More

    ನೂತನ ಶುದ್ಧೀಕರಣ ಕೇಂದ್ರ

    ಮಂಗಳೂರು: ಮಂಗಳೂರು ಮಹಾನಗರ ಬಹುಭಾಗದ ಇಡೀ ಕೊಳಚೆ ನೀರು ಸಂಸ್ಕರಿಸುವ ಮುಲ್ಲಕಾಡು ಒಳಚರಂಡಿ ನೀರು ಸಂಸ್ಕರಣ ಘಟಕ (ಎಸ್‌ಟಿಪಿ)ದಲ್ಲಿ3 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಿಸಿದ ನೂತನ ನೀರು ಸಂಗ್ರಹಾಗಾರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಶೀಘ್ರ ಹೊಸ ಸಂಗ್ರಹಗಾರ ಬಳಕೆಗೆ ಸಿದ್ಧವಾಗಲಿದೆ.

    ಇದು ಮನೆ, ವಾಸಸ್ಥಳ ಪಕ್ಕದಲ್ಲಿ ಹರಿಯುತ್ತಿರುವ ದುರ್ನಾತ ಹರಡುವ ಕೊಳಚೆ ನೀರಿನಿಂದ ನೆಮ್ಮದಿ ಕಳೆದುಕೊಂಡಿರುವ ನಗರದ ಮುಲ್ಲಕಾಡು ಹಾಗೂ ಆಸುಪಾಸಿನ ಪ್ರದೇಶಗಳ ಜನರಿಗೆ ಸಮಾಧಾನ ತರುವ ಸುದ್ದಿ.
    ಏಕೆಂದರೆ, ಮುಲ್ಲಕಾಡು ಎಸ್‌ಟಿಪಿಯಲ್ಲಿ ಸಂಸ್ಕರಣೆಯಾಗುವ ನಿರ್ದಿಷ್ಟ ಪ್ರಮಾಣದ ನೀರನ್ನು ಕೊಳವೆ ಮೂಲಕ ಎಸ್‌ಇಜೆಡ್ ಘಟಕದ ಎಂಆರ್‌ಪಿಎಲ್‌ಗೆ ಕಳುಹಿಸಲಾಗುತ್ತಿದೆ. ದಿನದ ಬಳಕೆ ಬಳಿಕವೂ ಹೆಚ್ಚುವರಿಯಾಗಿ ಉಳಿಯುವ ನೀರನ್ನು ಘಟಕದಿಂದ ಹೊರಗೆ ತೆರೆದ ಚರಂಡಿಯಲ್ಲಿ ಬಿಡಲಾಗುತ್ತದೆ. ಹೀಗೆ ಬಿಡುಗಡೆಯಾದ ನೀರು ಮುಲ್ಲಕಾಡು-ಶಂಕರನಗರ-ಉರುಂದಾಡಿ-ನಾಲ್ಕನೇ ಮೈಲ್ ಮಾರ್ಗ ಮೂಲಕ ಕಡಲು ಸೇರುತ್ತಿದೆ.

    ಪೂರ್ಣ ಪ್ರಮಾಣದ ನೀರು ಬಳಕೆ: ಈ ನೀರು ಸಾಗುವ ದಾರಿ ಜನವಸತಿಯಿಂದ ಕೂಡಿದ್ದು, ಕೆಟ್ಟ ವಾಸನೆಯಿಂದ ಮನೆಯಿಂದ ಹೊರಗೆ ಓಡಾಡುವುದು ಕೂಡ ಕಷ್ಟವಾಗಿದೆ. ಚರಂಡಿ ಹೂಳೆತ್ತುವ ಕಾಮಗಾರಿ ಸರಿಯಾಗಿ ನಡೆಯದೆ ಕೊಳಚೆ ನೀರು ದಾರಿ ನಡುವೆ ಅಲ್ಲಲ್ಲಿ ಶೇಖರಣೆಗೊಂಡು ಸಮಸ್ಯೆ ತೀವ್ರತೆ ಹೆಚ್ಚಿಸಿದೆ ಎನ್ನುವುದು ಈ ಪ್ರದೇಶದ ಜನರ ದೀರ್ಘ ಕಾಲದ ಆಕ್ಷೇಪ.
    ಎಸ್‌ಟಿಪಿ ವ್ಯವಸ್ಥಾಪಕರ ಭರವಸೆಯನ್ನು ನಂಬುವುದಾದರೆ ಹೊಸ ಸಂಗ್ರಹಾಗಾರ ಬಳಕೆ ಆರಂಭವಾದ ಬಳಿಕ ಘಟಕದ ಹೆಚ್ಚುವರಿ ನೀರನ್ನು ಹೊರಗೆ ಬಿಡುವ ಆವಶ್ಯಕತೆ ಇರುವುದಿಲ್ಲ. ಆ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗುವುದು.

    ನೀರು ಹೊರಬಿಡುವಂತಿಲ್ಲ: 2014ರಲ್ಲಿ ಮುಲ್ಲರಕಾಡು ಒಳಚರಂಡಿ ನೀರು ಸಂಸ್ಕರಣ ಘಟಕದ ಜವಾಬ್ದಾರಿಯನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಹೊಸ ಸಂಸ್ಥೆ ಪಡೆದುಕೊಂಡ ಸಂದರ್ಭ ಹೊಸ ನಿರ್ವಹಣಾ ಸಂಸ್ಥೆ ಹಾಗೂ ಪಾಲಿಕೆ ಮಾಡಿಕೊಂಡಿರುವ ಒಪ್ಪಂದ ಪ್ರಕಾರ ಘಟಕದ ನೀರನ್ನು ತೆರೆದ ಪ್ರದೇಶದಲ್ಲಿ ಬಿಡುವಂತೆಯೇ ಇಲ್ಲ. ಬದಲಾಗಿ ಘಟಕದಲ್ಲಿ ಶುದ್ಧೀಕರಿಸಿದ ನೀರನ್ನು ನಿರ್ವಹಣಾ ಸಂಸ್ಥೆಯೇ ಪೂರ್ಣ ಪ್ರಮಾಣದಲ್ಲಿ ಬಳಸಬೇಕು.
    ಹೊಸ ಸಂಗ್ರಹಣಾಗಾರದ ಉದ್ದೇಶ ಈಡೇರಿದರೆ ನಿರ್ವಹಣಾ ಸಂಸ್ಥೆ ಹಾಗೂ ಪಾಲಿಕೆ ಮಾಡಿಕೊಂಡಿದ್ದ ಒಪ್ಪಂದ ಪೂರ್ಣ ಪ್ರಮಾಣದಲ್ಲಿ ಈಡೇರಿದಂತಾಗುತ್ತದೆ.

    ದುರ್ನಾತ ನಿಲ್ಲುವುದೇ?
    ಪ್ರಸ್ತುತ ಎಸ್‌ಟಿಪಿ ಇರುವ ಮುಲ್ಲಕಾಡು ಪರಿಸರದ ಸುಮಾರು ಎರಡು ಕಿ.ಮೀ. ದೂರ ದುರ್ನಾತ ಹರಡುತ್ತಿದೆ. ಘಟಕದಲ್ಲಿ ಸಂಸ್ಕರಣೆಗೊಂಡ ಹೆಚ್ಚುವರಿ ನೀರು ಹೊರಗೆ ತೆರೆದ ಚರಂಡಿಯಲ್ಲಿ ಹೊರಬಿಡುವುದು ನಿಂತ ಬಳಿಕ ಕೂಡ ಪರಿಸರದಲ್ಲಿ ಹಬ್ಬಿದ ಕೆಟ್ಟ ವಾಸನೆ ಪೂರ್ಣ ನಿಲ್ಲುವುದು ಅನುಮಾನ. ಮುಲ್ಲಕಾಡಿನಲ್ಲಿ ಇರುವುದು ಗೃಹಬಳಕೆಯ ಒಳಚರಂಡಿ ನೀರು ಸಂಸ್ಕರಣ ಘಟಕ. ಕೈಗಾರಿಕೆ ಬಳಕೆಯ ಘಟಕ ಅಲ್ಲ. ದುರಾದೃಷ್ಟವೆಂದರೆ ಕೈಗಾರಿಕೆಗಳು, ಆಸ್ಪತ್ರೆ ಮತ್ತಿತರ ಅಪಾಯಕಾರಿ ಕೇಂದ್ರಗಳ ಒಳಚರಂಡಿ ನೀರಿನ ಸಂಪರ್ಕವನ್ನು ಕೂಡ ಮುಲ್ಲಕಾಡು ಘಟಕಕ್ಕೆ ಒದಗಿಸಲಾಗಿದೆ. ಇದರಿಂದ ಇದು ಸಂಸ್ಕರಣೆಗೊಳ್ಳುವ ಸಂದರ್ಭ ಹೆಚ್ಚಿನ ವಾಸನೆ ಪರಿಸರದಲ್ಲಿ ಹರಡುತ್ತದೆ. ಕೈಗಾರಿಕೆಗಳಿಗೆ ಪ್ರತ್ಯೇಕ ಘಟಕ ನಿರ್ಮಿಸಿದರೆ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎನ್ನುವುದು ತಜ್ಞರ ಅಭಿಪ್ರಾಯ.

    ಮುಲ್ಲಕಾಡು ಎಸ್‌ಟಿಪಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ 3 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಿಸಿದ ನೀರು ಸಂಗ್ರಹಾಗಾರದ ಕಾಮಗಾರಿ ಶೀಘ್ರ ಮುಗಿಯಲಿದ್ದು, ತಿಂಗಳೊಳಗೆ ಇದು ಕಾರ್ಯಾರಂಭಿಸಲಿದೆ. ಪ್ರಸ್ತುತ ದಿನಂಪ್ರತಿ 2 ಎಂಎಲ್‌ಡಿಯಷ್ಟು ನೀರು ಉಳಿಯುತ್ತಿದ್ದು, ಸಂಗ್ರಹಾಗಾರದಲ್ಲಿ ಸಂಗ್ರಹಿಸುವ ನೀರನ್ನು ಅಗತ್ಯಕ್ಕೆ ತಕ್ಕಂತೆ ಕಂಪನಿಗಳಿಗೆ ಬಿಡುಗಡೆ ಮಾಡಬಹುದು. ಭವಿಷ್ಯದ ದೃಷ್ಟಿಯಿಂದ ಸಂಗ್ರಹಾಗಾರದ ಸಾಮರ್ಥ್ಯ ಹೆಚ್ಚಿಸಲಾಗಿದೆ.
    ಪುಂಡಲೀಕ ಶೆಣೈ, ಮ್ಯಾನೇಜರ್. ಮುಲ್ಲರಕಾಡು ಎಸ್‌ಟಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts