More

    ಕದ್ರಿ ಸಂಗೀತ ಕಾರಂಜಿ ಸ್ತಬ್ಧ

    ಹರೀಶ್ ಮೋಟುಕಾನ ಮಂಗಳೂರು
    ಕದ್ರಿ ಉದ್ಯಾನವನದ ಜಿಂಕೆ ಪಾರ್ಕ್‌ನಲ್ಲಿರುವ ಸಂಗೀತ ಕಾರಂಜಿ ವೀಕ್ಷಕರ ಕೊರತೆಯಿಂದ ವರ್ಷದಿಂದ ವರ್ಷಕ್ಕೆ ಸೊರಗುತ್ತಾ ಬಂದು ಪ್ರಸ್ತುತ ಸ್ಥಬ್ಧಗೊಂಡಿದೆ. ಕಾರಂಜಿಯಲ್ಲಿ ನೀರು ಚಿಮ್ಮದಿದ್ದರೂ ತಿಂಗಳಿಗೆ ಸಾವಿರಾರು ರೂ. ನಿರ್ವಹಣಾ ವೆಚ್ಚ ತಗಲುತ್ತಿದೆ. ತೋಟಗಾರಿಕೆ ಇಲಾಖೆ ಇದಕ್ಕಾಗಿ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬೇಕಾದ ಸ್ಥಿತಿ ಇದೆ.

    ಕದ್ರಿ ಸಂಗೀತ ಕಾರಂಜಿಗೆ ತಿಂಗಳಿಗೆ ಸುಮಾರು 60 ಸಾವಿರ ರೂ. ನಿರ್ವಹಣೆ ವೆಚ್ಚ ತಗಲುತ್ತಿತ್ತು. ಖರ್ಚಿನ ಶೇ.10ರಷ್ಟು ಕೂಡಾ ಆದಾಯ ಬರುತ್ತಿರಲಿಲ್ಲ. ತಿಂಗಳಿಗೆ ಸುಮಾರು 35 ಸಾವಿರ ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಟೆಕ್ನಿಶಿಯನ್, ಸಿಬ್ಬಂದಿ ವರ್ಗದವರಿಗೆ ವೇತನ ಪಾವತಿಸುವುದು ಸವಾಲಾಗಿದೆ. ಇದಕ್ಕಾಗಿ ಗುತ್ತಿಗೆ ಸಂಸ್ಥೆಗೆ ನಿರ್ವಹಣೆಗೆ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
    ವಾರದಲ್ಲೊಂದು ದಿನ ಪ್ರದರ್ಶನಗೊಳ್ಳುತ್ತಿದ್ದ ಕಾರಂಜಿ ತಾಂತ್ರಿಕ ತೊಂದರೆಯಿಂದ ಎರಡು ವಾರಗಳಿಂದ ಪೂರ್ಣ ಸ್ಥಗಿತಗೊಂಡಿದೆ. ಪ್ರದರ್ಶನಗೊಳ್ಳುವಾಗ ವೀಕ್ಷಣೆಗೆ 10 ಮಂದಿಯೂ ಇರುವುದಿಲ್ಲ. ತಿಂಗಳಿಗೆ 10 ಸಾವಿರ ರೂ. ಕೂಡಾ ಆದಾಯ ಬರುತ್ತಿಲ್ಲ. ಕದ್ರಿಯ ವಿಶಾಲವಾದ ಪಾರ್ಕ್ ಒಳಭಾಗದಲ್ಲಿ ಈಗಾಗಲೇ ಕಾರಂಜಿ ಇದೆ. ಪ್ರವಾಸಿಗರು ಇದನ್ನು ಉಚಿತವಾಗಿ ವೀಕ್ಷಿಸುತ್ತಿದ್ದರು. ಕೆಲವು ವರ್ಷಗಳಿಂದ ನೀರಿನ ಸಮಸ್ಯೆ ಉಂಟಾಗಿ ಈ ಕಾರಂಜಿ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದೆ. ಮತ್ತೆ ಅದನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ.

    5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: ಕದ್ರಿ ಜಿಂಕೆ ಪಾರ್ಕ್‌ನಲ್ಲಿ ಮುಡಾ ವತಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಸಂಗೀತ ಕಾರಂಜಿಯನ್ನು 2018 ಜ.7ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಕಾಮಗಾರಿ ಪೂರ್ಣಗೊಂಡು ಆರು ತಿಂಗಳ ಬಳಿಕ ಉದ್ಘಾಟಿಸಲಾಗಿತ್ತು. ಅಂದಿನ ಶಾಸಕ ಜೆ.ಆರ್.ಲೋಬೊ ಅವರ ಪ್ರಯತ್ನದಲ್ಲಿ ಸಂಗೀತ ಕಾರಂಜಿ ನಿರ್ಮಾಣವಾಗಿತ್ತು. ಕಾರಂಜಿ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರಿನ ಬಿಎನ್‌ಎ ಟೆಕ್ನಾಲಜಿ ಕಂಪನಿ ವಹಿಸಿತ್ತು. ಇಲ್ಲಿ ಬಣ್ಣದ ಕಾರಂಜಿ ಮಾತ್ರವಲ್ಲದೆ ಲೇಸರ್ ಶೋ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

    ದರ ಕಡಿಮೆಯಾದರೂ ವೀಕ್ಷಕರಿಲ್ಲ: ಕದ್ರಿ ಸಂಗೀತ ಕಾರಂಜಿ ಉದ್ಘಾಟನೆಯಾದ ಬಳಿಕ ಮೂರು ತಿಂಗಳುಗಳ ಕಾಲ ಪ್ರವೇಶ ದರ ನಿಗದಿಪಡಿಸಿರಲಿಲ್ಲ. 2018 ಏ.20ರಿಂದ ಪ್ರದರ್ಶನಕ್ಕೆ ವಯಸ್ಕರಿಗೆ 50 ರೂ. ಮತ್ತು ಮಕ್ಕಳಿಗೆ 25 ರೂ. ನಿಗದಿಪಡಿಸಲಾಗಿತ್ತು. ಪ್ರವಾಸಿಗರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರದರ್ಶನ ದರ ಇಳಿಕೆ ಮಾಡಲಾಗಿತ್ತು. 6-12 ವರ್ಷದೊಳಗಿನವರಿಗೆ 15 ರೂ. ಮತ್ತು ವಯಸ್ಕರಿಗೆ 30 ರೂ. ನಿಗದಿಪಡಿಸಲಾಗಿದೆ. ಆದರೂ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ.

    ಆದಾಯ ಇಳಿಕೆ: ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಕಾರಂಜಿ ವೀಕ್ಷಣೆಗೆ ಆಗಮಿಸುವವರ ಸಂಖ್ಯೆ ಕಡಿಮೆಯಾಗುತ್ತಿತ್ತು. 2018-19ರಲ್ಲಿ ಸುಮಾರು 8 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. 2019-20ರಲ್ಲಿ ಸುಮಾರು 7 ಲಕ್ಷ ರೂ. ಇಳಿಕೆಯಾಗಿದೆ. ಕರೊನಾದಿಂದ ಹೆಚ್ಚಿನ ದಿನಗಳು ಪ್ರದರ್ಶನ ಕಾಣದ ಕಾರಣದಿಂದ ಆದಾಯ ಮತ್ತಷ್ಟು ಇಳಿಕೆಯಾಗಿತ್ತು.

    ಪ್ರವಾಸಿಗರು ಬರದೇ ಇರಲು ಕಾರಣ: ಮಂಗಳೂರಿಗೆ ಪ್ರವಾಸ ಬರುವ ಹೊರ ರಾಜ್ಯ ಅಥವಾ ಜಿಲ್ಲೆಯ ಪ್ರವಾಸಿಗರು ಸಾಯಂಕಾಲ ಬೀಚ್ ವೀಕ್ಷಣೆಗೆ ಹೋಗುತ್ತಾರೆ. ಅಲ್ಲಿಂದ ನೇರವಾಗಿ ಊರಿಗೆ ಅಥವಾ ವಾಸ್ತವ್ಯ ಹೂಡಿದ ಸ್ಥಳಕ್ಕೆ ತೆರಳುತ್ತಾರೆ. ಸಂಗೀತ ಕಾರಂಜಿ ಬೀಚ್ ಪರಿಸರದಲ್ಲಿ ಇರುತ್ತಿದ್ದರೆ, ಇದರ ವೀಕ್ಷಣೆಗೆ ಹೆಚ್ಚಿನ ಮಂದಿ ಬರುತ್ತಿದ್ದರು. ಗುತ್ತಿಗೆ ಸಂಸ್ಥೆಗೆ ವಹಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದರೂ, ಆದಾಯ ಇಲ್ಲದ ಕಾರಣ ಗುತ್ತಿಗೆ ವಹಿಸಲು ಬರುವುದು ಅನುಮಾನ ಉಂಟು ಮಾಡಿದೆ ಎಂದು ಕದ್ರಿ ಪಾರ್ಕ್ ಅಭಿವೃದ್ಧಿ ಸಮಿತಿ ಸದಸ್ಯ ಜಿ.ಕೆ.ಭಟ್ ಅಭಿಪ್ರಾಯ ಪಟ್ಟಿದ್ದಾರೆ.

    ಕದ್ರಿ ಕಾರಂಜಿಯ ವೀಕ್ಷಣೆಗೆ ಪ್ರವಾಸಿಗರ ಕೊರತೆಯಿಂದ ಆದಾಯ ಕಡಿಮೆಯಾಗಿ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿ ಗುತ್ತಿಗೆ ಸಂಸ್ಥೆಗೆ ವಹಿಸುವ ಬಗ್ಗೆ ಚಿಂತಿಸಲಾಗಿದೆ. ಕೆಲವು ದಿನಗಳ ಹಿಂದೆ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ.
    ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts