More

    ಪಾಸಿಟಿವ್ ಆಗುವ ಮುನ್ನ ಕುಂಭಮೇಳಕ್ಕೆ ಹೋಗಿ ಬಂದಿದ್ದ ಸಂಗೀತ ನಿರ್ದೇಶಕ ಶ್ರವಣ್

    ಮುಂಬೈ : ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್​ ಅವರು ಕರೊನಾ ಸೋಂಕು ತಗುಲಿ ತೀವ್ರ ಸಮಸ್ಯೆಗಳುಂಟಾಗಿ ನಿಧನರಾಗಿದ್ದಾರೆ. ರಾಥೋಡ್​ ಅವರು ಮತ್ತೊಬ್ಬ ಸಂಗೀತಗಾರ ನದೀಂ ಸೈಫಿ ಅವರೊಂದಿಗೆ ನೂರಾರು ಹಿಟ್ ಚಿತ್ರಗಳಿಗೆ ಸಂಗೀತ ನೀಡಿದ್ದರು. ಅವರ ಜೋಡಿ ನದೀಂ-ಶ್ರವಣ್ ಎಂದೇ ಖ್ಯಾತವಾಗಿತ್ತು.

    ಕಳೆದ ದಿನಗಳಲ್ಲಿ ಹರಿದ್ವಾರದಲ್ಲಿ ನಡೆದ ಕುಂಭ ಮೇಳಕ್ಕೆ ತಮ್ಮ ಪತ್ನಿ ವಿಮಲಾದೇವಿ ಅವರೊಂದಿಗೆ ಭೇಟಿ ನೀಡಿದ್ದ ರಾಥೋಡ್ ಅವರಿಗೆ ವಾಪಸು ಬಂದಾಗ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು. ಕರೊನಾ ಪರೀಕ್ಷೆ ಪಾಸಿಟೀವ್ ಬಂದ ನಂತರ ಗಂಭೀರ ಸ್ಥಿತಿಯಲ್ಲಿ ಮುಂಬೈನ ರಹೇಜ ಆಸ್ಪತ್ರೆ ಸೇರಿದ್ದು, 48 ಗಂಟೆಗಳ ಕಾಲ ವೆಂಟಿಲೇಟರ್​​ ಮೇಲೇ ಇದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದರು ಎಂದು ಪುತ್ರ ಸಂಜೀವ್ ರಾಥೋಡ್ ತಿಳಿಸಿದ್ದಾರೆ.

    ಇದನ್ನೂ ಓದಿ: ಹೋಂ ಕ್ವಾರಂಟೈನ್​​ನಲ್ಲಿ ನಟ ಮಹೇಶ್​ ಬಾಬು

    ಸ್ವತಃ ತಾವೂ ಕರೊನಾ ವಿರುದ್ಧ ಹೋರಾಡುತ್ತಿರುವ ಸಂಜೀವ್ ರಾಥೋಡ್​, “ನಮ್ಮ ಕುಟುಂಬ ಇಂಥ ಸಂಕಷ್ಟಕ್ಕೆ ಈಡಾಗುತ್ತದೆ ಎಂದು ನಾವು ಎಣಿಸಿರಲಿಲ್ಲ. ನಮ್ಮ ತಂದೆ ತೀರಿಕೊಂಡರು. ನಾನು ಮತ್ತು ನನ್ನ ತಾಯಿ ಕೂಡ ಪಾಸಿಟೀವ್ ಬಂದು ಸೆವೆನ್​​ಹಿಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ನನ್ನ ಸೋದರನಿಗೆ ಕೂಡ ಸೋಂಕು ತಗುಲಿದ್ದು, ಮನೆಯಲ್ಲಿ ಐಸೋಲೇಷನ್​ನಲ್ಲಿದ್ದಾನೆ. ತಂದೆಯ ಅಂತ್ಯಕ್ರಿಯೆ ಮಾಡಲು ಅವನಿಗೆ ಅನುಮತಿ ಸಿಕ್ಕಿದೆ. ನನ್ನ ಪಕ್ಕದ ಬೆಡ್​ನಲ್ಲಿರುವ ನನ್ನ ತಾಯಿಯನ್ನು ಸಮಾಧಾನಪಡಿಸಲು ಆಗುತ್ತಿಲ್ಲ. ಆದರೆ ನಮ್ಮಿಬ್ಬರ ಆರೋಗ್ಯ ಸುಧಾರಿಸುತ್ತಿದೆ“ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಸಿನಿಮಾ ಮತ್ತು ಸಂಗೀತ ಕ್ಷೇತ್ರದ ಹಲವಾರು ಜನರು ಶ್ರವಣ್ ರಾಥೋಡ್​​ ಸಾವಿಗೆ ಸಂತಾಪ ಸೂಚಿಸಿದ್ದಾರೆ. ರಾಥೋಡ್​ ಅವರ ಬೆಸ್ಟ್​ ಫ್ರೆಂಡ್ ಆಗಿದ್ದ ಗೀತರಚನಾಕಾರ ಸಮೀರ್ ಅಂಜಾನ್​ ಅವರು, “ನನಗೆ ಅರ್ಧ ಜೀವ ಹೋದ ಹಾಗಾಗಿದೆ. ಬೆಳಿಗ್ಗೆ ಸಂಜೆ ಎಂದರೆ ನಾನು ಶ್ರವಣ್​ ಜೊತೆಗೇ ಕಾಲ ಕಳೆಯುತ್ತಿದೆ” ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಸಮೀರ್ ಮತ್ತು ನದೀಂ-ಶ್ರವಣ್ ಜೋಡಿ 176 ಚಿತ್ರಗಳಿಗೆ ಜೊತೆಯಾಗಿ ಗೀತೆಗಳನ್ನು ಸಿದ್ಧಪಡಿಸಿದ್ದರು ಎನ್ನಲಾಗಿದೆ. ಬಾಲಿವುಡ್ ನಟರಾದ ಅಕ್ಷಯ್​ಕುಮಾರ್, ಮನೋಜ್ ಬಾಜಪೇಯಿ, ಸಂಗೀತಕಾರ ಎ.ಆರ್.ರೆಹಮಾನ್, ಗಾಯಕರಾದ ಶ್ರೇಯಾ ಗೋಶಾಲ್, ಅರ್ಮಾನ್ ಮಲ್ಲಿಕ್ ಮತ್ತಿತರರು ಟ್ವಿಟರ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts