More

    ಗುರುಪುರ ಕಂಬಳ ಸಿದ್ಧತೆ ಪೂರ್ಣ: ಏ.12ರಂದು ಜಾನುವಾರು ಪ್ರದರ್ಶನ

    ಧನಂಜಯ ಗುರುಪುರ

    ಕೆಲವೇ ದಿನಗಳ ಅಂತರದಲ್ಲಿ ಗುರುಪುರದಲ್ಲೇ ಪ್ರಥಮ ಬಾರಿ ‘ಕಂಬಳ ಸಂಭ್ರಮ’ ಜರುಗಲಿದೆ. ಸುಮಾರು 150 ವರ್ಷಗಳ ಇಲ್ಲಿನ ಇತಿಹಾಸ ಕಂಡಾಗ ಗುರುಪುರ ಆಸುಪಾಸಿನ ಏಳು ಕಡೆ ಪೂಪಾಡಿ ಕಂಬಳ, ಬಾರೆಪಾಡಿ ಕಂಬಳ ಹೀಗೆ ಸಾಂಪ್ರದಾಯಿಕ ಕಂಬಳ ನಡೆಯುತ್ತಿತ್ತು. ಕಾರಣಾಂತರದಿಂದ ಉಳಿದ ಕಂಬಳಗಳು ನಿಂತಿದ್ದರೆ, ಅಡ್ಡೂರು ಗ್ರಾಮದ ಬೆಳ್ಳೂರುಗುತ್ತಿನಲ್ಲಿ ಈ ವರ್ಷ ಕೊನೆಯದಾಗಿ ಸಾಂಪ್ರದಾಯಿಕ ಬಾರೆಪಾಡಿ ಕಂಬಳ ನಡೆದಿತ್ತು.

    ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ಇನ್ನು ಆ ಕಂಬಳವೂ ನಡೆಯುವುದಿಲ್ಲ. ಆದರೆ ಈ ಬಾರಿ ಏಪ್ರಿಲ್ 12, 13ರಂದು ಗುರುಪುರದ ಮಾಣಿಬೆಟ್ಟುಗುತ್ತಿನಲ್ಲಿ ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ ಹೊಸದಾಗಿ ನಿರ್ಮಿಸಿರುವ ಮೂಳೂರು-ಅಡ್ಡೂರು ಜೋಡುಕರೆಯಲ್ಲಿ ಆಧುನಿಕ ಕಂಬಳ ನಡೆಯಲಿದೆ.

    ಕರೆ ನಿರ್ಮಾಣದಲ್ಲಿ ನುರಿತ ಸರಪಾಡಿ ಅಪ್ಪಣ್ಣ ಅವರ ಮಾರ್ಗದರ್ಶನದಂತೆ ಗುರುಪುರ ಮಾಣಿಬೆಟ್ಟುಗುತ್ತು ಮತ್ತು ಬೆಳ್ಳೂರುಗುತ್ತಿನ ಮೂಳೂರು-ಅಡ್ಡೂರು ಗ್ರಾಮಗಳ ಗಡಿ ಪ್ರದೇಶದ ವಿಶಾಲ ಗದ್ದೆಯಲ್ಲಿ ಸುಸಜ್ಜಿತ ಜೋಡುಕರೆ ನಿರ್ಮಿಸಲಾಗಿದೆ. ಇದರಲ್ಲಿ ಮಾ.11ರಂದು ಪ್ರಾಯೋಗಿಕ ನೆಲೆಯಲ್ಲಿ ಕುದಿ ಕಂಬಳ ನಡೆಸಲಾಗಿದ್ದು, 12 ಜೋಡಿ ಕೋಣ ಓಡಿಸಲಾಗಿದೆ. ಕರೆಗೆ ಪಕ್ಕದಲ್ಲಿ, ಕೇವಲ 100 ಮೀಟರ್ ಅಂತರದಲ್ಲಿ ವಿಸ್ತರಣೆಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್) 169ನಿಂದ ಕಂಬಳಕ್ಕೆ ನೇರ ರಸ್ತೆ ಸಂಪರ್ಕ ಸಾಧ್ಯವಾಗಿದೆ. ನೀರಿನಿಂದ ಆವೃತ್ತವಾಗಿರುವ ಇಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದು. ಕರೆಯ ಆಸುಪಾಸಿನ ಕೆಲವು ಗದ್ದೆಗಳನ್ನು ಸಮತಟ್ಟು ಮಾಡುವ ಕೆಲಸ ನಡೆಯುತ್ತಿದ್ದು, ಕೋಣಗಳಿಗೆ ಬಿಡಾರ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಕಂಬಳ ನಡೆಯುವಲ್ಲಿಗೆ ಒಂದು ಶಾಶ್ವತ ರಸ್ತೆ ಇದ್ದರೆ, ಹೆದ್ದಾರಿ ಪಕ್ಕದ ರಸ್ತೆ ಹೊರತುಪಡಿಸಿ ಮತ್ತೊಂದು ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಸುಮಾರು 30ರಿಂದ 40 ಎಕರೆ ವಿಶಾಲ ಪ್ರದೇಶದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

    ಗುರುಪುರ ಕಂಬಳ ಸಂಭ್ರಮದಲ್ಲಿ ಕೆಲವು ಹೊಸ ವಿಚಾರಗಳ ಬಗ್ಗೆ ಆಯೋಜಕರು ಚಿಂತನೆ ನಡೆಸಿದ್ದಾರೆ. ಇಲ್ಲಿ ನಡೆಯುತ್ತಿರುವ ಪ್ರಥಮ ಆಧುನಿಕ ಜೋಡುಕರೆ ಕಂಬಳ ಇದಾಗಿದ್ದು, ಕಂಬಳಕ್ಕೆ ಆಗಮಿಸುವವವರಿಗೆ ಏ.12ರಂದು ಮಧ್ಯಾಹ್ನ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ. ಹಿಂದೆ ಕಂಬಳದಲ್ಲಿ ತೊಡಗಿಸಿಕೊಂಡಿದ್ದ, ಈಗ ಅಶಕ್ತರಾಗಿರುವ ವ್ಯಕ್ತಿಗಳಿಗೆ ಸಹಾಯಧನ ಮತ್ತು ಐವರಿಗೆ ಗಾಲಿಕುರ್ಚಿ ವಿತರಣೆ, ಜಾನುವಾರು ಪ್ರದರ್ಶನ ಮತ್ತು ಸ್ಥಳೀಯ ಸರ್ಕಾರಿ ಹೋಮಿಯೋಪಥಿ ಆಸ್ಪತ್ರೆಯ ನುರಿತ ವೈದ್ಯರಿಂದ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಕಂಬಳ ಸಮಿತಿಗೆ ಸಹಕಾರ

    ಗುರುಪುರ ಕಂಬಳ ಸಂಭ್ರಮ ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್‌ನ ಗೌರವಾಧ್ಯಕ್ಷ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತು ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ) ಪೆಲತ್ತಡಿ ಮಾರ್ಗದರ್ಶನದಲ್ಲಿ, ಜಾತ್ಯತೀತ ನೆಲೆಯಲ್ಲಿ ನಡೆಯಲಿದೆ. ಅಧ್ಯಕ್ಷರಾಗಿ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಮತ್ತು ವ್ಯವಸ್ಥಾಪಕರಾಗಿ ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಪದಾಧಿಕಾರಿಗಳಾಗಿ ಸುರೇಂದ್ರ ಕಂಬಳಿ ಅಡ್ಯಾರುಗುತ್ತು, ಜಯಶೀಲ ಅಡ್ಯಂತಾಯ ಅಡ್ಯಾರುಗುತ್ತು, ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು, ಹರೀಶ್ ಭಂಡಾರಿ ಬಂಗ್ಲೆಗುಡ್ಡೆ ಗುರುಪುರ, ಬಾಲಕೃಷ್ಣ ಪೂಜಾರಿ ಬರಿಪಟ್ಲ, ಯಶವಂತ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು, ಜಗದೀಶ ಆಳ್ವ ಕಾರಮೊಗರು, ಪುರುಷೋತ್ತಮ ಮಲ್ಲಿ ದೋಣಿಂಜೆಗುತ್ತು, ಜಗದೀಶ ಶೆಟ್ಟಿ ಮಾಣಿಬೆಟ್ಟುಗುತ್ತು, ಕಂಬಳ ಸಮಿತಿಯ ಇತರ ಪದಾಧಿಕಾರಿಗಳು ಮತ್ತು ಸದಸ್ಯರು, ಊರ-ಪರವೂರ ಹಿತೈಷಿಗಳು ಸಹಕರಿಸಲಿದ್ದಾರೆ.

    ಜಿಲ್ಲಾ ಕಂಬಳ ಸಮಿತಿಯ ಪೂರ್ಣ ಸಹಕಾರದಿಂದ ಗುರುಪುರ ಕಂಬಳ ನಡೆಯಲಿದೆ. ಊರ, ಪರವೂರ ದಾನಿಗಳ ಸಹಕಾರ ಮರೆಯುವಂತಿಲ್ಲ. ಶೇ.90ರಷ್ಟು ಕರೆ ನಿರ್ಮಾಣ ಮತ್ತು ಇತರ ಅಗತ್ಯ ಕೆಲಸಗಳು ಮುಗಿದಿವೆ. ಮಾ.11ರಂದು ಕುದಿ ಕಂಬಳ ಯಶಸ್ವಿಯಾಗಿ ನಡೆದಿದೆ. ಏ.12ರಂದು ಕಂಬಳದ ಸಂಭ್ರಮ ವೀಕ್ಷಿಸಲು ಎಲ್ಲರೂ ಕಾತರರಾಗಿದ್ದಾರೆ. ಇಲ್ಲಿನ ಕಂಬಳ ಹಲವು ವಿಶೇಷಗಳೊಂದಿಗೆ ನಡೆಯಲಿದೆ. ಹೆದ್ದಾರಿಗೆ ಪಕ್ಕದಲ್ಲಿ ನಡೆಯುತ್ತಿರುವ ಈ ಕಂಬಳಕ್ಕೆ ಅಸಂಖ್ಯಾತ ಪ್ರೇಕ್ಷಕರು ಆಗಮಿಸುವುದನ್ನು ನಿರೀಕ್ಷಿಸಲಾಗಿದೆ. ಹಾಗಾಗಿ ಕಂಬಳ ನಿರೀಕ್ಷೆಗೂ ಮೀರಿ ಯಶಸ್ಸು ಕಾಣಲಿದೆ.

    -ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು
    ಅಧ್ಯಕ್ಷ, ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್

    ಗುರುಪುರದಲ್ಲಿ ಆಧುನಿಕ ಕಂಬಳ ನಡೆಸಬೇಕೆಂದು 15 ವರ್ಷಗಳ ಹಿಂದಿನಿಂದಲೂ ಯೋಚಿಸುತ್ತಿದ್ದೆವು. ಹೊಸ ಕಂಬಳ ಆಯೋಜನೆಯ ಪ್ರತಿಯೊಂದು ವಿಷಯದಲ್ಲೂ ಎಲ್ಲ ಕಡೆಯಿಂದ ಅಭೂತಪೂರ್ವ ಬೆಂಬಲ, ಸಹಕಾರ ಲಭಿಸಿದೆ. ಪ್ರಕೃತಿಯ ಮಡಿಲಲ್ಲಿ ನಡೆಯಲಿರುವ ಕಂಬಳ ಇದಾಗಿದ್ದು, ಇಲ್ಲಿ ಜಾನುವಾರು ಅಥವಾ ಜನರಿಗೆ ಯಾವುದೇ ಸಮಸ್ಯೆ ಎದುರಾಗದು. ಈಗಾಗಲೇ 20 ಲಕ್ಷ ರೂ. ವ್ಯಯಿಸಲಾಗಿದ್ದು, ಹೊಸ ಕಂಬಳಕ್ಕೆ ಅಂದಾಜು 50 ಲಕ್ಷ ರೂ. ವೆಚ್ಚವಾಗಲಿದೆ. ಸಂತೆ, ವ್ಯಾಪಾರ-ವಹಿವಾಟು ನಡೆಯಲಿದೆ. ಈ ಕಂಬಳಕ್ಕೆ ದೈವ-ದೇವರ ಅನುಗ್ರಹವೂ ಇದೆ.

    -ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು
    ಗುರುಪುರ ಕಂಬಳ ಸಂಭ್ರಮ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts