More

    ಮುಂಡರಗಿ ಪುರಸಭೆ 61 ಲಕ್ಷ ಉಳಿತಾಯ ಬಜೆಟ್

    ಮುಂಡರಗಿ: ಪುರಸಭೆಯಲ್ಲಿ 2021-22ನೇ ಸಾಲಿನಲ್ಲಿ 61 ಲಕ್ಷ 35 ಸಾವಿರ ರೂಪಾಯಿಗಳ ಉಳಿತಾಯ ಬಜೆಟ್ ಅನ್ನು ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಬುಧವಾರ ಮಂಡಿಸಿದರು.

    ವಿವಿಧ ಮೂಲಗಳಿಂದ 28 ಕೋಟಿ 74 ಲಕ್ಷ 25 ಸಾವಿರದ 92 ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ 28 ಕೋಟಿ 12 ಲಕ್ಷ 90 ಸಾವಿರದ 92 ರೂಪಾಯಿ ಖರ್ಚು ಅಂದಾಜಿಸಲಾಗಿದ್ದು 61 ಲಕ್ಷ 35 ಸಾವಿರ ರೂಪಾಯಿ ಉಳಿತಾಯವಾಗಲಿದೆ ಎಂದರು.

    ತೆರಿಗೆ ಆದಾಯಗಳಿಂದ 1 ಕೋಟಿ 53 ಲಕ್ಷ 6 ಸಾವಿರ ರೂಪಾಯಿ, ತೆರಿಗೆಯೇತರ ಆದಾಯಗಳಿಂದ 1 ಕೋಟಿ 75 ಲಕ್ಷದ 32 ಸಾವಿರ ರೂಪಾಯಿ, ಎಸ್​ಎಫ್​ಸಿ ಮುಕ್ತ ನಿಧಿ ಅನುದಾನ 1 ಕೋಟಿ 21 ಲಕ್ಷ ರೂಪಾಯಿ, ಎಸ್​ಎಫ್​ಸಿ ವೇತನ ಅನುದಾನ 1 ಕೋಟಿ 60 ಲಕ್ಷ ರೂಪಾಯಿ, ಎಸ್.ಎಫ್.ಸಿ ವಿದ್ಯುತ್ ಅನುದಾನ 1 ಕೋಟಿ 20 ಲಕ್ಷ ರೂಪಾಯಿ, 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನ 2 ಕೋಟಿ 10 ಲಕ್ಷದ 54 ಸಾವಿರ ರೂಪಾಯಿ, ಎಸ್.ಎಫ್.ಸಿ ವಿಶೇಷ ಅನುದಾನ 3 ಕೋಟಿ ರೂ., ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಅನುದಾನ 25 ಲಕ್ಷ ರೂಪಾಯಿಗಳ ಆದಾಯ ನಿರೀಕ್ಷಿಸಲಾಗಿದೆ ಎಂದರು.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಇತರೆ ಹಿಂದುಳಿದ ಜನಾಂಗದ ಕಲ್ಯಾಣ ಕಾರ್ಯಕ್ರಮ, ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ ಮುಕ್ತನಿಧಿ ಅನುದಾನ ಹಾಗೂ ಪುರಸಭೆ ಅನುದಾನದ ಆದಾಯದಿಂದ (ಶೇ. 24.10, ಶೇ.7.25, ಶೇ.5) 46 ಲಕ್ಷ 45 ಸಾವಿರ ರೂಪಾಯಿ ಮೀಸಲಿರಿಸಲಾಗಿದೆ ಎಂದರು.

    ಯಾವುದಕ್ಕೆ ಖರ್ಚು?:

    ಕಾಯಂ ನೌಕರರ ವೇತನ 1 ಕೋಟಿ 38ಲಕ್ಷ 52 ಸಾವಿರ ರೂಪಾಯಿ, ದಿನದೂಲಿ ನೌಕರರ ವೇತನ 96 ಲಕ್ಷದ 97 ಸಾವಿರ ರೂಪಾಯಿ, ಹೊರಗುತ್ತಿಗೆ ನೌಕರರ ಹಾಗೂ ಕಂಪ್ಯೂಟರ್ ಆಪರೇಟರ್ ವೇತನ 25 ಲಕ್ಷದ 30 ಸಾವಿರ ರೂಪಾಯಿ, ಕೆ.ಎಂ.ಆರ್.ಪಿ ಸಿಬ್ಬಂದಿ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ 8 ಲಕ್ಷ 10 ಸಾವಿರ ರೂಪಾಯಿ, ಕಚೇರಿ ವಾಹನ ಬಾಡಿಗೆ, ಪ್ರಿಂಟಿಂಗ್ ಮತ್ತು ಸ್ಟೇಶನರಿ, ಆಡಿಟ್ ವೆಚ್ಚ, ಕಾನೂನು ಸಲಹೆಗಳು, ಜಾಹೀರಾತು ಮತ್ತು ಪ್ರಕಟಣೆ, ದೂರವಾಣಿ ಸಂಪರ್ಕ ವೆಚ್ಚ, ಕಚೇರಿ ವಿದ್ಯುತ್ ವೆಚ್ಚಗಳು, ಕೌನ್ಸಿಲ್​ರ ಗೌರವ ಧನ, ಚುನಾವಣೆ ವೆಚ್ಚ, ವಂತಿಗೆ ಹಾಗೂ ಸಹಾಯಧನ, ಕಚೇರಿ ಪೀಠೋಪಕರಣ ಹಾಗೂ ಗಣಕ ಯಂತ್ರಗಳ ನಿರ್ವಹಣೆ, ಕಾರ್ಯಕ್ರಮ ವೆಚ್ಚಗಳು ಸೇರಿ ಒಟ್ಟು 55 ಲಕ್ಷ 81 ಸಾವಿರ ರೂಪಾಯಿ, ಪಟ್ಟಣದಲ್ಲಿ ನೀರು ಸರಬರಾಜು ನಿರ್ವಹಣೆಗೆ 66 ಲಕ್ಷ 77 ಸಾವಿರ ರೂಪಾಯಿ, ಆರೋಗ್ಯ ಶಾಖೆಗೆ 74 ಲಕ್ಷ 31 ಸಾವಿರ ರೂಪಾಯಿ, ಬೀದಿ ದೀಪಗಳ ನಿರ್ವಹಣೆಗೆ 43ಲಕ್ಷ 47 ಸಾವಿರ ರೂಪಾಯಿ, ಕಟ್ಟಡಗಳು 31ಲಕ್ಷ 46ಸಾವಿರ ರೂಪಾಯಿ, ನಾಗರಿಕ ವಿನ್ಯಾಸಗಳು 3 ಕೋಟಿ 97ಲಕ್ಷದ 43ಸಾವಿರ ರೂಪಾಯಿ, ಯಂತ್ರೋಪಗಳು 8ಲಕ್ಷ 80 ಸಾವಿರ ರೂಪಾಯಿ, ರಸ್ತೆ, ಕಲ್ಲುಹಾಸುಗಳು ಹಾಗೂ ಪಾದಚಾರಿ ಮಾರ್ಗಕ್ಕೆ 1 ಕೋಟಿ 58 ಲಕ್ಷದ 26 ಸಾವಿರ ರೂಪಾಯಿ, ಚರಂಡಿ ಮತ್ತು ಸ್ಲ್ಯಾಬ್​ಗಳು 1 ಕೋಟಿ 49ಲಕ್ಷ 18 ಸಾವಿರ ರೂಪಾಯಿ, ಇತರೆ ಸ್ಥಿರಾಸ್ತಿ 73 ಲಕ್ಷ 44 ಸಾವಿರ ರೂಪಾಯಿ, ಉದ್ಯಾನ 36 ಲಕ್ಷದ 23 ಸಾವಿರ ರೂಪಾಯಿ, ಘನ ತಾಜ್ಯ ನಿರ್ವಹಣೆ 1 ಕೋಟಿ 61ಲಕ್ಷ 32 ಸಾವಿರ ರೂಪಾಯಿಗಳ ಖರ್ಚು ಬರಲಿದೆ ಎಂದರು.

    ಪುರಸಭೆ ವ್ಯಾಪ್ತಿಯಲ್ಲಿ ಬರುವ 23 ವಾರ್ಡ್​ಗಳಲ್ಲಿ ಪ್ರತಿ ವಾರ್ಡ್​ಗೆ 1ಲಕ್ಷ ರೂಪಾಯಿಯಂತೆ 23ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ. ವಸತಿ ರಹಿತ ಬಡವರಿಗೆ ಖರೀದಿಸಿರುವ 25 ಎಕರೆ 21ಗುಂಟೆ (ಆಶ್ರಯ ಲೇಔಟ್) ನಿವೇಶನವನ್ನು ಅಭಿವೃದ್ಧಿ ಪಡಿಸುವುದು. ಪುರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವುದು ಸೇರಿದಂತೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಬಜೆಟ್​ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಪುರಸಭೆ ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ, ಸದಸ್ಯರಾದ ಟಿ.ಬಿ. ದಂಡಿನ, ರಫೀಕ್ ಮುಲ್ಲಾ, ರುಕ್ಮಿಣಿ ಸುಣ್ಣಗಾರ, ವೀಣಾದೇವಿ ಸೋನಿ, ಸುಮಾ ಬಳ್ಳಾರಿ, ಗಂಗಮ್ಮ ಮೋರನಾಳ, ದೇವಕ್ಕ ದಂಡಿನ, ಮುಖ್ಯಾಧಿಕಾರಿ ಎನ್.ಕೆ. ಡೊಂಬರ ಇತರರಿದ್ದರು.

    ಆಶ್ರಯ ಮನೆ ಹಂಚಿಕೆ, ಪ್ರತ್ಯೇಕ ಸಭೆ

    ಆಶ್ರಯ ಮನೆ ಹಂಚಿಕೆ ಪ್ರಕ್ರಿಯೆಯಲ್ಲಿ ನಿರ್ಗತಿಕರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಅನ್ಯಾಯ ಮಾಡಲಾಗಿದೆ. ಆಸ್ತಿ ಇರುವ ಶ್ರೀಮಂತರನ್ನು ಆಶ್ರಯ ಮನೆ ಹಂಚಿಕೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಪಾರದರ್ಶಕವಾಗಿ ಪಟ್ಟಿ ತಯಾರಿಸಿ ಆಶ್ರಯ ಮನೆ ಹಂಚಿಕೆ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದರ ಜತೆಗೆ ನ್ಯಾಯಾಲಯದ ಮೋರೆ ಹೋಗಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ನಾಗರಾಜ ಹೊಂಬಳಗಟ್ಟಿ ಎಚ್ಚರಿಸಿದರು. ಕಾಂಗ್ರೆಸ್ ಸದಸ್ಯ ಸಂತೋಷ ಹಿರೇಮನಿ ದನಿಗೂಡಿಸಿದರು. ಬಿಜೆಪಿ ಸದಸ್ಯರಾದ ಪ್ರಲ್ಹಾದ ಹೊಸಮನಿ, ಲಿಂಗರಾಜಗೌಡ ಪಾಟೀಲ ಮಾತನಾಡಿ, ‘ಆಶ್ರಯ ಮನೆ ಹಂಚಿಕೆ ವಿಚಾರವಾಗಿ ಸದಸ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪುನಃ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು’ ಎಂದರು. ಪ್ರತಿಕ್ರಿಯಿಸಿದ ಅಧ್ಯಕ್ಷೆ ಕವಿತಾ ಅವರು, ಈ ಬಗ್ಗೆ ಆಶ್ರಯ ಕಮಿಟಿ ಅಧ್ಯಕ್ಷರಾದ ಶಾಸಕರ ಗಮನಕ್ಕೆ ತರುವುದರ ಜೊತೆಗೆ ಸಭೆ ನಡೆಸಿ ನಿರ್ಗತಿಕರಿಗೆ ಮನೆ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

    ಸರ್ಕಾರದ ಸುತ್ತೋಲೆ ಪ್ರಕಾರ ಆಸ್ತಿ ತೆರಿಗೆಯ ಪರಿಷ್ಕರಣೆಯಾಗಲಿದೆ. ಮನೆ, ಕಟ್ಟಡಗಳಿಗೆ 8ರಿಂದ 10 ರೂ.ತೆರಿಗೆ ಹೆಚ್ಚಳವಾಗಲಿದೆ. ಪುರಸಭೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನದಿಂದಲೂ ಸಬ್​ರಿಜಿಸ್ಟ್ರಾರ್ ಮಾರುಕಟ್ಟೆ ಮಾರ್ಗಸೂಚಿಯಂತೆ ಶೇ. 0.2ರಷ್ಟು ತೆರಿಗೆ ಸಂಗ್ರಹಿಸಲಾಗುತ್ತದೆ.

    | ಎನ್.ಕೆ. ಡೊಂಬರ, ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts