More

    ಕೊಲೆಗೆ ಯತ್ನಿಸಿದ ಆರೋಪಿ ಸೆರೆ, ಬಸ್ ಚಾಲಕನಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದ ಪ್ರಕರಣ

    ಮಂಗಳೂರು: ನಗರದ ಪಡೀಲ್ ಕ್ರಾಸ್ ಬಳಿ ಬಸ್ ತಡೆದು ಚಾಲಕನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಕೊಟ್ಟು ಕೊಲೆಗೆ ಯತ್ನಿಸಿದ ಫೈಸಲ್ ನಗರದ ಮಹಮ್ಮದ್ ಅಶ್ರಫ್(26) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸಂಪತ್ ಕುಮಾರ್ ಎಂಬವರು ಮಂಗಳವಾರ ಮಧ್ಯಾಹ್ನ ರೂಟ್ ನಂಬರ್ 23ರ ಬಸ್ಸನ್ನು ಫೈಸಲ್ ನಗರದಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪೆರ್ಲ ವೀರನಗರ ಎಂಬಲ್ಲಿ ಮಹಮ್ಮದ್ ಅಶ್ರಫ್ ಎಂಬಾತ ಬೈಕ್ ಚಲಾಯಿಸಿಕೊಂಡು ಬಂದಿದ್ದ. ಬಸ್ ಚಾಲಕ ಸೈಡ್ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಅಶ್ರಫ್ ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದಿತ್ತು.

    ಇದೇ ದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ರಾತ್ರಿ 8ಕ್ಕೆ ಆರೋಪಿ ಅಶ್ರಫ್ ತನ್ನ ಬೈಕನ್ನು ಬಸ್‌ಗೆ ಅಡ್ಡ ಇಟ್ಟು ಬಸ್‌ನ ಎದುರಿನ ಗ್ಲಾಸ್ ಹಾಗೂ ಚಾಲಕನಿಗೆ ಪೆಟ್ರೋಲ್ ಎರಚಿ, ಬೆಂಕಿ ಕೊಟ್ಟು ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ಆರೋಪಿ ಅಶ್ರಫ್ ಬಜಾಲ್ ನಂತೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಸೈಡ್ ಕೊಡುವ ವಿಚಾರದಲ್ಲಿ ಕೃತ್ಯ ನಡೆಸಿರುವುದಾಗಿ ಹೇಳಿಕೆ ನೀಡಿದ್ದಾನೆ.
    ಡಿಸಿಪಿಗಳಾದ ವಿನಯ ಗಾಂವ್ಕರ್, ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಎಸಿಪಿ ರಂಜಿತ್ ಕುಮಾರ್ ಬಂಡಾರು ನಿರ್ದೇಶನದಂತೆ ಕಂಕನಾಡಿ ಇನ್‌ಸ್ಪೆಕ್ಟರ್ ಅಶೋಕ್, ಪಿಎಸ್‌ಐ ರಘು ನಾಯ್ಕ, ಕೃಷ್ಣ ಬಿ. ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳಾದ ಮದನ್ ಮತ್ತು ವಿನೋದ್, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಕಾರ್ತಿಕ್, ಜೀವನ್, ಮಾಲತೇಶ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

    ರೌಡಿ ಶೀಟ್ ತೆರೆಯುವ ಎಚ್ಚರಿಕೆ: ರಸ್ತೆಗಳಲ್ಲಿ ಜಗಳವಾಡುವವರ ವಿರುದ್ಧ ರೌಡಿ ಶೀಟ್ ತೆರೆಯಲು ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಈ ಪ್ರಕರಣದ ಆರೋಪಿ ಮಹಮ್ಮದ್ ಅಶ್ರಫ್ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲು ನಿರ್ದೇಶಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts