More

    ಕುಂದಾಪುರ ಉದ್ಯಮಿ ಕೊಲೆಗೆ ಸಂಚು, ನಾಲ್ವರ ಬಂಧನ

    ಕುಂದಾಪುರ: ಮೀನು ಮಾರಾಟಕ್ಕೆ ಸಂಬಂಧಿಸಿದ ಹಣಕಾಸು ವಿಷಯದಲ್ಲಿ ಉಂಟಾದ ಮನಸ್ತಾಪ ಹಿನ್ನೆಲೆ ಕುಂದಾಪುರ ಉದ್ಯಮಿಯೊಬ್ಬರ ಕೊಲೆಗೆ ಸಂಚು ಹೂಡಿ ಮಹಾರಾಷ್ಟ್ರದ ರತ್ನಗಿರಿಯಿಂದ ಆಗಮಿಸಿದ್ದ ದುಷ್ಕರ್ಮಿಗಳ ತಂಡವನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ರತ್ನಗಿರಿ ಮೂಲದ ದಾನೀಶ್ ಪಾಟೀಲ್(34), ಆಸೀಮ್ ಖಾಜಿ(39), ಮುಕದ್ದರ್ ಅಕ್ರಮ್(34), ಪ್ರಸಾದ್ ವಿಜಯ್ ರಾಯರಿಕರ್(47) ಬಂಧಿತ ಆರೋಪಿಗಳು.

    ಕುಂದಾಪುರ ಮರವಂತೆಯ ಮೊಹಮ್ಮದ್ ಶಾಕೀರ್ ಎಂಬುವರು ಮೀನು ಮಾರಾಟ ವ್ಯವಹಾರ ನಡೆಸುತ್ತಿದ್ದು ಸುಮಾರು 2 ವರ್ಷದಿಂದ ರತ್ನಗಿರಿ ಮೂಲದ ದಾನೀಶ್ ಪಾಟೀಲ್ ಜತೆ ಸ್ನೇಹ ಮಾಡಿಕೊಂಡು ಆತನಿಂದ ಮೀನು ಖರೀದಿ ಮಾಡುತ್ತಾ ಬಂದಿದ್ದರು. ಎಲ್ಲ ವ್ಯವಹಾರ ಸುಸೂತ್ರವಾಗಿದ್ದರೂ ಶಾಕೀರ್ ರೂ.50 ಲಕ್ಷ ಹಣ ಕೊಡುವುದು ಬಾಕಿ ಇದೆ ಎಂದು ಶಾಕೀರ್ ತಂದೆಗೆ ದಾನೀಶ್ ಪಾಟೀಲ್ ಆಗಿಂದಾಗ್ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಶುಕ್ರವಾರ ಕುಂದಾಪುರ ಹಂಗಳೂರಲ್ಲಿರುವ ಶಾಕೀರ್ ಮನೆಗೆ ದಾನೀಶ್ ಹಾಗೂ ಮತ್ತೋರ್ವ ಬಂದು ಕೊಲೆ ಬೆದರಿಕೆ ಹಾಕಿದ್ದರು. ಈ ಸಂದರ್ಭ ಶಾಕೀರ್ ತಾನು ಎಲ್ಲ ಹಣ ಈಗಾಗಲೇ ಕೊಟ್ಟಿದ್ದು ಬಾಕಿಯಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಆರೋಪಿಗಳು ತಾವು ಇಲ್ಲೇ ಸಮೀಪದ ಲಾಡ್ಜಿನಲ್ಲಿ ರೂಂ ಮಾಡಿದ್ದು ಅಲ್ಲಿಗೆ ಬಂದರೆ ಹಣದ ಲೆಕ್ಕ ಕೊಡುತ್ತೇವೆ ಎಂದು ಹೇಳಿ ತೆರಳಿದ್ದರು. ಶುಕ್ರವಾರ ರಾತ್ರಿ ಕುಂದಾಪುರ ಕಡೆಗೆ ಶಾಕೀರ್ ತನ್ನ ಸ್ನೇಹಿತ ಸುಹೈಲ್ ಜತೆ ಕಾರಿನಲ್ಲಿ ಬರುತ್ತಿದ್ದಾಗ ದಾನಿಶ್ ಹಾಗೂ ಇತರೆ ಮೂವರು ಆರೋಪಿಗಳು ಕಾರನ್ನು ಅಡ್ಡಗಟ್ಟಿ ಶಾಕೀರ್ ಅವರನ್ನು ಕೊಲ್ಲುವ ಉದ್ದೇಶದಿಂದ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಅದೃಷ್ಟವಶಾತ್ ಶಾಕೀರ್ ಕೊಂಚದರಲ್ಲೇ ತಪ್ಪಿಸಿಕೊಂಡಿದ್ದಾರೆ.

    ಪರಾರಿಯಾಗಲೆತ್ನ: ಕೊಲೆಗೆ ಯತ್ನಿಸಿದ ತಂಡದಿಂದ ತಪ್ಪಿಸಿಕೊಂಡ ಶಾಕೀರ್ ತಕ್ಷಣ ಕುಂದಾಪುರ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಕುಂದಾಪುರ ಪಿಎಸ್‌ಐ ಹರೀಶ್ ಆರ್.ಮತ್ತು ತಂಡ ಆರೋಪಿಗಳು ತಂಗಿದ್ದ ಲಾಡ್ಜಿನತ್ತ ಸಾಗಿದ್ದಾರೆ. ಅಷ್ಟರಲ್ಲಾಗಲೇ ಆರೋಪಿಗಳು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಕಾರನ್ನು ಬೆನ್ನಟ್ಟಿದ ಪೊಲೀಸರ ತಂಡ ಕೋಟೇಶ್ವರ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಸುಧಾರಿತ ಮಾರಕಾಯುಧ:ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಹಾರಾಷ್ಟ್ರ ನೋಂದಣಿ ಕಾರು, 2 ದೊಡ್ಡ ಚೂರಿಗಳು, ಬಟನ್ ಚಾಕು, 2 ಸ್ಕ್ರೂಡ್ರೈವರ್ ವಶಕ್ಕೆ ಪಡೆಯಲಾಗಿದೆ. ಇದೆಲ್ಲವೂ ಸುಧಾರಿತ ಮಾರಕಾಯುಧಗಳಾಗಿದ್ದು ವಿದೇಶದಿಂದ ತರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಆರೋಪಿಗಳು ಶಾಕೀರ್ ಕೊಲೆಗೆ ಸ್ಕೆಚ್ ರೂಪಿಸಿಯೇ ಬಂದಿದ್ದರು ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಉಡುಪಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಉಪವಿಭಾಗ ಎಎಸ್ಪಿ ಹರಿರಾಂ ಶಂಕರ್, ಸಿಪಿಐ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಕುಂದಾಪುರ ಪಿಎಸ್‌ಐ ಹರೀಶ್ ಆರ್, ಎಎಸ್‌ಐ ಸುಧಾಕರ್, ಹೆಡ್ ಕಾನ್ಸ್‌ಟೆಬಲ್‌ಗಳಾದ ಮಂಜು, ಸಂತೋಷ್, ರಾಜು ನಾಯ್ಕ, ರಾಘವೇಂದ್ರ, ಸಿಬ್ಬಂದಿ ಅಶ್ವಿನ್, ಶಾಂತರಾಮ, ರಾಮ ಗೌಡ, ಮಾರುತಿ, ರವಿ, ಶಂಕರ್, ರಾಘವೇಂದ್ರ ಮೊಗೇರ, ಸಚಿನ ಮತ್ತು ಪ್ರಸನ್ನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts