More

    ಕೈ-ಕಮಲ ಸದಸ್ಯರ ಮಧ್ಯೆ ವಾಗ್ವಾದ

    ಮುಂಡರಗಿ: ಖಾಸಗಿ ಲೇಔಟ್​ನಲ್ಲಿ ಎಸ್​ಎಫ್​ಸಿ (ರಾಜ್ಯ ಹಣಕಾಸು ಆಯೋಗ) ವಿಶೇಷ ಯೋಜನೆಯ 50 ಲಕ್ಷ ರೂ. ಅನುದಾನದ ಕಾಮಗಾರಿಗೆ ಮಂಜೂರಾತಿ ನೀಡುವ ವಿಷಯವಾಗಿ ಸೋಮವಾರ ಜರುಗಿದ ಪುರಸಭೆ ಪ್ರಥಮ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ವಾಗ್ದಾದ ನಡೆಯಿತು.

    ಪ್ರಸಕ್ತ ಸಾಲಿನ ಎಸ್​ಎಫ್​ಸಿ ವಿಶೇಷ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಗೆ ಅನುಮೋದನೆ ನೀಡುವ ಕುರಿತು ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಮತ್ತು ಸದಸ್ಯ ನಾಗೇಶ ಹುಬ್ಬಳ್ಳಿ ಪ್ರಸ್ತಾಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರಾದ ಮಹ್ಮದರಫೀಕ್ ಮುಲ್ಲಾ, ನಾಗರಾಜ ಹೊಂಬಳಗಟ್ಟಿ, ರಾಜಾಬಕ್ಷೀ ಬೆಟಗೇರಿ ಮತ್ತು ಸಂತೋಷ ಹಿರೇಮನಿ, ‘50 ಲಕ್ಷ ರೂ. ಅನುದಾನವನ್ನು 17 ಮತ್ತು 18ನೇ ವಾರ್ಡ್​ನಲ್ಲಿರುವ ಖಾಸಗಿ ಲೇಔಟ್​ನ ಕಾಮಗಾರಿಗಳಿಗೆ ಬಳಸುವುದು ಬೇಡ. ಅದೇ ವಾರ್ಡಿನಲ್ಲಿಯೇ ಇತರ ಪ್ರದೇಶಗಳ ಅಭಿವೃದ್ಧಿಗೆ ಬಳಕೆ ಮಾಡುವುದಕ್ಕೆ ನಮ್ಮ ತಕರಾರು ಇಲ್ಲ’ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ನಾಗೇಶ ಹುಬ್ಬಳ್ಳಿ ‘ಇದು ನಮ್ಮ ಶಾಸಕರು ಬಿಡುಗಡೆಗೊಳಿಸಿದ ಅನುದಾನವಾಗಿದೆ. ಹೀಗಾಗಿ ಈ ವಿಷಯವನ್ನು ಬಹುಮತಕ್ಕೆ ಇಡಬೇಕು’ ಎಂದರು. ಆಗ ಕಾಂಗ್ರೆಸ್ ಸದಸ್ಯರ ಜೊತೆಗೆ ಆಡಳಿತ ಪಕ್ಷ ಬಿಜೆಪಿ ಸದಸ್ಯರಾದ ಪ್ರಲ್ಹಾದ ಹೊಸಮನಿ, ಲಿಂಗರಾಜಗೌಡ ಪಾಟೀಲ ಅವರು, ‘ಶಾಸಕರ ಅನುದಾನ ಬಳಕೆಗೆ ತಮ್ಮ ತಕರಾರಿಲ್ಲ. ಆದರೆ, ವಾರ್ಡಿನ ಅಭಿವೃದ್ಧಿ ಮಾಡಬೇಕೇ ಹೊರತು ಖಾಸಗಿ ಲೇಔಟ್​ನಲ್ಲಿ ಅನುದಾನ ಬಳಕೆ ಮಾಡಬಾರದು. ಇದು ಕಾನೂನು ಬಾಹಿರವಾಗುತ್ತದೆ. ಕಾನೂನಿನ ಅಡಿಯಲ್ಲಿ ರ್ಚಚಿಸಿ ಅನೋದನೆ ನೀಡಬೇಕು’ ಎಂದು ಸಲಹೆ ನೀಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ‘ನಮ್ಮ ಬಿಜೆಪಿ ಪಕ್ಷದ ಅನುದಾನ ಈಗ ನಿಗದಿ ಪಡಿಸಿದ ಸ್ಥಳದಲ್ಲಿ ಬಳಕೆಯಾಗುತ್ತದೆ. ಉಳಿದ ಹಂತದಲ್ಲಿ ಎಲ್ಲ ವಾರ್ಡ್​ಗಳಲ್ಲಿಯೂ ಶಾಸಕರ ಅನುದಾನ ಬಿಡುಗಡೆ ಮಾಡಿಲಸು ಪ್ರಯತ್ನ ಪಡೋಣ’ ಎಂದು ಹೇಳಿದರು.

    ಅಧ್ಯಕ್ಷೆ ಕವಿತಾ ಅವರು ‘ಬಿಜೆಪಿ ಪಕ್ಷ’ ಎಂದಿದ್ದನ್ನು ವಿರೋಧಿಸಿದ ಕಾಂಗ್ರೆಸ್ ಸದಸ್ಯರು ಖಂಡಿಸಿ ಪುರಸಭೆ ಅಭಿವೃದ್ಧಿ ವಿಷಯದಲ್ಲಿ ಪಕ್ಷವೆನ್ನದೆ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ವಿರೋಧಿಸಿದರು.

    ಬಿಜೆಪಿ ಸದಸ್ಯ ಪವನ ಮೇಟಿ ಮಾತನಾಡಿ, ‘ಶಾಸಕರ ಅನುದಾನ ಎಂದು ಹೇಳುವ ಬದಲು ಪಕ್ಷದ ಅನುದಾನ ಎಂದಿದ್ದಾರೆ’ ಎಂದು ಸಮರ್ಥಿಸಿಕೊಂಡರು. ಆಗ ಕೆಲ ಸಮಯ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ, ಶಾಂತಿಯುತವಾಗಿ ರ್ಚಚಿಸುವಂತೆ ಸದಸ್ಯರಿಗೆ ಮನವಿ ಮಾಡಿದರು.

    ಸದಸ್ಯರಾದ ಜ್ಯೋತಿ ಹಾನಗಲ್ಲ, ರಿಯಾನಬೇಗಂ ಕೆಲೂರ ಅವರು ಈ ವಿಷಯದ ಬಗ್ಗೆ ನಮಗೆ ಗೊತ್ತಿಲ್ಲ. ಹೀಗಾಗಿ ಈ ವಿಷಯವನ್ನು ಮುಂದಿನ ಸಭೆಗೆ ಹಾಕಬೇಕು. ಈಗ ಬೇರೆ ವಿಷಯದ ಬಗ್ಗೆ ರ್ಚಚಿಸಿ ಎಂದರು.

    ಇನ್ನುಳಿದಂತೆ ಬೀದಿ ದೀಪಗಳ ನಿರ್ವಹಣೆ, ಹೆದ್ದಾರಿ ರಸ್ತೆ ವಿಭಜಕ ದುರಸ್ತಿ, ಸಿಬ್ಬಂದಿ ಕೊರತೆ, ಬೀದಿ ನಾಯಿ ಮತ್ತು ಹಂದಿಗಳ ನಿಯಂತ್ರಣಕ್ಕೆ ಕ್ರಮ, ನಿರುಪಯುಕ್ತ ವಸ್ತುಗಳ ಹರಾಜು ಹಾಗೂ ನೀರಿನ ಕರದ ಬಗ್ಗೆ ರ್ಚಚಿಸಲಾಯಿತು. ಪೌರ ಕಾರ್ವಿುಕರಿಗೆ ಪ್ರತಿದಿನ ಬೆಳಗ್ಗೆ ಉಪಾಹಾರ ನೀಡಲು ತೀರ್ವನಿಸಲಾಯಿತು.

    ಮುಖ್ಯಾಧಿಕಾರಿ ಎನ್.ಕೆ. ಡೊಂಬರ್, ಸದಸ್ಯರಾದ ಟಿ.ಬಿ. ದಂಡಿನ, ಪ್ರಕಾಶ ಹಲವಾಗಲಿ, ಶಾಂತವ್ವ ಕರಡಿಕೊಳ್ಳ, ರೈಮಾನಸಾಬ್ ಮಲ್ಲಿನಕೇರಿ, ಸುಮಾ ಬಳ್ಳಾರಿ, ವೀಣಾದೇವಿ ಸೋನಿ, ಶಿವಾನಂದ ಬಾರಕೇರ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

    ಹೊರ ನಡೆದ ಸದಸ್ಯರು: ಕಾಮಗಾರಿ ಮಂಜೂರಾತಿಗೆ ಅನುಮೋದನೆ ನೀಡಲು ಬಹುಮತಕ್ಕೆ ಹಾಕುವಂತೆ ನಾಗೇಶ ಹುಬ್ಬಳ್ಳಿ ಹೇಳಿದಾಗ, ಅದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಬಿಜೆಪಿ ಸದಸ್ಯರಾದ ಲಿಂಗರಾಜಗೌಡ ಪಾಟೀಲ ಮತ್ತು ಪ್ರಲ್ಹಾದ ಹೊಸಮನಿ ಅವರು ಕಾಂಗ್ರೆಸ್ ಸದಸ್ಯರ ಜೊತೆಗೆ ಸಭೆಯಿಂದ ಹೊರ ನಡೆದರು.

    ಸ್ಥಾಯಿ ಸಮಿತಿಗೆ ನಿರ್ಮಲಾ ಅಧ್ಯಕ್ಷೆ: ಸಾಮಾನ್ಯ ಸಭೆಯಲ್ಲಿ 11 ಸದಸ್ಯರನ್ನು ಒಳಗೊಂಡ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನಾಗಿ ನಿರ್ಮಲಾ ಕೊರ್ಲಹಳ್ಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts