More

    ದಂಪತಿಯ ಬರ್ಬರ ಹತ್ಯೆ

    ಕಿನ್ನಿಗೋಳಿ: ಏಳಿಂಜೆ ಮುತ್ತಯ್ಯ ಕೆರೆ ಸಮೀಪ ಕ್ಷುಲ್ಲಕ ಕಾರಣಕ್ಕೆ ದಂಪತಿಯನ್ನು ಹಾಡಹಗಲೇ ಚಾಕುವಿನಿಂದ ಇರಿದು ಹತ್ಯೆಗೈಯಲಾಗಿದೆ. ವಿನ್ಸೆಂಟ್ ಡಿಸೋಜ(48), ಪತ್ನಿ ಹೆಲೆನ್ ಡಿಸೋಜ(43) ಕೊಲೆಯಾದವರು. ನೆರೆಮನೆ ನಿವಾಸಿ ಅಲ್ಫೊನ್ಸೋ ಸಲ್ಡಾನ(51) ಆರೋಪಿ.

    ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ವಿನ್ಸೆಂಟ್ ಡಿಸೋಜ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದು, ಕೆಲವರ್ಷಗಳಿಂದ ಏಳಿಂಜೆ ಮುತ್ತಯ್ಯ ಕೆರೆ ಸಮೀಪ ವಾಸವಾಗಿದ್ದರು. ಜಾಗಕ್ಕೆ ಸಂಬಂಧಿಸಿ ತನ್ನ ನೆರೆಮನೆಯ ಅಲ್ಫೊನ್ಸೋ ಎಂಬಾತನೊಂದಿಗೆ ವೈಮನಸ್ಸು ಇದ್ದು, ಕೆಲಸಮಯಗಳಿಂದ ಸಣ್ಣ ಪುಟ್ಟ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಬುಧವಾರ ಮಧ್ಯಾಹ್ನ ಸುಮಾರು 11.30ರ ಹೊತ್ತಿಗೆ ಆರೋಪಿ ಅಲ್ಫೊನ್ಸೋ, ವಿನ್ಸೆಂಟ್ ಡಿಸೋಜ ದಂಪತಿಗೆ ಅವಾಚ್ಯವಾಗಿ ನಿಂದಿಸಿದ್ದನು. ಇದನ್ನು ಪ್ರಶ್ನಿಸಲು ವಿನ್ಸೆಂಟ್ ಅವರು ಅಲ್ಫೊನ್ಸೋ ಮನೆಗೆ ಬಂದಿದ್ದು, ಕೂಡಲೇ ಅಲ್ಫೊನ್ಸೋ ಮನೆ ಒಳಗಿಂದ ಚಾಕು ತಂದು ವಿನ್ಸೆಂಟ್ ಅವರಿಗೆ ಇರಿದಿದ್ದಾನೆ. ತಡೆಯಲು ಬಂದ ವಿನ್ಸೆಂಟ್ ಪತ್ನಿ ಹೆಲೆನ್ ಅವರಿಗೂ ಚಾಕುವಿನಿಂದ ಬರ್ಬರವಾಗಿ ಇರಿದಿದ್ದಾನೆ. ವಿನ್ಸೆಂಟ್ ಸ್ಥಳದಲ್ಲೇ ಮೃತಪಟ್ಟರೆ, ಹೆಲೆನ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಅಸು ನೀಗಿದ್ದಾರೆ.
    ಈ ನಡುವೆ ಆರೋಪಿ ಅಲ್ಫೊನ್ಸೋ ಎಸಿಪಿಗೆ ಕರೆ ಮಾಡಿ ತನ್ನ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಹೇಳಿದ್ದಾನೆ. ಮೃತ ವಿನ್ಸೆಂಟ್ ಅವರ ಹಿರಿಯ ಮಗಳು 10ನೇ ತರಗತಿ ಮತ್ತು ಕಿರಿಯ ಪುತ್ರ 4ನೇ ತರಗತಿ ಓದುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಪೊಲೀಸ್ ಕಮೀಷನರ್ ಡಾ.ಹರ್ಷ, ಎಸಿಪಿ ಮತ್ತು ಮೂಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಆರೋಪಿ ಅಲ್ಫೊನ್ಸೋ ಕೂಲಿ ಕೆಲಸ ಮಾಡುತ್ತಿದ್ದು ವಿಕ್ಷಿಪ್ತ ವ್ಯಕ್ತಿಯಂತೆ ವರ್ತಿಸುತ್ತಿದ್ದ ಎನ್ನಲಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದು, ಹಿಂದುಗಳ ಮನೆಯಲ್ಲಿ ಕೆಲಸ ಮಾಡಿದರೆ ತನ್ನ ಸಂಬಳವನ್ನು ದೇವಸ್ಥಾನಕ್ಕೆ ಹಾಕಿ, ಕ್ರೈಸ್ತರ ಮನೆಯಲ್ಲಿ ಕೆಲಸ ಮಾಡಿದರೆ ಅದನ್ನು ಚರ್ಚ್‌ಗೆ ನೀಡಿ ಎಂದು ಹೇಳುತ್ತಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ದಂಪತಿ ಕೊಲೆ ಆರೋಪಿಯನ್ನು ಬಂಧಿಸಿದ್ದೇವೆ. ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬುದನ್ನು ಆರೋಪಿಯನ್ನು ತನಿಖೆಗೊಳಪಡಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ.
    ಡಾ.ಹರ್ಷ, ಕಮೀಷನರ್ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts