More

    ರೈತನ ಕೈ ಹಿಡಿದ ಅಣಬೆ ಕೃಷಿ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಮೆಕ್ಕೆಜೋಳ, ಹತ್ತಿ ಬೆಳೆದು ನಷ್ಟ ಅನುಭವಿಸಿದ ರೈತನೊಬ್ಬ ಸಾವಯವ ಕೃಷಿ ಪದ್ಧತಿಯಲ್ಲಿ ಚಿಪ್ಪುಅಣಬೆ ಬೆಳೆದು ಕೈ ತುಂಬ ಹಣಗಳಿಸುವ ಮೂಲಕ ಯಶಸ್ವಿಯಾಗಿದ್ದಾನೆ.

    ಜಿಲ್ಲೆಯ ಬ್ಯಾಡಗಿ ತಾಲೂಕು ಸಿದ್ದಾಪುರ ಗ್ರಾಮದ ರೈತ ಮಲ್ಲಿಕಾರ್ಜುನ ಕಚವಿ, ಕಳೆದ 20 ವರ್ಷಗಳಿಂದ ರಾಸಾಯನಿಕ ಗೊಬ್ಬರ ಬಳಸಿ ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಟೊಮ್ಯಾಟೊ ಸೇರಿ ಇತರ ತರಕಾರಿ ಬೆಳೆ ಬೆಳೆಯುತ್ತಿದ್ದರು. ಆದರೆ, ರಾಸಾಯನಿಕ ಗೊಬ್ಬರ ಬಳಕೆಯಿಂದ ಇಳುವರಿ ಕುಂಠಿತವಾಗಿ ನಷ್ಟ ಅನುಭವಿಸಬೇಕಾಯಿತು. ಆದ್ದರಿಂದ ಸಾವಯವ ಗೊಬ್ಬರ ತಯಾರಿಸಿಕೊಂಡು ಅಣಬೆ ಬೇಸಾಯ ಮಾಡಿದ್ದಾರೆ.

    ಅಣಬೆ ಬೆಳೆಯಲು ಕೃಷಿ ಭೂಮಿ ಇಲ್ಲದೇ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಕೃಷಿ ತ್ಯಾಜ್ಯ ವಸ್ತುಗಳಾದ ಭತ್ತದ ಹುಲ್ಲು ಮೆಕ್ಕೆಜೋಳದ ಸಿಪ್ಪೆ, ಕಬ್ಬಿನ ಸಿಪ್ಪೆ, ರಾಗಿ ಹುಲ್ಲುಗಳ ಮರುಬಳಕೆಯಿಂದ ಸರಳ ಪದ್ಧತಿಯಲ್ಲಿ ಅಣಬೆ ಕೃಷಿ ಮಾಡಿದ್ದಾರೆ. ಅಣಬೆ 45ದಿನದಲ್ಲಿ ಬರುವ ಉತ್ತಮ ಬೆಳೆಯಾಗಿದೆ. ಮೊದಲ ಬಾರಿಗೆ 1 ಕೆಜಿಗೆ 250 ರೂ.ನಂತೆ ಹಾವೇರಿ, ಬ್ಯಾಡಗಿ, ಹಾನಗಲ್ಲ, ಹುಬ್ಬಳ್ಳಿ ಮತ್ತು ದಾವಣಗೆರೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದ್ದೇನೆ ಎಂದು ರೈತ ಮಲ್ಲಿಕಾರ್ಜುನ ‘ವಿಜಯವಾಣಿ’ಗೆ ತಿಳಿಸಿದರು.

    ಕೃಷಿಯ ಜೊತೆಗೆ ಮನೆಯಲ್ಲಿಯೇ ಕೃಷಿ ತ್ಯಾಜ್ಯಗಳನ್ನು ಬಳಕೆ ಮಾಡಿ ಅಣಬೆ ಬೆಳೆಯುತ್ತಿರುವ ಮಲ್ಲಿಕಾರ್ಜುನ, ಇದರ ಜೊತೆಗೆ ಕೃಷಿಯನ್ನೂ ಮುಂದುವರಿಸಿದ್ದಾರೆ. ಆದರೆ, ಈ ಬಾರಿ ದುಬಾರಿ ಗೊಬ್ಬರ, ಕ್ರಿಮಿನಾಶಕ ಬಳಕೆ ಮಾಡದೇ ಸಾವಯವ ಪದ್ಧತಿಯಲ್ಲಿಯೇ ಕೃಷಿ ಕೆಲಸ ಕೈಗೊಂಡಿದ್ದಾರೆ.

    ಅಣಬೆ ರುಚಿಕರವಾದ ಹಾಗೂ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ಅಧಿಕ ಪ್ರಮಾಣದಲ್ಲಿ ನಾರಿನ ಪದಾರ್ಥ ಹೊಂದಿರುವುದರಿಂದ ಔಷಧ ಗುಣಗಳನ್ನು ಹೊಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕರೊನಾ ನಿಯಂತ್ರಣದಲ್ಲೂ ಅಣಬೆ ಹೆಚ್ಚಿನ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

    | ಡಾ. ಜಿ.ಎಸ್. ಕುಲಕರ್ಣಿ ಅಣಬೆ ಬೆಳೆ ಸಲಹೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts