವಹಣೆಗೆಂದೇ ಒಬ್ಬ ಅಧಿಕಾರಿ ಇರುತ್ತಾರೆ. ಅವರಿಂದ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲಾಗುವುದು.
    | ಡಾ. ರಾಮಕೃಷ್ಣ, ಡಿಎಚ್‌ಒ, ರಾಯಚೂರು

    ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 108 ಆಂಬುಲೆನ್ಸ್ ಹಾಳಾಗಿರುವ ಕುರಿತು ನನ್ನ ಗಮನಕ್ಕೂ ಬಂದಿದೆ. ಆದ್ದರಿಂದ, ರೋಗಿಗಳಿಗೆ ತೊಂದರೆಯಾಗದಂತೆ ಶೀಘ್ರ ವಾಹನ ಬದಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗುವುದು.
    | ಆರ್.ಬಸನಗೌಡ ತುರ್ವಿಹಾಳ, ಮಸ್ಕಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts