More

    ಪ್ರಾಂಶುಪಾಲ, ವಾರ್ಡನ್ ಗೆ ಶಾಸಕ ಹೆಬ್ಬಾರ ತರಾಟೆ

    ಮುಂಡಗೋಡ: ಸರ್ಕಾರ ಸಾಕಷ್ಟು ಅನುದಾನ ನೀಡಿದರೂ ಮಕ್ಕಳಿಗೆ ಸಮರ್ಪಕ ಊಟ ಹಾಗೂ ಉಪಾಹಾರ ಏಕೆ ಕೊಡುವುದಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ತಾಲೂಕಿನ ಕರಗಿನಕೊಪ್ಪ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ಅವರನ್ನು ಮಂಗಳವಾರ ತರಾಟೆ ತೆಗೆದುಕೊಂಡರು.
    ಎಲ್ಲ ಮಕ್ಕಳು ಒಂದೇ ಸಮಾನ ಊಟ ಮಾಡುವುದಿಲ್ಲ. ಮಕ್ಕಳಿಗೆ ಹೊಟ್ಟೆ ತುಂಬ ಊಟ, ಉಪಾಹಾರ ಕೊಡಲು ಏನು ಸಮಸ್ಯೆ?. ಮಕ್ಕಳಿಗೆ ಯಾಕೆ ಮೂರು ಇಡ್ಲಿ ಕೊಡುತ್ತೀರಿ. ಹೊಟ್ಟೆ ಹಸಿದುಕೊಂಡು ಅವರು ಶಿಕ್ಷಣ ಕಲಿಯಬೇಕಾ?. ಇಲ್ಲಿರುವ ಬಡ ಮಕ್ಕಳಿಗೆ ಸರಿಯಾಗಿ ಊಟ ಕೊಡಿ, ಇಲ್ಲದಿದ್ದರೆ ಪ್ರಾಂಶುಪಾಲ ಹಾಗೂ ವಾರ್ಡನ್ ಇಬ್ಬರ ಮೇಲೆ ಸೂಕ್ತ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
    ವಸತಿ ಶಾಲೆಯ ಸಮಸ್ಯೆಗಳ ಕುರಿತು ಪತ್ರಿಕೆಗಳಲ್ಲಿ ವರದಿ ಬಂದಿರುವುದನ್ನು ಗಮನಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ತಹಸೀಲ್ದಾರ್ ಶಂಕರ ಗೌಡಿ ಜತೆಗೂಡಿ ಮುರಾರ್ಜಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಕ್ಕಳೊಂದಿಗೆ ಚರ್ಚೆ ನಡೆಸಿದರು. ಸರಿಯಾಗಿ ಊಟ ಹಾಗೂ ಉಪಾಹಾರ ನೀಡುವುದಿಲ್ಲ, ಶೌಚಗೃಹಗಳೆಲ್ಲ ಬ್ಲಾಕ್ ಆಗಿವೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
    ಶೌಚಗೃಹ ವೀಕ್ಷಿಸಿದ ಶಾಸಕರು, ಸಮರ್ಪಕವಾಗಿ ಸ್ವಚ್ಛತೆ ಕಾಪಾಡಬೇಕು ಎಂದು ಪ್ರಾಂಶುಪಾಲರಿಗೆ ಸೂಚಿಸಿದರು. ಬಳಿಕ ವಿದ್ಯಾರ್ಥಿಗಳು ಮಲಗುವ ಕೊಠಡಿಗಳನ್ನು ವೀಕ್ಷಿಸಿದರು. ವಾರ್ಡನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ದೂರು ಬರುತ್ತಿವೆ. ಅವರನ್ನು ತೆಗೆದು ಬೇರೆಯವರನ್ನು ನಿಯೋಜಿಸಿ ಎಂದು ಪ್ರಾಂಶುಪಾಲರಿಗೆ ಸೂಚಿಸಿದರು.
    ವಾರಕ್ಕೆ ಒಂದೆರಡು ಬಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ನೊಡಿಕೊಳ್ಳಬೇಕು ಶಿಕ್ಷಣ ಮಟ್ಟ ಸುಧಾರಿಸಲು ಒಳ್ಳೆಯ ನಿರ್ಣಯ ತೆಗೆದುಕೊಂಡು ನನಗೆ ಮಾಹಿತಿ ನೀಡಬೇಕು. ಶಾಲೆಯ ಉಸ್ತುವಾರಿ ನೋಡಿಕೊಳ್ಳುವಂತೆ ತಹಸೀಲ್ದಾರ್ ಗೌಡಿಗೆ ಶಾಸಕರು ಸೂಚಿಸಿದರು.
    ಅಡುಗೆಯವರಿಂದ ಮಕ್ಕಳಿಗೆ ಊಟದ ವ್ಯವಸ್ಥೆಯಲ್ಲಿ ತೊಂದರೆಯಾಗುತ್ತಿದೆ ಎಂದು ತಿಳಿದು ಬಂದರೆ ಎಲ್ಲರನ್ನೂ ಕೆಲಸದಿಂದ ತೆಗೆದು ಹಾಕಿ ಬೇರೆಯವರನ್ನು ನೇಮಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts