More

    ಮುಂಬಯಿಯಿಂದ ಬಳ್ಳಾರಿಗೆ ಬಂದ ಗರ್ಭಿಣಿ ಸೇರಿ 11 ಜನರಿಗೆ ಕರೊನಾ ಸೋಂಕು ದೃಢ, ಆರು ಜನ ಕಾನ್ಸ್‌ಟೇಬಲ್, 11 ಸಿಬ್ಬಂದಿಗೂ ಕ್ವಾರಂಟೈನ್

    ಬಳ್ಳಾರಿ: ಮುಂಬಯಿಯಿಂದ ಜಿಲ್ಲೆಗೆ ಆಗಮಿಸಿರುವ 11 ಜನರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರಲ್ಲಿ ಎಂಟು ತಿಂಗಳ ಗರ್ಭಿಣಿ, ಒಂಬತ್ತು ತಿಂಗಳ ಮಗುವಿನ ತಾಯಿ ಹಾಗೂ ಮಂಗಳಮುಖಿ ಇದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

    ಮೇ 6ರಂದು 65 ಜನರು ರೈಲಿನ ಮೂಲಕ ಮುಂಬಯಿಯಿಂದ ಗುಂತಕಲ್‌ಗೆ ಆಗಮಿಸಿದ್ದರು. ಗುಂತಕಲ್ ಆಡಳಿತದ ಮಾಹಿತಿ ಮೇರೆಗೆ 65 ಜನರನ್ನು ಬಸ್‌ನಲ್ಲಿ ಕರೆದುಕೊಂಡು ಬಂದು ನಗರದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಮೂರು ಕುಟುಂಬಗಳ 11 ಜನರಲ್ಲಿ ಕರೊನಾ ವೈರಸ್ ಪತ್ತೆಯಾಗಿದೆ. ಸೋಂಕಿತರಲ್ಲಿ ಏಳು ಜನ ಮಹಿಳೆಯರು, ಮೂವರು ಪುರುಷರು ಹಾಗೂ ಒಬ್ಬ ಮಂಗಳಮುಖಿ ಇದ್ದಾರೆ. ಒಂಬತ್ತು ತಿಂಗಳ ಮಗುವಿನ ತಾಯಿಗೂ ಸೋಂಕು ತಗುಲಿದ್ದು, ಮಗುವನ್ನು ಕೂಡ ಕರೊನಾ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದರು.

    ಸೋಂಕಿತರಲ್ಲಿ ಬಳ್ಳಾರಿ ನಗರದ ಇಬ್ಬರು, ತಾಲೂಕಿನ ರೂಪನಗುಡಿಯ ನಾಲ್ವರು ಹಾಗೂ ಚಾಗನೂರಿನ ಮೂವರು ಹಾಗೂ ಜಿ.ನಾಗೇನಹಳ್ಳಿಯ ಇಬ್ಬರಿದ್ದಾರೆ. ಒಂಬತ್ತು ತಿಂಗಳ ಮಗು ಅಜ್ಜ, ಅಜ್ಜಿ ಬಳಿ ಇದೆ. ಕಿವಿ, ಮೂಗು, ಗಂಟಲು ತಜ್ಞರ ನೆರವಿನೊಂದಿಗೆ ಮಗುವಿನ ಗಂಟಲು ದ್ರವವನ್ನು ತೆಗೆಯಲಾಗುವುದು. ಸೋಂಕಿತರು ಮುಂಬಯಿಯ ಛತ್ರಪತಿ ಶಿವಾಜಿ ಟರ್ಮಿನಸ್ ಪ್ರದೇಶದ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.

    ಸೋಂಕಿತರು ಮನೆಗೆ ತೆರಳಿಲ್ಲ ಹಾಗೂ ಹೊರಗೆ ಸಂಚರಿಸಿಲ್ಲ. ಇದರಿಂದಾಗಿ ಅವರ ಮೂಲ ವಾಸಸ್ಥಳವನ್ನು ಕಂಟೇನ್ಮೆಂಟ್ ಎಂದು ಘೋಷಿಸುವುದಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿದ್ದ 49 ಜನರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಲಾಗಿದೆ. ಹಾಸ್ಟೆಲ್‌ನಲ್ಲಿ ಸೋಂಕಿತರು ಬಳಕೆ ಮಾಡುತ್ತಿದ್ದ ಬಾತ್‌ರೂಮ್ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಆರು ಜನ ಕಾನ್ಸ್‌ಟೇಬಲ್ ಹಾಗೂ 11 ಇತರ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದರು. ಎಸ್ಪಿ ಸಿ.ಕೆ.ಬಾಬಾ, ಡಿಎಚ್‌ಒ ಡಾ.ಎಚ್.ಎಲ್.ಜನಾರ್ದನ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts